ಹಾವೇರಿ: ‘ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಪಾಕಿಸ್ತಾನದ ಪ್ರಜೆಗಳನ್ನು ಕೂಡಲೇ ಗಡಿಪಾರು ಮಾಡಬೇಕು’ ಎಂದು ಒತ್ತಾಯಿಸಿ ನಗರದಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಸಿದ ಬಿಜೆಪಿ ಕಾರ್ಯಕರ್ತರು, ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಬುಧವಾರ ಮನವಿ ಸಲ್ಲಿಸಿದರು.
ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಸೇರಿದ್ದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು, ‘ಪಾಕ್ ಪ್ರಜೆಗಳ ಗಡಿಪಾರು ವಿಚಾರದಲ್ಲಿ ಕೇಂದ್ರ ಸರ್ಕಾರ ನೀಡಿರುವ ಸೂಚನೆಯನ್ನು ರಾಜ್ಯ ಸರ್ಕಾರ ಪಾಲಿಸಿಲ್ಲ’ ಎಂದು ಆಕ್ರೋಶ ಹೊರಹಾಕಿದರು.
ರಾಜ್ಯ ಸರ್ಕಾರದ ವಿರುದ್ಧ ಸಾಂಕೇತಿಕ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಘೋಷಣೆ ಕೂಗಿದರು. ಬಳಿಕ, ‘ಪಾಕ್ ಪ್ರಜೆಗಳನ್ನು ರಾಜ್ಯದಿಂದ ಗಡಿಪಾರು ಮಾಡಿ’ ಎಂಬ ಮನವಿ ಹಿಡಿದುಕೊಂಡು ಸಹಿ ಸಂಗ್ರಹ ಆರಂಭಿಸಿದರು.
ರಸ್ತೆಯಲ್ಲಿ ಹೊರಟಿದ್ದವರು, ಬೀದಿಬದಿ ವ್ಯಾಪಾರಿಗಳು, ಅಂಗಡಿ ಮಾಲೀಕರು, ವಿದ್ಯಾರ್ಥಿಗಳು, ಕಾರ್ಮಿಕರು ಸೇರಿದಂತೆ 300ಕ್ಕೂ ಹೆಚ್ಚು ಮಂದಿ ಸಹಿ ಮಾಡಿದರು. ಮುಸ್ಲಿಂ ಸಮುದಾಯದ ಜನರು ಸಹ ಮನವಿ ಪತ್ರಕ್ಕೆ ಸಹಿ ಮಾಡಿ, ಪಾಕ್ ಪ್ರಜೆಗಳ ಗಡಿಪಾರಿಗೆ ಒತ್ತಾಯಿಸಿದರು.
ಜನರ ಸಹಿಯುಳ್ಳ ಮನವಿ ಸಮೇತ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಕಚೇರಿಗೆ ಭೇಟಿ ನೀಡಿದ ಬಿಜೆಪಿ ನಿಯೋಗ, ಅವರ ಮೂಲಕ ರಾಜ್ಯಪಾಲರಿಗೆ ಮನವಿ ಕಳುಹಿಸಿತು.
ಅಭಿಯಾನದ ಬಗ್ಗೆ ಮಾತನಾಡಿದ ಮುಖಂಡ ಶಿವರಾಜ ಸಜ್ಜನರ, ‘ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ, ಅಲ್ಪಸಂಖ್ಯಾತರ ತುಷ್ಟೀಕರಣ ನೀತಿ ಅನುಸರಿಸುತ್ತಿದೆ. ದೇಶದ ಭದ್ರತೆ ಪ್ರಶ್ನೆ ಬಂದಾಗಲೂ ಈ ರೀತಿ ವರ್ತಿಸುವುದು ಮೂರ್ಖತನದ ಪರಮಾವಧಿ. ವಿಶ್ವದ ಹಲವು ರಾಷ್ಟ್ರಗಳು, ಭಾರತ ಪರ ನಿಂತಿವೆ. ಕಾಂಗ್ರೆಸ್ ಪಕ್ಷ, ತನ್ನ ಸಾಮಾಜಿಕ ಜಾಲತಾಣದಲ್ಲಿ ಭಾರತದ ಸೇನೆಯನ್ನು ಅವಮಾನಿಸುವ ಪೋಸ್ಟ್ ಪ್ರಕಟಿಸಿದೆ’ ಎಂದು ಕಿಡಿಕಾರಿದರು.
‘ದೇಶದ ರಕ್ಷಣೆ ಹಾಗೂ ಭದ್ರತೆ ವಿಷಯದಲ್ಲಿಯೂ ವೈಯಕ್ತಿಕವಾಗಿ ಹೇಳಿಕೆ ನೀಡುವುದನ್ನು ಗಮನಿಸಿದರೆ, ಕರ್ನಾಟಕವನ್ನು ಮತ್ತೊಂದು ಪಾಕಿಸ್ತಾನವನ್ನಾಗಿ ಮಾಡುವ ಹುನ್ನಾರ ನಡೆಸುತ್ತಿರುವ ಅನುಮಾನ ಕಾಡುತ್ತಿದೆ. ಪಾಕ್‌ನಲ್ಲಿರುವ ಮುಸ್ಲಿಂರನ್ನು ವಿರೋಧಿಸಿದರೆ, ದೇಶದಲ್ಲಿರುವ ಮುಸ್ಲಿಂರು ಮತ ನೀಡುವುದಿಲ್ಲವೆಂಬ ಅಂಜಿಕೆಯಲ್ಲಿ ರಾಜ್ಯ ಸರ್ಕಾರವಿದೆ. ಇದು ದೇಶ ವಿರೋಧಿ ನೀತಿ’ ಎಂದು ಆರೋಪಿಸಿದರು.
ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂತೋಷ ಆಲದಕಟ್ಟಿ ಮಾತನಾಡಿ, ‘ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಪಾಕಿಸ್ತಾನ್ ಪ್ರಜೆಗಳನ್ನು ಹೊರಹಾಕಲು ರಾಜ್ಯ ಸರ್ಕಾರ ಇದುವರೆಗೂ ಸೂಕ್ತ ನಿರ್ಧಾರ ತೆಗೆದುಕೊಂಡಿಲ್ಲ. ಕೇಂದ್ರ ಸರ್ಕಾರದ ಸೂಚನೆಯನ್ನೂ ಕಡೆಗಣಿಸಿದೆ. ಮತ ಬ್ಯಾಂಕ್ ಓಲೈಕೆಗೆ ಜೋತು ಬಿದ್ದಿರುವ ಕಾಂಗ್ರೆಸ್ ಸರ್ಕಾರ, ರಾಜ್ಯದಲ್ಲಿ ನೆಲೆಸಿರುವ ಪಾಕಿಸ್ತಾನ್ ಪ್ರಜೆಗಳನ್ನು ಹೊರಹಾಕುವಲ್ಲಿ ವಿಫಲವಾಗಿದೆ. ಇದರ ವಿರುದ್ಧ ಸಹಿ ಸಂಗ್ರಹ ನಡೆಸಲಾಗುತ್ತಿದೆ’ ಎಂದು ಹೇಳಿದರು.
ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣನವರ ಮಾತನಾಡಿ, ‘ದೇಶದ ಮೇಲೆ ಭಯೋತ್ಪಾದಕ ದಾಳಿಗಳು ನಡೆದರೆ, ತನಗೆ ಸಂಬಂಧವಿಲ್ಲವೆಂದು ಪಾಕಿಸ್ತಾನ್ ಹೇಳುತ್ತಿದೆ. ಇತ್ತೀಚೆಗೆ ನಡೆದ ದಾಳಿಯಲ್ಲಿ ಹಿಂದೂ ಧರ್ಮದವರನ್ನು ಗುರುತಿಸಿ ಹತ್ಯೆ ಮಾಡಿರುವುದು ನೋವಿನ ಸಂಗತಿ. ದಾಳಿ ಮಾಡಿದವರಿಗೆ ತಕ್ಕ ಶಿಕ್ಷೆಯನ್ನು ಪ್ರಧಾನಿ ಮೋದಿಯವರು ನೀಡುತ್ತಾರೆ’ ಎಂದರು.
ಮುಖಂಡ ಸಿದ್ದರಾಜ ಕಲಕೋಟಿ ಮಾತನಾಡಿ, ‘ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಪಾಕಿಸ್ತಾನ್ ಪ್ರಜೆಗಳನ್ನು ಹೊರಹಾಕದಿದ್ದರೆ ರಾಜ್ಯ ಸರ್ಕಾರದ ವಿರುದ್ಧ ನಿರಂತರವಾಗಿ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷ ಅರುಣಕುಮಾರ ಪೂಜಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಂಜುಂಡೇಶ್ವರ ನಾರಾಯಣಿ, ಕಿರಣ ಕೋಣನವರ, ಗಿರೀಶ ತುಪ್ಪದ, ಪ್ರಭು ಹಿಟ್ನಳ್ಳಿ, ವಿಜಯಕುಮಾರ ಚಿನ್ನಿಕಟ್ಟಿ, ಗುಡ್ಡಪ್ಪ ಬರಡಿ, ಅಲ್ಲಾಭಕ್ಷ ತಿಮ್ಮಾಪುರ, ಲಲಿತಾ ಗುಂಡೇನಹಳ್ಳಿ, ವಿದ್ಯಾ ಶೆಟ್ಟಿ, ಶ್ರೀದೇವಿ ರೆಡ್ಡಿ, ರೇಣುಕಾ ಗೌಳಿ ಇದ್ದರು.
ಪೆಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ದಾಳಿ ಮಾಡಿದ್ದ ಉಗ್ರರ ವಿರುದ್ಧ ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಸಂಭ್ರಮಾಚರಣೆ ಮಾಡಲಾಯಿತು. ನಗರ ಹಾಗೂ ಗ್ರಾಮಗಳಲ್ಲಿ ಯುವಕರು ಭಾರತೀಯ ಸೇನೆಗೆ ಅಭಿನಂದನೆ ಸಲ್ಲಿಸಿದರು. ಮಾಜಿ ಸೈನಿಕರನ್ನು ಭೇಟಿಯಾಗಿ ಅವರಿಗೆ ಸಿಹಿ ತಿನ್ನಿಸಿ ಸೆಲ್ಯೂಟ್ ಮಡಿದರು. ಬಿಜೆಪಿ ಕಾರ್ಯಕರ್ತರು ಹಾವೇರಿಯಲ್ಲಿ ಬುಧವಾರ ಸಂಭ್ರಮಾಚರಣೆ ಮಾಡಿದರು. ‘ಪಾಕ್ ಪ್ರಜೆಗಳ ಗಡಿಪಾರಿಗೆ ಆಗ್ರಹಿಸಿ ಸಹಿ ಸಂಗ್ರಹ ಅಭಿಯಾನ’ ಹಮ್ಮಿಕೊಂಡಿದ್ದ ಕಾರ್ಯಕರ್ತರು ಹಣೆಗೆ ತಿಲಕ್ ಇಟ್ಟುಕೊಂಡು ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಕೊಂಡಾಡಿದರು. ಸೇನೆಯ ಕೆಲಸವನ್ನು ಮೆಚ್ಚಿ ಜೈಕಾರ ಹಾಕಿದರು. ‘ಪೆಹಲ್ಗಾಮ್‌ನಲ್ಲಿ ಮಹಿಳೆಯರ ಹಣೆಯ ಮೇಲಿನ ಕುಂಕುಮ ಕಸಿದುಕೊಂಡ ಪಾಕಿಸ್ತಾನ ಪ್ರಯೋಜಕ ಉಗ್ರಗಾಮಿಗಳನ್ನು ಅವರದೇ ನಾಡಿನಲ್ಲಿ ಎಡೆಮುರಿ ಕಟ್ಟಿರುವ ಸೇನೆ ಭಾರತದ ಹೆಣ್ಣು ಮಕ್ಕಳ ಕುಂಕುಮಕ್ಕೆ ಗೌರವ ತಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ದಿನಗಳಲ್ಲಿಯೂ ಉಗ್ರಗಾಮಿಗಳಿಗೆ ತಕ್ಕ ಪಾಠ ಕಲಿಸಲಿದ್ದಾರೆ’ ಎಂದರು. ಸಂತೋಷ ಆಲದಕಟ್ಟಿ ಮಾತನಾಡಿ ‘ಸಿಂಧೂರ ಕಳೆದುಕೊಂಡ ಭಾರತೀಯ ಮಹಿಳೆಯರಿಗೆ ಆಪರೇಷನ್ ಸಿಂಧೂರದಿಂದ ನ್ಯಾಯ ದೊರಕಿದೆ. ಭಯೋತ್ಪಾದಕರನ್ನು ಬೆಂಬಲಿಸುತ್ತಿರುವ ಪಾಕಿಸ್ತಾನವನ್ನು ಸೆದೆಬಡಿಯುವ ಕೆಲಸವನ್ನು ಮೋದಿಯವರು ಮಾಡಲಿದ್ದಾರೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.