ಹಾವೇರಿ: ರಾಜ್ಯ ಸರ್ಕಾರದ ನಿರ್ದೇಶನದಂತೆ ಸೆ. 22ರಿಂದ ಅಕ್ಟೋಬರ್ 7ರವರೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಿದ್ಧತೆ ಮಾಡಿಕೊಂಡಿದ್ದು, ಪ್ರತಿ ಗಣತಿದಾರನಿಗೆ 150 ಮನೆಗಳ ಜವಾಬ್ದಾರಿ ವಹಿಸಲಾಗಿದೆ.
ನಗರದ ಹುಕ್ಕೇರಿಮಠದ ಶಾಲೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಪಟ್ಟಂತೆ ಗಣತಿದಾರರಿಗೆ ಶನಿವಾರ ತರಬೇತಿ ಶಿಬಿರ ನಡೆಯಿತು.
ಶಿಬಿರದಲ್ಲಿ ಪಾಲ್ಗೊಂಡಿದ್ದ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ, ‘ಇದೊಂದು ರಾಜ್ಯ ಸರ್ಕಾರದ ಮಹತ್ವದ ಕೆಲಸ. ಎಲ್ಲ ಗಣತಿದಾರರು ತಮ್ಮ ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಬೇಕು’ ಎಂದರು.
‘ರಾಜ್ಯ ಸರ್ಕಾರ ಆದೇಶದಂತೆ ಸೆ. 22ರಿಂದ ಅ. 7ರವರೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯಲಿದೆ. ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಲಾಗುತ್ತಿದೆ. ಹೀಗಾಗಿ, ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಪ್ರಧಾನ ತರಬೇತುದಾರರಿಗೆ ತರಬೇತಿ ನೀಡಲಾಗಿದೆ. ಅವರುಗಳಿಗೆ ಅಗತ್ಯ ಕೈಪಿಡಿ ಮತ್ತು ಆ್ಯಪ್ ಬಗ್ಗೆಯೂ ತಿಳಿಸಲಾಗಿದೆ’ ಎಂದರು.
‘ಜಿಲ್ಲೆಯಲ್ಲಿ ಹೆಸ್ಕಾಂ ಸಿಬ್ಬಂದಿ ಈಗಾಗಲೇ ವಿದ್ಯುತ್ ಮೀಟರ್‌ಗಳನ್ನು ಆಧರಿಸಿ ಬಹುತೇಕ ಮನೆಗಳಿಗೆ ಸ್ಟಿಕರ್ ಅಂಟಿಸಿದ್ದಾರೆ. ಪ್ರತಿ ಗಣತಿದಾರರು ಸುಮಾರು 150 ಮನೆಗಳಿಗೆ ಸಮಿಕ್ಷೆ ಮಾಡಬೇಕಾಗಿದೆ. ಈ ಸಮೀಕ್ಷೆ ನಿಗದಿತ ಅವಧಿಯೊಳಗೆ ಮುಗಿಸಬೇಕು. ಗಣತಿದಾರರು ಕೇಳುವ 60 ಪ್ರಶ್ನೆಗಳಿಗೆ ಉತ್ತರ ನೀಡುವಂತೆ ಆಶಾ ಕಾರ್ಯಕರ್ತೆಯರ ಮೂಲಕ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ’ ಎಂದು ಹೇಳಿದರು.
‘ಪ್ರತಿ ಹತ್ತು ವರ್ಷಗಳಿಗೊಮ್ಮೆ ಗಣತಿಯು ನಡೆಯುತ್ತದೆ. 2011ರ ನಂತರ ಯಾವುದೇ ಗಣತಿ ಆಗಿಲ್ಲ. ಹೀಗಾಗಿ, ಸರ್ಕಾರ ಎಲ್ಲ ಇಲಾಖೆಗಳಿಗೆ ಅನುಕೂಲವಾಗುವಂತೆ ಯೋಜನೆಗಳನ್ನು ರೂಪಿಸುವುದಕ್ಕಾಗಿ ಈ ಸಮೀಕ್ಷೆ ನಡೆಸುತ್ತಿದೆ. ಈ ಸಮೀಕ್ಷೆಯು ಆ್ಯಪ್ ಮೂಲಕ ಪ್ರತಿ ಕುಟುಂಬದ ಮಾಹಿತಿಯನ್ನು, ದತ್ತಾಂಶಗಳನ್ನು ಸಂಗ್ರಹ ಮಾಡಲಾಗುತ್ತಿದೆ. ಒಮ್ಮೆ ದಾಖಲಿಸಿದ ಮಾಹಿತಿಯನ್ನು ತಿದ್ದುಪಡಿ ಮಾಡಲು ಅವಕಾಶ ಇರುವುದಿಲ್ಲ. ಹೀಗಾಗಿ, ಜನರು ಸರಿಯಾದ ಮಾಹಿತಿ ನೀಡಬೇಕು. ಗಣತಿದಾರರು ಸಹ ಸೂಕ್ತ ಮಾಹಿತಿಯನ್ನು ದಾಖಲಿಸಿಕೊಳ್ಳಬೇಕು’ ಎಂದು ತಿಳಿಸಿದರು.
ಶಿಬಿರದಲ್ಲಿ ಉಪ ವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಸುಬ್ರಾ ನಾಯ್ಕ, ತಹಶೀಲ್ದಾರ ಶರಣಮ್ಮ ಕೆ., ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್. ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.