ADVERTISEMENT

ಹಾವೇರಿ | ಸಿಂದೊಳ್ಳು ಅಲೆಮಾರಿ ಬದುಕು ದುಸ್ತರ

ಕೆಸರಿನ ಜಾಗದ ಗುಡಿಸಲು–ಶೆಡ್‌ನಲ್ಲಿ ವಾಸ, ಸರ್ಕಾರದ ಸೌಲಭ್ಯ ಪಡೆಯಲು ಗೋಳಾಟ: ಪರ್ಯಾಯ ಜಾಗದಲ್ಲಿ ಸ್ಥಳೀಯರ ವಿರೋಧ

ಸಂತೋಷ ಜಿಗಳಿಕೊಪ್ಪ
Published 29 ಸೆಪ್ಟೆಂಬರ್ 2025, 5:04 IST
Last Updated 29 ಸೆಪ್ಟೆಂಬರ್ 2025, 5:04 IST
ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಹಂಸಬಾವಿ ಬಳಿಯ ಚಿಕ್ಕಣಜಿ ಕ್ರಾಸ್‌ನಲ್ಲಿ (ತಿಳವಳ್ಳಿ ಕ್ರಾಸ್) ಅಲೆಮಾರಿ ಸಿಂದೊಳ್ಳು ಸಮುದಾಯದವರು ವಾಸವಿರುವ ಸ್ಥಳದ ದುಸ್ಥಿತಿ
ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಹಂಸಬಾವಿ ಬಳಿಯ ಚಿಕ್ಕಣಜಿ ಕ್ರಾಸ್‌ನಲ್ಲಿ (ತಿಳವಳ್ಳಿ ಕ್ರಾಸ್) ಅಲೆಮಾರಿ ಸಿಂದೊಳ್ಳು ಸಮುದಾಯದವರು ವಾಸವಿರುವ ಸ್ಥಳದ ದುಸ್ಥಿತಿ   

ಹಾವೇರಿ: ಕೆರೆ ದಡದ ಕೆಸರಿನಲ್ಲಿರುವ ತಾತ್ಕಾಲಿಕ ಗುಡಿಸಲು–ಶೆಡ್‌ಗಳು. ಜೋರು ಮಳೆ ಬಂದರೆ ಸೋರುವ ಚಾವಣಿ. ಗುಡಿಸಲು–ಶೆಡ್‌ನತ್ತ ಸಾಗಿದರೆ ಕಾಲಿಗೆ ಅಂಟಿಕೊಳ್ಳುವ ಕೆಸರು. ನಾಡಿನಲ್ಲಿದ್ದರೂ ಕಾಡಿನ ಮನುಷ್ಯರ ರೀತಿಯ ಜೀವನ. ಕುಡಿಯುವ ನೀರು, ಸರ್ಕಾರಿ ದಾಖಲೆಗಳಿಗಾಗಿ ಅಲೆದಾಟ. ಮಹಿಳೆಯರು, ಮಕ್ಕಳು, ವೃದ್ಧರ ನಿತ್ಯದ ಗೋಳಾಟ...

ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಹಂಸಬಾವಿ ಬಳಿಯ ಚಿಕ್ಕಣಜಿ ಕ್ರಾಸ್‌ನಲ್ಲಿ (ತಿಳವಳ್ಳಿ ಕ್ರಾಸ್) ವಾಸವಿರುವ ಅಲೆಮಾರಿ ಸಿಂದೊಳ್ಳು ಸಮುದಾಯದವರ ಬದುಕಿನ ವ್ಯಥೆಯಿದು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 78 ವರ್ಷವಾದರೂ ಈ ಸಮುದಾಯದವರು ಇಂದಿಗೂ ಗುಡಿಸಲು–ಶೆಡ್‌ನಲ್ಲಿ ವಾಸವಿದ್ದು, ಆಡಳಿತ ವ್ಯವಸ್ಥೆಯನ್ನೇ ನಾಚಿಸುವಂತಿದೆ. ಅಕ್ಷರದ ಜ್ಞಾನವಿಲ್ಲದೇ ಬಡತನದಲ್ಲಿ ಜೀವನ ಸವೆಸುತ್ತಿರುವ ಈ ಸಮುದಾಯದವರ ಕಷ್ಟಗಳಿಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಪಂದಿಸದಿರುವುದು ವ್ಯವಸ್ಥೆಯ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.

ಊರೂರು ಅಲೆದು ಕಲೆ ಪ್ರದರ್ಶಿಸಿ ಭಿಕ್ಷಾಟನೆ ಮಾಡುವ ಈ ಸಿಂದೊಳ್ಳು ಸಮುದಾಯ, ಪರಿಶಿಷ್ಟ ಪಂಗಡದ (ಎಸ್‌.ಟಿ) ಪಟ್ಟಿಯಲ್ಲಿದೆ. ಆದರೆ, ಎಸ್‌.ಟಿ. ಸಮುದಾಯಕ್ಕೆ ಸಿಗುವ ಬಹುತೇಕ ಸೌಲಭ್ಯಗಳು ಸಿಂದೊಳ್ಳು ಸಮುದಾಯಕ್ಕೆ ಸಿಕ್ಕಿಲ್ಲ. ಎಸ್‌.ಟಿ. ಪ್ರಮಾಣ ಪತ್ರ ಪಡೆಯಲು ಸಹ ಈ ಸಮುದಾಯದವರು ಪರದಾಡುವ ಸ್ಥಿತಿಯಿದೆ.

ADVERTISEMENT

ಬ್ಯಾಡಗಿ ತಾಲ್ಲೂಕಿನ ಚಿಕ್ಕಣಜಿ ಗ್ರಾಮದ (ಹಂಸಬಾವಿ ಹತ್ತಿರ) ಸರ್ವೇ ನಂಬರ್–105ರ ಜಾಗದಲ್ಲಿ ಸಿಂದೊಳ್ಳು ಸಮುದಾಯದವರು ಸುಮಾರು 20 ವರ್ಷಗಳಿಂದ ಗುಡಿಸಲು–ಶೆಡ್‌ ಕಟ್ಟಿಕೊಂಡು ವಾಸವಿದ್ದಾರೆ. ಈ ಜಾಗಕ್ಕೆ ಹೊಂದಿಕೊಂಡು ಸರ್ಕಾರಿ ಕೆರೆಯಿದ್ದು, ಮಳೆಗಾಲದಲ್ಲಿ ಸಂಪೂರ್ಣ ಭರ್ತಿಯಾಗುತ್ತದೆ.

ಬ್ಯಾಡಗಿ ಹಾಗೂ ಹಿರೇಕೆರೂರು ತಾಲ್ಲೂಕಿನ ಗಡಿಭಾಗದಲ್ಲಿರುವ ಚಿಕ್ಕಣಜಿ, ಹಂಸಬಾವಿಗೂ ಹತ್ತಿರದಲ್ಲಿದೆ. ಹೊಟ್ಟೆ ತುಂಬಿಸಿಕೊಳ್ಳಲು ನಿತ್ಯವೂ ಊರೂರು ಅಲೆಯುವ ಈ ಸಮುದಾಯದವರು, ವಾಹನಗಳ ಸಂಚಾರದ ಅನುಕೂಲಕ್ಕಾಗಿ ಈ ಸ್ಥಳದಲ್ಲಿ ವಾಸವಿದ್ದಾರೆ. ಈ ಸ್ಥಳವೇ ಅವರ ಜೀವನಕ್ಕೆ ತುಸು ಆಧಾರವಾಗಿದೆ. ಆದರೆ, ಜನ ವಸತಿಗೆ ಯೋಗ್ಯವಲ್ಲದ ಸ್ಥಳ ಇದಾಗಿರುವುದರಿಂದ ಸಮುದಾಯದವರು ಸಂಕಟದ ಬದುಕು ಸಾಗಿಸುತ್ತಿದ್ದಾರೆ.

ಸಿಂದೊಳ್ಳು ಅಲೆಮಾರಿ ಜನಾಂಗದ 60ಕ್ಕೂ ಹೆಚ್ಚು ಜನರು, ಈ ಜಾಗದಲ್ಲಿ ವಾಸವಿದ್ದಾರೆ. 20ಕ್ಕೂ ಹೆಚ್ಚು ಮಕ್ಕಳಿದ್ದು, ಈ ಪೈಕಿ ಕೆಲವರು ಅಂಗನವಾಡಿ ಕೇಂದ್ರಗಳಿಗೆ ಹೋಗುತ್ತಿದ್ದಾರೆ. ಬಹುತೇಕ ಮಕ್ಕಳು, ಪೋಷಕರ ಜೊತೆಯಲ್ಲಿಯೇ ಭಿಕ್ಷಾಟನೆ ಮಾಡುತ್ತಿರುವುದು ದುರಂತದ ಸಂಗತಿ.

ವಾಸದ ನಿಖರ ದಾಖಲೆ ಲಭ್ಯವಿಲ್ಲದ ಕಾರಣ ಬಹುತೇಕ ಜನರಿಗೆ ಇದುವರೆಗೂ ಆಧಾರ್ ಸಿಕ್ಕಿಲ್ಲ. ಆಧಾರ್ ಇಲ್ಲದಿದ್ದರಿಂದ ಹಲವು ಮಕ್ಕಳು ಶಾಲೆಗೆ ಹೋಗಲು ಆಗುತ್ತಿಲ್ಲ. ವೃದ್ಧರು, ವಿಧವೆಯರು, ಸಾಮಾಜಿಕ ಭದ್ರತೆ ಯೋಜನೆಯಡಿ ಮಾಸಾಶನ ಪಡೆಯಲು ಸಾಧ್ಯವಾಗುತ್ತಿಲ್ಲ.

ಸಿಂದೊಳ್ಳು ಸಮುದಾಯದವರು, ಶಾಶ್ವತ ಸೂರಿಗಾಗಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಬಳಿ ಅಲೆದಾಡಿ ಸುಸ್ತಾಗಿದ್ದಾರೆ. ಈ ಸಮುದಾಯದವರಿಗೆ ಪರ್ಯಾಯ ಜಾಗ ಮಂಜೂರಾಗಿರುವ ಮಾಹಿತಿಯಿದೆ. ಆದರೆ, ಆ ಜಾಗದಲ್ಲಿ ವಾಸಿಸಲು ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿರುವುದಾಗಿ ಗೊತ್ತಾಗಿದೆ.

ಸ್ಥಳೀಯ ವಿರೋಧದಿಂದಾಗಿ ಜೀವ ಭಯದಲ್ಲಿರುವ ಸಮುದಾಯದವರು, ಪರ್ಯಾಯ ಜಾಗಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಖುದ್ದು ಜಿಲ್ಲಾಧಿಕಾರಿಯವರೇ ಸ್ಥಳ ಪರಿಶೀಲನೆ ನಡೆಸಿ, ಪರಿಸ್ಥಿತಿ ಅವಲೋಕಿಸಿದ್ದಾರೆ. ಸಿಂದೊಳ್ಳು ಸಮುದಾಯದವರಿಗಾಗಿ ಪ್ರತ್ಯೇಕ ಕಂದಾಯ ಗ್ರಾಮ ಮಾಡುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.

ಮಕ್ಕಳ ಜೀವಕ್ಕೆ ಅಪಾಯಕಾರಿ: ಕೆರೆ ದಡದಲ್ಲಿಯೇ ಗುಡಿಸಲು–ಶೆಡ್‌ ಹಾಕಿಕೊಂಡು ಸಿಂದೊಳ್ಳು ಸಮುದಾಯದವರು ವಾಸವಿದ್ದಾರೆ. ಈ ಭಾಗದಲ್ಲಿ ಹಾವು, ಚೇಳು ಹಾಗೂ ವಿಷಕಾರಿ ಜೀವಿಗಳು ಹೆಚ್ಚಿವೆ. ಗುಡಿಸಲು ಎದುರು ಆಟವಾಡುವ ಮಕ್ಕಳು ಆಗಾಗ ಕೆರೆ ಬಳಿಯೂ ಹೋಗುತ್ತಾರೆ. ಕೆಸರಿನಲ್ಲೂ ಆಟವಾಡುತ್ತಾರೆ. ಇಂಥ ಸಂದರ್ಭದಲ್ಲಿ ಮಕ್ಕಳ ಜೀವಕ್ಕೆ ಅಪಾಯ ಉಂಟಾಗುವ ಭಯ ಸ್ಥಳೀಯರಲ್ಲಿದೆ.

ಇದೇ ಸಮುದಾಯದ ಎರಡೂವರೆ ವರ್ಷದ ಬಾಲಕಿ ಪೂಜಾ ನಾಗಪ್ಪ ದುರಮುರಗಿ ಎಂಬಾಕೆ, ಗುಡಿಸಲು ಬಳಿಯ ನೀರಿನ ಗುಂಡಿಯಲ್ಲಿ ಬಿದ್ದು ಸೆ. 17ರಂದು ಮೃತಪಟ್ಟಿದ್ದಾಳೆ. ಈ ಬಾಲಕಿಯ ಸಾವು, ಸಮುದಾಯದವರಲ್ಲಿ ಮತ್ತಷ್ಟು ಆತಂಕವನ್ನುಂಟು ಮಾಡಿದೆ. ಶೆಡ್–ಗುಡಿಸಲಿನಲ್ಲಿರುವ ಜನರು, ತಮ್ಮ ಮಕ್ಕಳ ಪರಿಸ್ಥಿತಿ ಏನು? ಎಂದು ಚಿಂತಿಸುತ್ತಿದ್ದಾರೆ.

‘ನಮಗೆ ಓದು–ಬರಹ ಬರುವುದಿಲ್ಲ. ಶಾಲೆಗೂ ಹೋಗಿಲ್ಲ. ಕಲೆ ಮೂಲಕ ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಆಡಳಿತ ವ್ಯವಸ್ಥೆಯ ಜ್ಞಾನವೂ ನಮಗಿಲ್ಲ. ಯಾರಾದರೂ ವಿದ್ಯಾವಂತರು ಬಂದರೆ, ಅವರ ಬಳಿಯೇ ಕಷ್ಟ ಹೇಳಿಕೊಳ್ಳುತ್ತೇವೆ. ಆದರೆ, ಪರಿಹಾರ ಮಾತ್ರ ಸಿಗುವುದಿಲ್ಲ. ಇತ್ತೀಚೆಗೆ ಬಾಲಕಿ ಪೂಜಾ ಮೃತಪಟ್ಟ ನಂತರ, ವಾಸಸ್ಥಳದಲ್ಲಿ ಹೆಚ್ಚು ಭಯ ಶುರುವಾಗಿದೆ. ಯಾವ ಮಗುವಿಗೆ ? ಯಾವಾಗ ? ಏನಾಗುತ್ತದೆ ? ಎಂಬ ಆತಂಕವಿದೆ. ನಮಗೆ ಶಾಶ್ವತ ಸೂರು ಬೇಕು. ಭಯಮುಕ್ತ ವಾತಾವರಣದಲ್ಲಿ ನಾವೂ ಬದುಕಬೇಕು’ ಎಂದು ವೃದ್ಧರೊಬ್ಬರು ಅಳಲು ತೋಡಿಕೊಂಡರು.

ಶಾಲೆ ಪ್ರವೇಶಕ್ಕೂ ಸಮಸ್ಯೆ: ‘ಪೋಷಕರು ಬೆಳಿಗ್ಗೆಯೇ ಭಿಕ್ಷಾಟನೆಗಾಗಿ ಬೇರೆ ಊರಿಗೆ ಹೋಗುತ್ತಾರೆ. ಕೆಲವರು ತಮ್ಮ ಮಕ್ಕಳನ್ನು ಜೊತೆಯಲ್ಲಿ ಕರೆದೊಯ್ಯುತ್ತಾರೆ. ಹಲವರು, ಕರೆದೊಯ್ಯುವುದಿಲ್ಲ. ಅಂಥ ಮಕ್ಕಳು ಗುಡಿಸಲಿನಲ್ಲೇ ಇರುತ್ತಾರೆ. ಇಂಥ ಮಕ್ಕಳನ್ನು ಶಾಲೆಗೆ ಸೇರಿಸಬೇಕು ಎಂದರೆ, ದಾಖಲೆ ಕೇಳುತ್ತಾರೆ. ದಾಖಲೆ ಮಾಡಿಸಲು ಅಧಿಕಾರಿಗಳು ಲಂಚ ಕೇಳುತ್ತಾರೆ’ ಎಂದು ಸಮುದಾಯದವರು ಆರೋಪಿಸಿದರು.

‘ನಮ್ಮ ಮಕ್ಕಳೂ ಶಿಕ್ಷಣವಂತರಾಗಬೇಕು. ನಮಗೂ ಈ ಬದುಕಿನಿಂದ ಮುಕ್ತಿ ಸಿಗಬೇಕು. ಆದರೆ, ಮಕ್ಕಳಿಗೆ ಶಿಕ್ಷಣ ಕೊಡಿಸುವಷ್ಟು ಹಣ ನಮ್ಮಲ್ಲಿಲ್ಲ. ದಿನದ ಭಿಕ್ಷೆ ನಂಬಿ ಬದುಕುವವರು ನಾವು. ನಮ್ಮಲ್ಲಿ ಹಲವರಿಗೆ ಆಧಾರ್ ಕಾರ್ಡ್ ಇಲ್ಲ. ಇದರಿಂದಾಗಿ ಕೆಲ ಮಕ್ಕಳು ಶಾಲೆಗೆ ಹೋಗಲು ಸಮಸ್ಯೆಯಾಗಿದೆ’ ಎಂದು ಅಳಲು ತೋಡಿಕೊಂಡರು.

(ಪೂರಕ ಮಾಹಿತಿ: ಹುತ್ತೇಶ ಲಮಾಣಿ)

ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಹಂಸಬಾವಿ ಬಳಿಯ ಚಿಕ್ಕಣಜಿ ಕ್ರಾಸ್‌ನಲ್ಲಿ (ತಿಳವಳ್ಳಿ ಕ್ರಾಸ್) ಅಲೆಮಾರಿ ಸಿಂದೊಳ್ಳು ಸಮುದಾಯದವರು ವಾಸವಿರುವ ಸ್ಥಳದ ದುಸ್ಥಿತಿ  – ಪ್ರಜಾವಾಣಿ ಚಿತ್ರ/ ಹುತ್ತೇಶ ಲಮಾಣಿ

ಬ್ಯಾಡಗಿ ತಾಲ್ಲೂಕಿನ ಪ್ರದೇಶ ಶಾಶ್ವತ ಸೂರಿಗೆ ಅಲೆಮಾರಿಗಳ ಆಗ್ರಹ ಶಾಲೆ ಪ್ರವೇಶಕ್ಕೂ ಸಮಸ್ಯೆ

ಗುಡಿಸಲು–ಶೆಡ್‌ಗಳಿಗೆ ನಿತ್ಯವೂ ಕೊಳಕುಮಂಡಲ ಸೇರಿ ವಿವಿಧ ಹಾವುಗಳು ನುಗ್ಗುತ್ತಿವೆ. ಭಯದಲ್ಲಿಯೇ ನಾವು ಜೀವನ ಸಾಗಿಸುತ್ತಿದ್ದು ಶಾಶ್ವತ ಸೂರು ಮರೀಚಿಕೆಯಾಗಿದೆ
ಸಿಂದೊಳ್ಳು ಅಲೆಮಾರಿ ಜನಾಂಗದ ನಿವಾಸಿ
ನಾವೂ ಮನುಷ್ಯರು. ಕಲೆ ಪ್ರದರ್ಶನದಿಂದ ಬರುವ ಭಿಕ್ಷೆ ನಂಬಿ ಬದುಕುತ್ತಿದ್ದೇವೆ. ನಮಗೂ ಸ್ವಚ್ಛ ಪರಿಸರದಲ್ಲಿ ಬದುಕುವ ಅವಕಾಶ ಮಾಡಿಕೊಡಿ. ನಮ್ಮ ಮಕ್ಕಳಿಗೂ ಶಿಕ್ಷಣ ಪಡೆಯಲು ಅನುಕೂಲ ಕಲ್ಪಿಸಿ
ಸಿಂದೊಳ್ಳು ಅಲೆಮಾರಿ ಜನಾಂಗದ ನಿವಾಸಿ
‘ಕಂದಾಯ ಗ್ರಾಮದ ಭರವಸೆ’
ಸಿಂದೊಳ್ಳು ಸಮುದಾಯದ ಬಾಲಕಿ ಪೂಜಾ ಮೃತಪಟ್ಟ ಘಟನೆಯ ಬಳಿಕ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ಸಮುದಾಯದವರು ವಾಸವಿದ್ದ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದ್ದಾರೆ. ಕಂದಾಯ ಗ್ರಾಮದ ಭರವಸೆ ನೀಡಿದ್ದಾರೆ. ‘ಪ್ರಜಾವಾಣಿ’ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ‘ಸಿಂದೊಳ್ಳು ಸಮುದಾಯದವರು ಮೂಲ ಸೌಕರ್ಯದಿಂದ ವಂಚಿತವಾಗಿರುವುದನ್ನು ಗಮನಿಸಿದ್ದೇನೆ. ಕುಡಿಯುವ ನೀರಿಗಾಗಿ ತ್ವರಿತವಾಗಿ ಕೊಳವೆ ಬಾವಿ ಕೊರೆಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಎಲ್ಲರಿಗೂ ಸರ್ಕಾರಿ ದಾಖಲೆ ನೀಡಲು ಕ್ರಮ ಕೈಗೊಳ್ಳುವಂತೆಯೂ ಹೇಳಿದ್ದೇನೆ’ ಎಂದರು. ‘ಸಿಂದೊಳ್ಳು ಸಮುದಾಯದವರು ವಾಸವಿರುವ ಸ್ಥಳ ಹುಲ್ಲುಗಾವಲು ಪ್ರದೇಶವಾಗಿದೆ. ಕೆರೆ ದಡದಲ್ಲಿರುವ ಈ ಪ್ರದೇಶ ಅಸುರಕ್ಷಿತವಾಗಿದೆ. ಅವರಿಗೆ ಪರ್ಯಾಯ ಜಾಗವನ್ನೂ ಮಂಜೂರು ಮಾಡಲಾಗಿದೆ. ಆದರೆ ಅಲ್ಲಿ ಸ್ಥಳೀಯರ ವಿರೋಧ ಇರುವುದಾಗಿ ಹೇಳುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಪರ್ಯಾಯ ಜಾಗಕ್ಕೆ ಹೋಗಲು ಸಮಸ್ಯೆಯಾದರೆ ಇರುವ ಜಾಗದ ಸುತ್ತಲೂ ಕಾಂಪೌಂಡ್ ಕಟ್ಟಿ ಕಂದಾಯ ಗ್ರಾಮವನ್ನಾಗಿ ಮಾಡಲು ಇರುವ ಅವಕಾಶಗಳನ್ನು ಪರಿಶೀಲಿಸಲಾಗುವುದು’ ಎಂದು ಹೇಳಿದರು.
ಅಧ್ಯಕ್ಷೆ ಭೇಟಿ ಬಳಿಕವೂ ಸುಧಾರಿಸದ ವ್ಯವಸ್ಥೆ
ಹಾವೇರಿ ಜಿಲ್ಲೆಯಲ್ಲಿ ಆಗಸ್ಟ್ 5 ಹಾಗೂ 6ರಂದು ಪ್ರವಾಸ ಕೈಗೊಂಡಿದ್ದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಸಿಂದೊಳ್ಳು ಸಮುದಾಯದವರು ವಾಸವಿರುವ ಸ್ಥಳಕ್ಕೂ ಭೇಟಿ ನೀಡಿದ್ದರು. ಅಲ್ಲಿಯ ಅವ್ಯವಸ್ಥೆ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಮೂಲ ಸೌಕರ್ಯ ಕಲ್ಪಿಸುವಂತೆ ಗಡುವು ನೀಡಿ ಹೊರಟು ಹೋಗಿದ್ದರು. ಅಧ್ಯಕ್ಷೆ ಭೇಟಿಯಾಗಿ ಒಂದೂವರೆ ತಿಂಗಳಾದರೂ ಸಮುದಾಯದವರಿಗೆ ಸೌಲಭ್ಯ ಸಿಕ್ಕಿಲ್ಲ. ಅಧ್ಯಕ್ಷೆ ಮಾತಿಗೂ ಅಧಿಕಾರಿಗಳು ಕಿಮ್ಮತ್ತು ನೀಡಿಲ್ಲವೆಂದು ಸಮುದಾಯದವರು ಆರೋಪಿಸುತ್ತಿದ್ದಾರೆ. ‘ಶಾಶ್ವತ ಸೂರು ಸಿಗುವ ಭರವಸೆಯೇ ಹೋಗಿದೆ. ಮಳೆ ಬಂದರೆ ಜೋಪಡಿ ಇರುವ ಸ್ಥಳದಲ್ಲಿ ಓಡಾಡಲು ಆಗುವುದಿಲ್ಲ. ಇಲ್ಲಿಯ ಗರ್ಭಿಣಿಯವರಿಗೆ ಮಾತೃವಂದನ ನೋಂದಣಿ ಮಾಡಿಲ್ಲ. ಅವರಿಗೆ ಲಸಿಕೆಯನ್ನೂ ಹಾಕಿಸಿಲ್ಲ. ಅರ್ಹರಿಗೆ ವಿಧವಾ ವೇತನ ಏಕ ಪೋಷಕ ಮಕ್ಕಳಿಗೆ ಪ್ರಾಯೋಜಕತ್ವ ಯೋಜನೆಯ ಸೌಲಭ್ಯವೂ ಸಿಕ್ಕಿಲ್ಲ’ ಎಂದು ಮಹಿಳೆಯರು ಅಳಲು ತೋಡಿಕೊಂಡಿದ್ದರು. ‘ನಮ್ಮ ಪ್ರದೇಶಕ್ಕೆ ಯಾವ ಅಧಿಕಾರಿಯೂ ಬರುವುದಿಲ್ಲ. ನಮಗೆ ಯಾವುದೇ ಜಾತಿ ಪ್ರಮಾಣ ಪತ್ರ  ಇಲ್ಲ. ಆಧಾರ್‌ ಕಾರ್ಡ್ ಹಾಗೂ ಪಡಿತರ ಚೀಟಿಯನ್ನೂ ನೀಡುತ್ತಿಲ್ಲ. ಅವುಗಳನ್ನು ಮಾಡಿಕೊಡಲು ಕಚೇರಿಯ ಕೆಲವರು ಲಂಚ ಕೇಳುತ್ತಿದ್ದಾರೆ’ ಎಂದು ಭ್ರಷ್ಟಾಚಾರವನ್ನು ಬಹಿರಂಗವಾಗಿಯೇ ತೆರೆದಿಟ್ಟಿದ್ದರು. ‘ಆಧಾರ್‌ ಕಾರ್ಡ್ ಮಾಡಿಸಲು ₹ 9000 ವಿಧವಾ ವೇತನ ಮಾಡಿಸಲು ₹ 20000 ಲಂಚ ಕೇಳುತ್ತಾರೆ. ಒಂದು ಹೊತ್ತಿನ ಊಟಕ್ಕೂ ನಿತ್ಯವೂ ದುಡಿಯುತ್ತಿರುವ ನಾವು ಎಲ್ಲಿಂದ ಲಂಚ ಕೊಡುವುದು. ಆಧಾರ್ ಕಾರ್ಡ್ ಇಲ್ಲದಿದ್ದರಿಂದ ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳುತ್ತಿಲ್ಲ. ನಮ್ಮ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ’ ಎಂದು ಕಣ್ಣೀರಿಟಿದ್ದರು. ಸಮಸ್ಯೆ ಆಲಿಸಿದ್ದ ನಾಗಲಕ್ಷ್ಮಿ ‘ಅಲೆಮಾರಿ ಅರೇ ಅಲೆಮಾರಿ ಜನರಿಗೆ ಕಾನೂನಾತ್ಮಕವಾಗಿ ಹಾಗೂ ಸಂವಿಧಾನಾತ್ಮಕವಾಗಿ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸುವುದು ನಮ್ಮೆಲ್ಲರ ಕರ್ತವ್ಯ’ ಎಂದು ಅಧಿಕಾರಿಗಳಿಗೆ ಸೂಚಿಸಿದ್ದರು. ಕೆಲಸ ಮಾಡದವರಿಗೆ ನೋಟಿಸ್‌ ನೀಡುವಂತೆಯೂ ತಹಶೀಲ್ದಾರ್‌ಗೆ ಹೇಳಿದ್ದರು. ಆದರೆ ಇಂದಿಗೂ ನಾಗಲಕ್ಷ್ಮಿ ಅವರ ಸೂಚನೆಗಳು ಪಾಲನೆಯಾಗಿಲ್ಲ. ಪುನಃ ಅದೇ ಅವ್ಯವಸ್ಥೆ ಮುಂದುವರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.