ಹಾವೇರಿ: ‘ಮಹಾರಾಷ್ಟ್ರದಲ್ಲಿ ಜನರ ಮನ ಗೆದ್ದಿರುವ ಶಿವಸೇವಾ ಪಕ್ಷವನ್ನು ಕರ್ನಾಟಕದಲ್ಲೂ ಸಂಘಟಿಸಲಾಗುತ್ತಿದ್ದು, ಈಗಾಗಲೇ ಎಂಟು ಜಿಲ್ಲೆಗಳಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಮುಂಬರುವ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾ.ಪಂ., ತಾ.ಪಂ., ಜಿ.ಪಂ. ಚುನಾವಣೆಯಲ್ಲಿ ಶಿವಸೇವಾ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು’ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ ಕುಲಕರ್ಣಿ ತಿಳಿಸಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿಂದೂ ವಿರೋಧಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆದು, ಜನಸಾಮಾನ್ಯರಿಗೆ ಸುಭದ್ರ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ನೀಡಲು ಶಿವಸೇನಾ ಪಕ್ಷವನ್ನು ಸಂಘಟಿಸಲಾಗುತ್ತಿದೆ’ ಎಂದರು.
‘ಹಾವೇರಿ, ಯಾದಗಿರಿ, ರಾಯಚೂರು, ಕಲಬುರಗಿ, ಬೀದರ್, ವಿಜಯಪುರ, ಬಾಗಲಕೋಟೆ, ಧಾರವಾಡ, ಬೆಂಗಳೂರು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಈಗಾಗಲೇ ಶಿವಸೇನಾ ಪಕ್ಷದ ಕಾರ್ಯಚಟುವಟಿಕೆ ಆರಂಭವಾಗಿದೆ. ಮುಂಬರುವ ದಿನಗಳಲ್ಲಿ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಪದಾಧಿಕಾರಿಗಳನ್ನು ನೇಮಿಸಲಾಗುವುದು. ಇದಕ್ಕಾಗಿ ರಾಜ್ಯ ಪ‍್ರವಾಸ ಆರಂಭಿಸಲಾಗಿದೆ’ ಎಂದು ಹೇಳಿದರು.
‘ಕೇಂದ್ರ ಹಾಗೂ ಮಹಾರಾಷ್ಟ್ರದಲ್ಲಿ ಬಿಜೆಪಿ ಜೊತೆಗೆ ಶಿವಸೇನಾ ಪಕ್ಷ ಮೈತ್ರಿ ಹೊಂದಿದೆ. ಕರ್ನಾಟಕದಲ್ಲೂ ಇಂಥ ಮೈತ್ರಿ ಬಗ್ಗೆ ಪಕ್ಷದ ಮುಖಂಡರೇ ತೀರ್ಮಾನ ತೆಗೆದುಕೊಳ್ಳುತ್ತಾರೆ. ಬಿಜೆಪಿಯವರು ಬಂದರೆ ಸ್ವಾಗತಿಸುತ್ತೇವೆ. ಬರದಿದ್ದರೆ, ಸ್ವತಂತ್ರವಾಗಿ ಚುನಾವಣೆ ಎದುರಿಸಲು ಶಿವಸೇನಾ ಪಕ್ಷ ಸಿದ್ಧವಿದೆ’ ಎಂದರು.
‘ಕಾಂಗ್ರೆಸ್ ಪಕ್ಷದ ದುರಾಡಳಿತದಿಂದ ಜನರು ಬೇಸತ್ತಿದ್ದಾರೆ. ಸರ್ಕಾರಿ ನೌಕರರಿಗೆ ಸಂಬಳ ನೀಡಲು ಸಹ ಹಣವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಈ ಸರ್ಕಾರದ ಅವಧಿಯಲ್ಲಿ ಹಿಂದೂಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಸರ್ವಜನಾಂಗದ ಶಾಂತಿಯ ತೋಟವೆಂದು ಜಪಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಒಂದೇ ಕೋಮಿನ ಜನರ ಪರವಾಗಿ ಆಡಳಿತ ನಡೆಸುತ್ತಿದ್ದಾರೆ. ಇದರ ವಿರುದ್ಧ ಜನರು ತಿರುಗಿಬೀಳುವ ಕಾಲ ಸನ್ನಿಹಿತವಾಗಿದೆ. ಶಿವಸೇನಾ ಪಕ್ಷವು ಸಹ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಲು ಸಜ್ಜಾಗುತ್ತಿದೆ’ ಎಂದು ಹೇಳಿದರು.
‘ಬಾಳಸಾಹೇಬ್ ಠಾಕ್ರೆ ಅವರ ಆಶಯದಂತೆ ಏಕನಾಥ್ ಶಿಂಧೆ ನೇತೃತ್ವದಲ್ಲಿ ಶಿವಸೇನಾ ಪಕ್ಷವು ಕರ್ನಾಟಕದಲ್ಲಿ ವೇಗವಾಗಿ ವಿಸ್ತರಿಸುತ್ತಿದೆ. ಪಕ್ಷದ ಅಧ್ಯಕ್ಷರನ್ನಾಗಿ ಸಿದ್ದಲಿಂಗ ಸ್ವಾಮೀಜಿಯವರನ್ನು ನೇಮಿಸಲಾಗಿದ್ದು, ಅವರ ನೇತೃತ್ವದಲ್ಲಿ ಪಕ್ಷದ ಸಂಘಟನೆ ಶುರುವಾಗಿದೆ’ ಎಂದರು.
‘ರಾಜ್ಯದಲ್ಲಿ ಅತೀವೃಷ್ಠಿಯಿಂದ 7 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದೆ. ಸಾವಿರಾರೂ ಮನೆಗಳು ಬಿದ್ದಿದ್ದು, ನೂರಾರು ಪಶುಗಳು ಮೃತಪಟ್ಟಿವೆ. ಹಾನಿಯಾದ ಕೃಷಿ ಭೂಮಿಗೆ ಎಕರೆಗೆ ₹ 25,000, ತೋಟಗಾರಿಕೆ ಬೆಳೆಗೆ ಎಕರೆಗೆ ₹ 50,000 ಪರಿಹಾರ ನೀಡಬೇಕು. ಮನೆ ಬಿದ್ದವರಿಗೆ ₹ 5 ಲಕ್ಷ, ಮೃತಪಟ್ಟ ಪಶು ವಾರಸುದಾರರಿಗೆ ₹ 1 ಲಕ್ಷ ಪರಿಹಾರ ನೀಡಬೇಕು’ ಎಂದು ಅವರು ಆಗ್ರಹಿಸಿದರು.
ಶಿವಸೇನಾ ಪಕ್ಷದ ರಾಜ್ಯ ವಕ್ತಾರ ಎಸ್. ಭಾಸ್ಕರನ್, ಸಂಘಟನಾ ಕಾರ್ಯದರ್ಶಿ ಅಮರನಾಥ್, ರಾಜ್ಯ ಕಾರ್ಯದರ್ಶಿ ಹರೀಶ್, ಹಾವೇರಿ ಜಿಲ್ಲಾ ಪ್ರಮುಖ ಲೋಕೇಶ್ ಪತ್ರಿಕಾಗೋಷ್ಠಿಯಲ್ಲಿದ್ದರು.
ಬಿಜೆಪಿಯಿಂದ ಅಸಮಾಧಾನಗೊಂಡಿರುವ ಹಲವು ಮುಖಂಡರು ಶಿವಸೇನಾ ಪಕ್ಷ ಸೇರಲು ಉತ್ಸುಹಕರಾಗಿದ್ದಾರೆ. ಈ ಬಗ್ಗೆ ಮಾತುಕತೆ ನಡೆಯುತ್ತಿದೆ.– ಗಂಗಾಧರ ಕುಲಕರ್ಣಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಸೇನಾ ಪಕ್ಷ
ಕಾಡಸಿದ್ದೇಶ್ವರ ಸ್ವಾಮೀಜಿಗೆ ಅವಮಾನ
‘ಸಾವಯವ ಕೃಷಿ ಪದ್ಧತಿಯನ್ನು ಪ್ರಚಾರ ಮಾಡುತ್ತ ಯುವಜನತೆಯಲ್ಲಿ ಕೃಷಿ ಜಾಗೃತಿ ಮೂಡಿಸುತ್ತಿರುವ ಕನ್ಹೇರಿಯ ಕಾಡಸಿದ್ದೇಶ್ವರ ಸ್ವಾಮೀಜಿಯವರಿಗೆ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ಪ್ರವೇಶ ನಿರ್ಬಂಧಿಸಲಾಗಿದೆ. ಕಾಂಗ್ರೆಸ್ ಸರ್ಕಾರ ಸ್ವಾಮೀಜಿ ಅವಮಾನ ಮಾಡಿದೆ. ಈ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕು’ ಎಂದು ಗಂಗಾಧರ ಕುಲಕರ್ಣಿ ಆಗ್ರಹಿಸಿದರು.
‘ರಾಷ್ಟ್ರ ಜಾಗೃತಿ ಹಾಗೂ ಸಾಮಾಜಿಕ ಕೆಲಸಗಳ ಮೂಲಕ ಇಡೀ ಜಗತ್ತಿನಲ್ಲಿ ಹೆಸರು ಮಾಡಿರುವ ರಾಷ್ಟ್ರೀಯ ಸ್ವಯಂಸೇವಕ (ಆರ್‌ಎಸ್‌ಎಸ್) ಸಂಘಟನೆ ನೂರು ವರ್ಷದ ಸಂಭ್ರಮದಲ್ಲಿದೆ. ಇಂಥ ಸಂಘಟನೆಯನ್ನು ನಿಷೇಧಿಸಲು ಕಾಂಗ್ರೆಸ್ ಸರ್ಕಾರ ಯೋಚಿಸುತ್ತಿದ್ದು ಇದರ ವಿರುದ್ಧ ನಮ್ಮ ಹೋರಾಟ ಶುರುವಾಗಲಿದೆ. ದೇಶದಲ್ಲಿ ಮೂರು ಬಾರಿ ಆರ್‌ಎಸ್‌ಎಸ್ ನಿಷೇಧಿಸಲು ಪ್ರಯತ್ನ ನಡೆದಿತ್ತು. ಅದು ವಿಫಲವಾಯಿತು ಎಂಬುದನ್ನು ಕಾಂಗ್ರೆಸ್ ಮರೆಯಬಾರದು’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.