ಹಾನಗಲ್ ಗುರುಭವನದಲ್ಲಿ ತಾಲ್ಲೂಕಿನ 50 ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಅಳವಡಿಸುವ ಕಾರ್ಯಕ್ಕೆ ಶಾಸಕ ಶ್ರೀನಿವಾಸ ಮಾನೆ ಚಾಲನೆ ನೀಡಿದರು
ಹಾನಗಲ್: ಸ್ಥಳೀಯರ ಸಹಭಾಗಿತ್ವದಲ್ಲಿ ಸರ್ಕಾರಿ ಶಾಲೆಗಳಿಗೆ ಸೌಲಭ್ಯ ಕಲ್ಪಿಸುವ ಪರಿಕಲ್ಪನೆ ಕಳೆದ 2 ವರ್ಷಗಳ ಹಿಂದೆ ತಾಲ್ಲೂಕಿನಲ್ಲಿ ಚಾಲನೆ ಪಡೆದು ಯಶಸ್ವಿಯಾಗಿ ನಡೆದಿದೆ. ಅದೇ ಈಗ ಬೇರು-ಚಿಗುರು ಯೋಜನೆಯಾಗಿ ರಾಜ್ಯಮಟ್ಟದಲ್ಲಿ ಚಾಲನೆ ಪಡೆಯುತ್ತಿರುವುದು ಸಂತಸ ತಂದಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಇಲ್ಲಿನ ಗುರುಭವನದಲ್ಲಿರುವ ಹ್ಯುಮಾನಿಟಿ ಫೌಂಡೇಷನ್ ಪರಿವರ್ತನ ಕಲಿಕಾ ಕೇಂದ್ರದಲ್ಲಿ ಶನಿವಾರ ತಾಲ್ಲೂಕಿನ 50 ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಅಳವಡಿಕೆ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ಬೇರು-ಚಿಗುರು ಎಂಬ ಶೈಕ್ಷಣಿಕ ಉನ್ನತಿಯ ಹೊಸ ಯೋಜನೆಗೆ ಚಾಲನೆ ನೀಡಿದ್ದು, ಸರ್ಕಾರ ಮಾತ್ರವಲ್ಲ, ಸ್ಥಳೀಯರ ಸಹಭಾಗಿತ್ವದಲ್ಲಿ ಶಾಲೆಗಳ ಸುಧಾರಣೆ ಅತ್ಯಂತ ಯಶಸ್ವಿಯಾಗಿ
ಕೈಗೊಳ್ಳಲು ಸಾಧ್ಯವಾಗಲಿದೆ ಎಂದರು.
ಮೊದಲ ಹಂತದಲ್ಲಿ ತಾಲ್ಲೂಕಿನ 50 ಸರ್ಕಾರಿ ಶಾಲೆಗಳನ್ನು ಸ್ಮಾರ್ಟ್ ಶಾಲೆಗಳನ್ನಾಗಿ ಪರಿವರ್ತಿಸಲಾಗುತ್ತಿದ್ದು, ಇದರಿಂದ 10 ಸಾವಿರ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ದಾನಿಗಳು, ವಿವಿಧ ಸಂಸ್ಥೆಗಳ ಸಹಭಾಗಿತ್ವ ಪಡೆದು ಇಂತಹ ಶೈಕ್ಷಣಿಕ ಸೌಲಭ್ಯಗಳನ್ನು ಈ ಹಳ್ಳಿಯ ಮಕ್ಕಳಿಗೆ ನೀಡುವ ಕಾರ್ಯದಲ್ಲಿ ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಇಂಡಿಯಾ 41 ಕ್ಲಬ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ ಸರಸ್ವತುಲಾ ಮಾತನಾಡಿ, ಇಂದಿನ ಮಕ್ಕಳೇ ದೇಶದ ಭವಿಷ್ಯದ ಬುನಾದಿ. ಅವರ ಭವಿಷ್ಯ ರೂಪಿಸುವುದೆಂದರೆ, ದೇಶವನ್ನು ಸದೃಢ ಮಾಡಿದಂತೆ.
ರಾಜ್ಯದಲ್ಲಿ 10 ಲಕ್ಷ ಮಕ್ಕಳಿಗೆ ಸ್ಮಾರ್ಟ್ ಕ್ಲಾಸ್ ಸೌಲಭ್ಯ ಕಲ್ಪಿಸಿ ಡಿಜಿಟಲ್ ಶಿಕ್ಷಣ ನೀಡುವ ಗುರಿ ನಮ್ಮದು ಎಂದರು.
ಬೆಂಗಳೂರಿನ ಎಕಸೆನ್ ಅಗ್ರಿಸೈನ್ಸ್ ಚೀಫ್ ಆಪರೇಟಿಂಗ್ ಅಫೀಸರ್ ಅನಿಲ್ ಮಲ್ಲಪ್ಪ, ಬಿಇಒ ವಿ.ವಿ.ಸಾಲಿಮಠ ಮಾತನಾಡಿದರು. 41 ಕ್ಲಬ್ ರಾಷ್ಟ್ರೀಯ ಕೋಶಾಧ್ಯಕ್ಷ ಮಧುಬಾಬು, ಏರಿಯಾ 10 ಚೇರಮನ್ ಕಿರಣ ಹೆಬಸೂರ, ಎಫ್‌ಟಿಡಿಇ ಏರಿಯಾ ಕನ್ವೇನರ್ ಪರಶುರಾಮ ಶಾಲಗಾರ,
ಪರಿವರ್ತನ ಕಲಿಕಾ ಕೇಂದ್ರದ ಆಡಳಿತಾಧಿಕಾರಿ ಪ್ರೊ.ಮಾರುತಿ ಶಿಡ್ಲಾಪುರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.