ADVERTISEMENT

ಸ್ಮಾರ್ಟ್‌ ಅಂಗನವಾಡಿ: ಹಾಜರಾತಿ ವೃದ್ಧಿ!

ಹಾವೇರಿ ತಾಲ್ಲೂಕಿನ ದೇವಗಿರಿಯ ಏಳು ಕೇಂದ್ರಗಳಿಗೆ ಆಧುನಿಕ ಸೌಲಭ್ಯ l ಪುಟಾಣಿಗಳಲ್ಲಿ ಸಂತಸ

ಸಿದ್ದು ಆರ್.ಜಿ.ಹಳ್ಳಿ
Published 6 ಜನವರಿ 2024, 0:11 IST
Last Updated 6 ಜನವರಿ 2024, 0:11 IST
ಹಾವೇರಿ ತಾಲ್ಲೂಕಿನ ದೇವಗಿರಿ ಗ್ರಾಮದ ಸುಸಜ್ಜಿತ ಅಂಗನವಾಡಿ ಕೇಂದ್ರದಲ್ಲಿ ಕಲಿಕೆಯಲ್ಲಿ ನಿರತರಾದ ಪುಟಾಣಿ ಮಕ್ಕಳು   –ಪ್ರಜಾವಾಣಿ ಚಿತ್ರ: ಮಾಲತೇಶ ಇಚ್ಚಂಗಿ 
ಹಾವೇರಿ ತಾಲ್ಲೂಕಿನ ದೇವಗಿರಿ ಗ್ರಾಮದ ಸುಸಜ್ಜಿತ ಅಂಗನವಾಡಿ ಕೇಂದ್ರದಲ್ಲಿ ಕಲಿಕೆಯಲ್ಲಿ ನಿರತರಾದ ಪುಟಾಣಿ ಮಕ್ಕಳು   –ಪ್ರಜಾವಾಣಿ ಚಿತ್ರ: ಮಾಲತೇಶ ಇಚ್ಚಂಗಿ    

ಹಾವೇರಿ: ತಾಲ್ಲೂಕಿನ ದೇವಗಿರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 7 ಅಂಗನವಾಡಿ ಕೇಂದ್ರಗಳು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಆಕರ್ಷಕ ಸ್ವರೂಪ ಪಡೆದಿದ್ದು, ಪುಟಾಣಿ ಮಕ್ಕಳಲ್ಲಿ ಸಂತಸ ಮೂಡಿಸಿವೆ. 

ಸ್ಮಾರ್ಟ್‌ ಅಂಗನವಾಡಿ ಕೇಂದ್ರಗಳಲ್ಲಿ ಟಿವಿ ಪರದೆ ಮೂಲಕ ಡಿಜಿಟಲ್‌ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಆಡಿಯೊ–ವಿಡಿಯೊ ಒಳಗೊಂಡ ಪಾಠಗಳು ಮಕ್ಕಳನ್ನು ಕಲಿಕೆಯತ್ತ ಆಕರ್ಷಿಸುತ್ತಿವೆ. ನಿರಂತರ ವಿದ್ಯುತ್‌ ಸಂಪರ್ಕ, ಫ್ಯಾನ್‌ ಸೌಲಭ್ಯ ಕೂಡ ಕಲ್ಪಿಸಲಾಗಿದೆ.

‘ಮೊದಲಿಗೆ 6ರಿಂದ 8 ಮಕ್ಕಳು ಅಂಗನವಾಡಿಗೆ ಬರುತ್ತಿದ್ದರು. ಕಟ್ಟಡದ ಸ್ವರೂಪ ಬದಲಾದ ಬಳಿಕ 10 ರಿಂದ 15 ಮಕ್ಕಳು ಬರುತ್ತಿದ್ದಾರೆ. ಈ ಮಾದರಿ ಕಲಿಕಾ ಕೇಂದ್ರಕ್ಕೆ ಮಕ್ಕಳನ್ನು ಕಳುಹಿಸಲು ಪೋಷಕರು ಆಸಕ್ತರಾಗಿದ್ದಾರೆ’ ಎಂದು ದೇವಗಿರಿಯ ಅಂಗನವಾಡಿ ಕಾರ್ಯಕರ್ತೆ ವಿಜಯಲಕ್ಷ್ಮಿ ಪೂಜಾರ ತಿಳಿಸಿದರು. 

ADVERTISEMENT

ಮಳೆಯಿಂದ ಸೋರುತ್ತಿದ್ದ ಕಟ್ಟಡಗಳನ್ನು ದುರಸ್ತಿಗೊಳಿಸಿ, ಮಾಸಿದ ಗೋಡೆಗಳಿಗೆ ಬಣ್ಣ ಬಳಿಯಲಾಗಿದೆ. ಚಿತ್ತಾಕರ್ಷಕ 3ಡಿ ಪೇಂಟಿಂಗ್‌ ಮಾಡಲಾಗಿದೆ. ಗೋಡೆಗಳ ಮೇಲೆ ವನ್ಯಪ್ರಾಣಿ, ಚೋಟಾ ಭೀಮ್‌ ಮುಂತಾದ ಚಿತ್ರಗಳ ಜೊತೆಗೆ ಅಕ್ಷರ, ವಾರ, ತಿಂಗಳು, ಅಂಕಿ–ಅಂಶಗಳನ್ನು ಬರೆದು ಕಲಿಕೆಗೆ ಉತ್ತೇಜನ ನೀಡಲಾಗಿದೆ. 

ಸಮವಸ್ತ್ರ, ಐಡಿ ಕಾರ್ಡ್‌:

ಮಕ್ಕಳಿಗೆಂದೇ ಪುಟ್ಟ ಡೆಸ್ಕ್‌ಗಳಿವೆ. ಎಲ್ಲ ಮಕ್ಕಳಿಗೂ ಸಮವಸ್ತ್ರ ಮತ್ತು ಐಡಿ ಕಾರ್ಡ್‌ ವಿತರಿಸಲಾಗಿದೆ. ಖಾಸಗಿ ಕಾನ್ವೆಂಟ್‌ ಶಾಲೆಗಳಿಗೆ ಸಮಾನವಾಗಿ ಅಂಗನವಾಡಿ ಕೇಂದ್ರಗಳನ್ನು ಅಭಿವೃದ್ಧಿಪಡಿಸಲಾಗಿದೆ. ಪೌಷ್ಟಿಕ ಆಹಾರ, ಶುದ್ಧ ನೀರು, ಸ್ವಚ್ಛ ಶೌಚಾಲಯಕ್ಕೆ ಆದ್ಯತೆ ನೀಡಲಾಗಿದೆ.

ಆಟಕ್ಕೂ ಆದ್ಯತೆ:

‘ಅಂಗನವಾಡಿ ಅಂಗಳದಲ್ಲಿ ಜೋಕಾಲಿ, ಜಾರುಬಂಡಿ ಮುಂತಾದ ಆಟಿಕೆಗಳು ಇವೆ. ಆಟವಾಡುವಾಗ ಬಿದ್ದು ಮಕ್ಕಳಿಗೆ ಗಾಯವಾಗದಿರಲಿ ಎಂದು ನೆಲಕ್ಕೆ ಹಸಿರು ಹುಲ್ಲಿನ ಹೊದಿಕೆ ಅಳವಡಿಸಿದ್ದೇವೆ. ಕಾಂಪೌಂಡ್‌ಗಳಿಗೆ ಸುಣ್ಣಬಣ್ಣ ಬಳಿದು, ಅಲ್ಲಿಯೂ ವರ್ಣರಂಜಿತ ಚಿತ್ರಗಳನ್ನು ಬಿಡಿಸಲಾಗಿದೆ’ ಎಂದು ದೇವಗಿರಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಚನ್ನಕ್ಕ ಕಾರದ ವಿವರಿಸಿದರು.

ಹಾವೇರಿ ತಾಲ್ಲೂಕಿನ ದೇವಗಿರಿ ಗ್ರಾಮದ ಅಂಗನವಾಡಿ ಅಂಗಳದಲ್ಲಿ ಆಟವಾಡುತ್ತಿರುವ ಮಕ್ಕಳು  –ಪ್ರಜಾವಾಣಿ ಚಿತ್ರ: ಮಾಲತೇಶ ಇಚ್ಚಂಗಿ 

ದೇವಗಿರಿಯಲ್ಲಿ ಸುಸಜ್ಜಿತ ಅಂಗನವಾಡಿ ಕೇಂದ್ರಗಳ ಮಾದರಿಯಲ್ಲೇ ಇತರ ಕಡೆಗಳಲ್ಲೂ ಅಭಿವೃದ್ಧಿಪಡಿಸುತ್ತೇವೆ. ಉದ್ಯೋಗ ಖಾತ್ರಿ ಯೋಜನೆಯಡಿ ಹೊಸ ಕಟ್ಟಡ ಪೌಷ್ಟಿಕ ಕೈತೋಟ ಅಭಿವೃದ್ಧಿಪಡಿಸುತ್ತೇವೆ

– ಅಕ್ಷಯ ಶ್ರೀಧರ ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾವೇರಿ ಜಿಲ್ಲಾ ಪಂಚಾಯಿತಿ

‘₹ 14 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ’

‘ಅಮೃತ ಯೋಜನೆ 15ನೇ ಹಣಕಾಸು ಆಯೋಗದ ಅನುದಾನ ಗ್ರಾಮ ಪಂಚಾಯಿತಿ ಸದಸ್ಯರ ನೆರವು ಮತ್ತು ಜನರ ದೇಣಿಗೆಯಿಂದ ₹14 ಲಕ್ಷ ವೆಚ್ಚದಲ್ಲಿ 7 ಅಂಗನವಾಡಿ ಕೇಂದ್ರಗಳನ್ನು ಉನ್ನತೀಕರಿಸಿದ್ದೇವೆ. ಪುಸ್ತಕ ಆಟಿಕೆಗಳನ್ನು ಜೋಡಿಸಿಡಲು ರ‍್ಯಾಕ್‌ ಕೊಡಿಸಿದ್ದೇವೆ. ಮಕ್ಕಳು ತಪ್ಪದೇ ಅಂಗನವಾಡಿ ಕೇಂದ್ರಗಳಿಗೆ ಬರುತ್ತಿರುವುದು ಸಂತಸ ತಂದಿದೆ’ ಎಂದು ದೇವಗಿರಿ ಗ್ರಾಮ ಪಂಚಾಯಿತಿ ಪಿಡಿಒ ಸುನೀತಾ ಗರಡಿ ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.