ADVERTISEMENT

ಹಾವೇರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ

ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಹಿಮ್ಸ್) ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 8:14 IST
Last Updated 8 ಜನವರಿ 2026, 8:14 IST
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇವರಾಜ ಅರಸು ಅವರ ದಾಖಲೆ ಸರಿಗಟ್ಟಿದ್ದಕ್ಕಾಗಿ ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಹಿಮ್ಸ್) ಉದ್ಘಾಟನಾ ಸಮಾರಂಭದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಸಿದ್ದರಾಮಯ್ಯ ಅವರಿಗೆ ಕೇಕ್ ತಿನ್ನಿಸಿ ಶುಭ ಕೋರಿದರು – ಪ್ರಜಾವಾಣಿ ಚಿತ್ರ/ ಮಾಲತೇಶ ಇಚ್ಚಂಗಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇವರಾಜ ಅರಸು ಅವರ ದಾಖಲೆ ಸರಿಗಟ್ಟಿದ್ದಕ್ಕಾಗಿ ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಹಿಮ್ಸ್) ಉದ್ಘಾಟನಾ ಸಮಾರಂಭದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಸಿದ್ದರಾಮಯ್ಯ ಅವರಿಗೆ ಕೇಕ್ ತಿನ್ನಿಸಿ ಶುಭ ಕೋರಿದರು – ಪ್ರಜಾವಾಣಿ ಚಿತ್ರ/ ಮಾಲತೇಶ ಇಚ್ಚಂಗಿ   

ಹಾವೇರಿ: ‘ರಾಜ್ಯದಲ್ಲಿ ಬಡವರ ಸಂಖ್ಯೆ ಹೆಚ್ಚಿದೆ. ಆರೋಗ್ಯ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಹೋಗಿ ದುಬಾರಿ ವೆಚ್ಚ ಭರಿಸುವ ಶಕ್ತಿ ಅವರಿಗಿಲ್ಲ. ಎಲ್ಲರೂ ಸರ್ಕಾರಿ ಆಸ್ಪತ್ರೆಗಳನ್ನು ಅವಲಂಬಿಸಿದ್ದಾರೆ. ಬಡವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹಾವೇರಿ ಸೇರಿದಂತೆ ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತೆರೆಯಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ದೇವಗಿರಿ ರಸ್ತೆಯಲ್ಲಿರುವ ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಹಿಮ್ಸ್) ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಹಿಮ್ಸ್ ಕಟ್ಟಡ, ನೂತನ ಪ್ರವಾಸಿ ಮಂದಿರ ಹಾಗೂ ಇತರೆ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ವಿಜಯಪುರ ಸೇರಿ ಪ್ರತಿ ಜಿಲ್ಲೆಯಲ್ಲಿಯೂ ವೈದ್ಯಕೀಯ ಕಾಲೇಜು, ಟ್ರಾಮಾ ಕೇಂದ್ರ ಹಾಗೂ ಕ್ಯಾನ್ಸರ್ ಆಸ್ಪತ್ರೆಗಳನ್ನೂ ಆರಂಭಿಸಲಾಗುವುದು’ ಎಂದರು.

‘ಉತ್ತರ ಕರ್ನಾಟಕದ ಹೆಬ್ಬಾಗಿಲು ಎನಿಸಿಕೊಂಡಿರುವ ಹಾವೇರಿ ಜಿಲ್ಲೆಯಲ್ಲಿ ₹500 ಕೋಟಿ ವೆಚ್ಚದಲ್ಲಿ ಹಿಮ್ಸ್ ಮಾಡಿದ್ದೇವೆ. ಕಳೆದ ಬಾರಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸ್ಥಾಪನೆ ಬಗ್ಗೆ ಘೋಷಿಸಿದ್ದೆ. ಉಪಮುಖ್ಯಮಂತ್ರಿಯಾಗಿದ್ದಾಗ ಪ್ರತಿ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಬೇಕೆಂದು ಹೇಳಿದ್ದೆ. ಈಗ ಹಿಮ್ಸ್ ಉದ್ಘಾಟನೆಗೂ ನಾನೇ ಬಂದಿದ್ದೇನೆ. ತುಂಬಾ ಸಂತೋಷದಿಂದ ಹಿಮ್ಸ್ ಉದ್ಘಾಟನೆ ಮಾಡಿದ್ದೇನೆ. ಮುಂಬರುವ ದಿನಗಳಲ್ಲಿ ಹಾವೇರಿಯನ್ನು ಮಾದರಿ ಜಿಲ್ಲೆ ಮಾಡಲು ನಮ್ಮ ಸರ್ಕಾರ ಎಲ್ಲ ಪ್ರಯತ್ನ ಮಾಡುತ್ತದೆ’ ಎಂದು ಹೇಳಿದರು.

ADVERTISEMENT

ಪ್ರಾಸ್ತಾವಿಕವಾಗಿ ಮಾತನಾಡಿದ ಶಾಸಕ ರುದ್ರಪ್ಪ ಲಮಾಣಿ, ‘ಸಂಸದ ಬಸವರಾಜ ಬೊಮ್ಮಾಯಿ, ಸಚಿವರು, ಶಾಸಕರು ಎಲ್ಲರೂ ಸೇರಿ ಕೆಲಸ ಮಾಡಿದ್ದರಿಂದ ಹಿಮ್ಸ್ ಉದ್ಘಾಟನೆ ಸಾಧ್ಯವಾಗಿದೆ. ಇಲ್ಲಿಯ ಜನರು ಚಿಕಿತ್ಸೆಗಾಗಿ ಹುಬ್ಬಳ್ಳಿ–ದಾವಣಗೆರೆಗೆ ಹೋಗುವ ಪರಿಸ್ಥಿತಿಯಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತೆರೆಯಲು ಮುಖ್ಯಮಂತ್ರಿ ಘೋಷಣೆ ಮಾಡಬೇಕು’ ಎಂದು ಒತ್ತಾಯಿಸಿದರು.

ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ‘ಎಲ್ಲ ಜಿಲ್ಲೆಗೂ ವೈದ್ಯಕೀಯ ಕಾಲೇಜು ಆಗಬೇಕು. ಆ ಕೆಲಸವನ್ನು ಸರ್ಕಾರ ಮಾಡಲಿದೆ’ ಎಂದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಮಾತನಾಡಿ, ‘ಬಡವರು, ರೈತರು, ಕೂಲಿ ಕಾರ್ಮಿಕರು ಮಕ್ಕಳು ಸಹ ವೈದ್ಯರಾಗಬೇಕು. ಈ ನಿಟ್ಟಿನಲ್ಲಿ ಕಾಲೇಜು ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿಯೂ ಮತ್ತಷ್ಟು ಕಡೆಗಳಲ್ಲಿ ವೈದ್ಯಕೀಯ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಕಿದ್ವಾಯಿ ಆಸ್ಪತ್ರೆಯ ಘಟಕಗಳು, ಕ್ಯಾನ್ಸರ್ ಆಸ್ಪತ್ರೆ ಮಾಡುತ್ತೇವೆ’ ಎಂದರು.

‘ರಾಜ್ಯದ ಕಾಲೇಜುಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 13,345 ಎಂಬಿಬಿಎಸ್ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ದೇಶದಲ್ಲಿಯೇ ಅತೀ ಹೆಚ್ಚು ವಿದ್ಯಾರ್ಥಿಗಳು ರಾಜ್ಯದ ಕಾಲೇಜುಗಳಲ್ಲಿದ್ದಾರೆ. ಇದು ರಾಜ್ಯದ ಹೆಮ್ಮೆ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಮಾತನಾಡಿ, ‘ಹಿಮ್ಸ್‌ನಲ್ಲಿ ಸದ್ಯ ವರ್ಷಕ್ಕೆ 150 ಸೀಟುಗಳಿವೆ. ಈ ಸಂಖ್ಯೆಯನ್ನು 250ಕ್ಕೆ ಹೆಚ್ಚಿಸಬೇಕು’ ಎಂದು ಒತ್ತಾಯಿಸಿದರು.

‘ಮೆಣಸಿನಕಾಯಿ ಮಾರುಕಟ್ಟೆಗೆ ಪ್ರಸಿದ್ಧವಾದ ಬ್ಯಾಡಗಿಯಲ್ಲಿ ₹28 ಕೋಟಿ ವೆಚ್ಚದ ರಸ್ತೆ ಕಾಮಗಾರಿ ಮಂಜೂರು ಮಾಡಲಾಗಿದೆ. ಎಪಿಎಂಸಿ ಇಲಾಖೆಯಿಂದ ₹10 ಕೋಟಿ ನೀಡಲಾಗುವುದು. ಉಳಿದ ಹಣವನ್ನು ಸಂಸದ ಬಸವರಾಜ ಬೊಮ್ಮಾಯಿ ಅಥವಾ ಮುಖ್ಯಮಂತ್ರಿಯವರು ನೀಡಬೇಕು’ ಎಂದು ಕೊರಿದರು.

ಆರೋಗ್ಯ ಕ್ಷೇತ್ರದಲ್ಲಿ ಸಾಧನೆ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ‘ಎಂಬಿಬಿಎಸ್, ಪಿಜಿ, ದಂತ, ನರ್ಸೀಂಗ್ ಸೇರಿದಂತೆ ವಾರ್ಷಿಕ 2.1 ಲಕ್ಷ ವಿದ್ಯಾರ್ಥಿಗಳನ್ನು ರಾಜ್ಯವು ಆರೋಗ್ಯ ಕ್ಷೇತ್ರಕ್ಕೆ ನೀಡುತ್ತಿದೆ. ಕ್ಯಾಲಿಫೋರ್ನಿಯಾದಲ್ಲಿ 13 ಲಕ್ಷ ಎಂಜಿನಿಯರ್‌ಗಳಿದ್ದಾರೆ. ಆದರೆ, ಸಿಲಿಕಾನ್ ವ್ಯಾಲಿ ಬೆಂಗಳೂರಿನಲ್ಲಿಯೇ 25 ಲಕ್ಷ ಎಂಜಿನಿಯರ್‌ಗಳಿರುವುದು ಹೆಮ್ಮೆಯ ಸಂಗತಿ. ಆರೋಗ್ಯ, ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ರಾಜ್ಯ ಮುಂಚೂಣಿಯಲ್ಲಿದೆ’ ಎಂದರು.

ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯನ್ನು (ಹಿಮ್ಸ್) ಬುಧವಾರ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಿಲ್ಲಾಡಳಿತದಿಂದ ‘ಸಾಂಸ್ಕೃತಿಕ ನಾಯಕ ಬಸವಣ್ಣ’ ಅವರ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಶಾಸಕರಾದ ರುದ್ರಪ್ಪ ಲಮಾಣಿ ಬಸವರಾಜ ಶಿವಣ್ಣನವರ ಪ್ರಕಾಶ ಕೋಳಿವಾಡ ಯು.ಬಿ. ಬಣಕಾರ ಯಾಸೀರ ಅಹ್ಮದ್ ಖಾನ್ ಪಠಾಣ ಸಲೀಂ ಅಹ್ಮದ್ ಚಿತ್ರದಲ್ಲಿದ್ದಾರೆ

‘ಶರಣರು–ಸಂತರ ನಾಡು’

‘ಹಾವೇರಿ ಜಿಲ್ಲೆಯು ಶರಣರು–ಸಂತರ ನಾಡು. ಹಿರೇಕೆರೂರು ತಾಲ್ಲೂಕಿನಲ್ಲಿ ಸರ್ವಜ್ಞ ಶಿಗ್ಗಾವಿ ತಾಲ್ಲೂಕಿನಲ್ಲಿ ಕನಕದಾಸರು – ಸಂತ ಶಿಶುನಾಳ ಷರೀಫರು ಇದ್ದು ಹೋಗಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ‘ಬುದ್ಧ ಬಸವ ಅಂಬೇಡ್ಕರ್ ಗಾಂಧಿ ಕನಕದಾಸರು ನಾರಾಯಣ ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ನಮ್ಮ ಸರ್ಕಾರ ನಡೆಯುತ್ತಿದೆ. ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಲಾಗಿದೆ. ಜಾತಿ ವಿನಾಶ ಕಂದಾಚಾರ ಮೌಢ್ಯ ತೊಲಗಬೇಕೆಂದು ಬಸವಣ್ಣನವರು ಹೇಳಿದ್ದಾರೆ. ವೈಚಾರಿಕತೆ ವೈಜ್ಞಾನಿಕ ಚಿಂತನೆ ಎಲ್ಲರಲ್ಲಿಯೂ ಬಂದಾಗ ಮಾತ್ರ ಜಾತ್ಯಾತೀತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಈ ದಿಸೆಯಲ್ಲಿ ನಮ್ಮ ಸರ್ಕಾರ ನಡೆಯುತ್ತಿದೆ’ ಎಂದು ತಿಳಿಸಿದರು. ‘ಇಸ್ಲಾಂ ಕ್ರೈಸ್ತ್ ಹಿಂದೂ ಜೈನ್ ಶಿಖ್‌ ಸೇರಿ ಎಲ್ಲ ಧರ್ಮದಲ್ಲಿಯೂ ಮನುಷ್ಯನನ್ನು ಪ್ರೀತಿಯಿಂದ ಕಾಣುವಂತೆ ಹೇಳಲಾಗಿದೆ. ಎಲ್ಲಿಯೋ ದ್ವೇಷದ ಬಗ್ಗೆ ಹೇಳಿಲ್ಲ. ಸಮಾಜದಲ್ಲಿರುವ ಅಸಮಾನತೆಯನ್ನು ನಾವೆಲ್ಲರೂ ಹೋಗಲಾಡಿಸಬೇಕು. ಅವಾಗಲೇ ಸ್ವಾತಂತ್ರ್ಯ ಬಂದಿದ್ದು ಯಶಸ್ವಿಯಾಗುತ್ತದೆ. ಎಲ್ಲರಿಗೂ ಸಾಮಾಜಿಕ ಆರ್ಥಿಕ ರಾಜಕೀಯ ಶಕ್ತಿ ಬರಬೇಕು. ಅವಾಗಲೇ ಸಮಾಜದ ಸುಧಾರಣೆಯಾಗುತ್ತದೆ. ಬುದ್ಧ ಬಸವಣ್ಣ ಅಂಬೇಡ್ಕರ್ ಗಾಂಧಿ ಕನಕದಾಸರೂ ಅದನ್ನೇ ಹೇಳಿದ್ದಾರೆ‘ ಎಂದು ಹೇಳಿದರು.

‘₹194 ಕೋಟಿ ಕೊಟ್ಟ ಕೇಂದ್ರ’

‘ಹೊಸ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕೆಂದು 2017ರಲ್ಲಿಯೇ ಘೋಷಣೆ ಮಾಡಲಾಗಿತ್ತು. ನಂತರ ಬಂದ ಸರ್ಕಾರಗಳು ನಿರ್ಮಾಣಕ್ಕೆ ಮುತುವರ್ಜಿ ವಹಿಸಲಿಲ್ಲ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 60;40 ಅನುಪಾತದಲ್ಲಿ ಅನುದಾನ ನೀಡಿತು. ಅದರ ಫಲವೇ ಇಂದಿನ ಹಿಮ್ಸ್‌’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ಹಿಮ್ಸ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ‘ಹಾವೇರಿ ಹಿಮ್ಸ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ₹194 ಕೋಟಿ ಕೊಟ್ಟಿದೆ. ಅಲ್ಲದೇ ಅತೀ ತುರ್ತು ಆರೈಕೆ ಕೇಂದ್ರ ನಿರ್ಮಾಣಕ್ಕೂ ₹50 ಕೋಟಿ ನೀಡಿದೆ’ ಎಂದರು. ಸೂಪರ್ ಸ್ಪೆಷಾಲಿಟಿ ಅತ್ಯಗತ್ಯ: ‘ಜಿಲ್ಲಾಸ್ಪತ್ರೆಯಲ್ಲಿ ವ್ಯವಸ್ಥೆ ಸರಿ ಇಲ್ಲ. ಜನರಿಗೆ ಏನಾದರೂ ತೊಂದರೆಯಾದರೆ ಹುಬ್ಬಳ್ಳಿ ಅಥವಾ ದಾವಣಗೆರೆಗೆ ಹೋಗಬೇಕಾಗಿದೆ. ಸುದೀರ್ಘ ಅವಧಿಯ ಅಧಿಕಾರದ ದಾಖಲೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಅಧಿಕಾರದ ದಾಖಲೆಯ ನೆನಪಿಗಾಗಿ ಹಾವೇರಿ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸತ್ರೆಯನ್ನು ಕೊಡುಗೆಯಾಗಿ ನೀಡಬೇಕು’ ಎಂದು ಬೊಮ್ಮಾಯಿ ಒತ್ತಾಯಿಸಿದರು.   ಬೆಡ್ತಿ–ವರದಾ ಜೋಡಣೆ ಸಾಕಾರವಾಗಲಿ: ‘ಉಪ ಮುಖ್ಯಮಂತಿ ಡಿ.ಕೆ. ಶಿವಕುಮಾರ್ ಅವರು ಬೇಡ್ತಿ–ವರದಾ ನದಿ ಜೋಡಣೆ ಯೋಜನೆಗೆ ಚಾಲನೆ ಕೊಟ್ಟಿದ್ದು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ವರದಾ ನದಿಯಲ್ಲಿ ಮೂರ್ನಾಲ್ಕು ತಿಂಗಳು ನೀರು ಹರಿಯುತ್ತದೆ. ಬೇಡ್ತಿ ನದಿಯಿಂದ ಸಮುದ್ರಕ್ಕೆ ಸೇರುತ್ತಿರುವ ನೀರಿನಲ್ಲಿ ಶೇ 8ರಿಂದ ಶೇ 10ರಷ್ಟು ನೀರನ್ನು ಕೊಟ್ಟರೆ ಹಾವೇರಿ–ಗದಗ ಜಿಲ್ಲೆಯ ಜನರು ಬದುಕು ಕಟ್ಟಿಕೊಳ್ಳುತ್ತಾರೆ’ ಎಂದರು. 

‘ಕೊಟ್ಟ ಮಾತು’ ಪ್ರಸ್ತಾಪಿಸಿದ ಡಿಸಿಎಂ

‘ರಾಜ್ಯದಲ್ಲಿರುವ ನೀರಾವರಿ ಯೋಜನೆಗೆ ಹಣ ನೀಡುವುದಾಗಿ ಹೇಳಿದ್ದ ಕೇಂದ್ರ ಸರ್ಕಾರ ಇದುವರೆಗೂ ಕೊಟ್ಟಿಲ್ಲ’ ಎಂದು ದೂರಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ‘ನಾನು ಕೆಲ ದಿನಗಳ ಹಿಂದೆಯಷ್ಟೇ ಒಂದು ಪೋಸ್ಟ್ ಹಾಕಿದ್ದೆ. ‘ವರ್ಡ್ ಪವರ್‌ ವರ್ಲ್ಡ್‌ ಪವರ್‌ – ಜಗತ್ತಿನ ಅತಿ ದೊಡ್ಡ ಶಕ್ತಿ ಎಂದರೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು’ ಎಂದು. ಹೀಗಾಗಿ ಕೇಂದ್ರ ಸರ್ಕಾರ ತನ್ನ ಮಾತು ಉಳಿಸಿಕೊಳ್ಳಬೇಕು’ ಎಂದು ಖಡಕ್ ಸಂದೇಶ ರವಾನಿಸಿದರು. ‘ರೈತರ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಬಾರದು. ಎರಡು ವರ್ಷ ಮುಗಿದ ಮೇಲೆ ಬೇಕಾದರೆ ರಾಜಕೀಯ ಮಾಡೋಣ. ಈಗ ಜನರ ಬದುಕಿನ ಬಗ್ಗೆ ಚಿಂತೆ ಮಾಡೋಣ. ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಅವರೇ ₹2000 ಕೋಟಿ ಕೊಡುವುದಾಗಿ ಹೇಳಿ ಈಗ ಮೌನವಾಗಿದ್ದಾರೆ. ಅವರು ಮಾತು ಕೊಟ್ಟಿದ್ದಾರೆ. ಅದನ್ನು ಉಳಿಸಿಕೊಳ್ಳಬೇಕು. ವರದಾ–ಬೇಡ್ತಿ ಯೋಜನೆಗೆ ಡಿಪಿಆರ್‌ ಒಪ್ಪಂದ ಆಗಿದೆ. ಮಹದಾಯಿ ವಿಚಾರದಲ್ಲಿ ಗೋವಾ–ಕೇಂದ್ರ ಸರ್ಕಾರ ರಾಜಕೀಯ ಮಾಡಬಾರದು. ರೈತರ ಅಭಿವೃದ್ಧಿಗೆ ಚಿಂತೆ ಮಾಡಬೇಕು. ಸಂಸದ ಬಸವರಾಜ ಬೊಮ್ಮಾಯಿ ಅವರೇ ಪ್ರಧಾನಿ ಜೊತೆ ಸಭೆ ಕರೆಯಲಿ. ನಾವೆಲ್ಲರೂ ಬರುತ್ತೇವೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.