ಶಿಗ್ಗಾವಿ: ಇಲ್ಲಿಯ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಹೊಸ ಕಟ್ಟಡದ ನಿರ್ಮಾಣ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದು, ಬಹುಬೇಗನೇ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಸದ್ಯದ ಹಳೇ ಕಟ್ಟಡದಲ್ಲಿ ಇಕ್ಕಟ್ಟಾದ ಜಾಗದಲ್ಲಿಯೇ ಗಂಟೆಗಟ್ಟಲೇ ಸರದಿಯಲ್ಲಿ ನಿಂತು ಜನರು ಚಿಕಿತ್ಸೆ ಪಡೆಯಲು ಪರದಾಡುತ್ತಿದ್ದಾರೆ. ಜಾಗದ ಕೊರತೆಯಿಂದಾಗಿ ಕಾರಿಡಾರ್‌ನಲ್ಲಿ ಬೆಡ್‌ಗಳನ್ನು ಹಾಕಿ ರೋಗಿಗಳಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಆಸ್ಪತ್ರೆಯ ಕಟ್ಟಡ ಹಳೆಯದ್ದಾಗಿ, ಶಿಥಿಲಾವಸ್ಥೆ ತಲುಪಿದೆ. ಇದೇ ಕಾರಣಕ್ಕೆ 250 ಬೆಡ್‌ಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಿ ಹೊಸ ಕಟ್ಟಡ ನಿರ್ಮಾಣಕ್ಕೆ ಕಾಮಗಾರಿ ಆರಂಭಿಸಲಾಗಿದೆ. ಹಲವು ವರ್ಷವಾದರೂ ಕಾಮಗಾರಿ ಮುಗಿಯುತ್ತಿಲ್ಲ. ಹಳೇ ಕಟ್ಟಡದಲ್ಲಿ ಸ್ಥಳದ ಅಭಾವದಿಂದ ಜನರಿಗೆ ಸೂಕ್ತ ಚಿಕಿತ್ಸೆ ಲಭ್ಯವಾಗುತ್ತಿಲ್ಲ.
ನಿತ್ಯವೂ ಆಸ್ಪತ್ರೆಗೆ 300ರಿಂದ 400 ಜನರು ಬಂದು ಹೋಗುತ್ತಿದ್ದಾರೆ. ಆಸ್ಪತ್ರೆಯ ಕಟ್ಟಡದೊಳಗೆ ಜಾಗ ಇಕ್ಕಟ್ಟಾಗಿದ್ದು, ಜನರು ಸರದಿ ಸಾಲಿನಲ್ಲಿ ಗಂಟೆಗಟ್ಟಲೇ ನಿಂತು ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ. ಜೊತೆಗೆ, ಇಕ್ಕಟ್ಟಾದ ಜಾಗದಿಂದಾಗಿ ಒಳರೋಗಿಗಳ ವಿಭಾಗದಲ್ಲಿ ಜನರಿಗೆ ಬೆಡ್‌ಗಳು ಸಿಗದ ಸ್ಥಿತಿಯೂ ಇದೆ.
ಹಳೇ ಕಟ್ಟಡದ ಕೆಲ ಭಾಗ ನೆಲಸಮ: 100 ಬೆಡ್ ಆಸ್ಪತ್ರೆಯ ಹಳೇ ಕಟ್ಟಡದ ಕೆಲ ಭಾಗವನ್ನು ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಹಳೇ ಕಟ್ಟಡದ ಕೆಲ ಭಾಗವನ್ನು ನೆಲಸಮ ಮಾಡಿರುವುದರಿಂದ, ಸದ್ಯ ಜಾಗದ ಸಮಸ್ಯೆ ಹೆಚ್ಚಾಗಿದೆ. ಬೆಡ್ ಹಾಕಲು ಸಹ ಜಾಗವಿಲ್ಲದಷ್ಟು ಕಟ್ಟಡ ಇಕ್ಕಟಾಗಿದೆ. ಕಾರಿಡಾರ್‌ನಲ್ಲೂ ಬೆಡ್ ಹಾಕಿ, ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಹವಾಮಾನ ಬದಲಾವಣೆಯಿಂದಾಗಿ ಜ್ವರ, ಕೆಮ್ಮು, ನೆಗಡಿ, ಮೈ ಕೈ ನೋವು ಹಾಗೂ ತಲೆನೋವಿನಂಥ ಆರೋಗ್ಯ ಸಮಸ್ಯೆಗಳು ಜನರಲ್ಲಿ ಕಾಣಿಸುತ್ತಿವೆ. ಇವುಗಳಿಗೆ ಚಿಕಿತ್ಸೆ ಪಡೆಯಲು ಜನರು, ಆಸ್ಪತ್ರೆಗೆ ಬಂದು ಚೀಟಿ ಮಾಡಿಸುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಸ್ಪತ್ರೆಗೆ ಬರುತ್ತಿದ್ದಾರೆ. ಇದರಿಂದಾಗಿ ಸದ್ಯ ಬೆಡ್‌ಗಳ ಅಭಾವವೂ ಉಂಟಾಗುತ್ತಿದೆ. ಬೆಡ್ ಸಿಗದಿದ್ದರಿಂದ, ಕೆಲವರು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದಾರೆ.
ರಾತ್ರಿ ಸೇವೆ ಅಲಭ್ಯ: ರಾಷ್ಟ್ರೀಯ ಹೆದ್ದಾರಿ ಹಾಗೂ ಪ್ರಮುಖ ರಸ್ತೆಗಳನ್ನು ಒಳಗೊಂಡಿರುವ ಶಿಗ್ಗಾವಿ ತಾಲ್ಲೂಕಿನಲ್ಲಿ ಅಪಘಾತಗಳು ಆಗಾಗ ಸಂಭವಿಸುತ್ತವೆ. ಆಸ್ಪತ್ರೆಯಲ್ಲಿ ರಾತ್ರಿ ಸಂದರ್ಭದಲ್ಲಿ ರೋಗಿಗಳಿಗೆ ತುರ್ತು ಚಿಕಿತ್ಸೆ ಸಿಗುವುದು ವಿಳಂಬವಾಗುತ್ತಿರುವುದಾಗಿ ಜನರು ಆರೋಪಿಸುತ್ತಿದ್ದಾರೆ.
’ತುರ್ತು ಚಿಕಿತ್ಸಾ ವಿಭಾಗದಲ್ಲಿ ರಾತ್ರಿ ವೈದ್ಯರು ಹಾಗೂ ಸಿಬ್ಬಂದಿ ಇರುವುದಿಲ್ಲ. ಇದರಿಂದ ಜನರಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ರಾತ್ರಿ ಸಂದರ್ಭದಲ್ಲಿ ವೈದ್ಯರು ಕಡ್ಡಾಯವಾಗಿ ಆಸ್ಪತ್ರೆಯಲ್ಲಿ ಇರುವಂತೆ ನೋಡಿಕೊಳ್ಳಬೇಕು’ ಎಂದು ಸ್ಥಳೀಯರು ಆಗ್ರಹಿಸಿದರು.
ವೈದ್ಯರ ಕೊರತೆ: ಆಸ್ಪತ್ರೆಯಲ್ಲಿ 15 ವೈದ್ಯರ ಹುದ್ದೆಗಳು ಮಂಜೂರಾಗಿದೆ. ಸದ್ಯ 9 ವೈದ್ಯರು ಮಾತ್ರ ಕೆಲಸ ಮಾಡುತ್ತಿದ್ದಾರೆ. 6 ಹುದ್ದೆಗಳು ಖಾಲಿ ಇವೆ. 20 ಜನ ಶುಶ್ರೂಷಕರು, 32 ಗ್ರೂಪ್ ಡಿ ನೌಕರರ ಹುದ್ದೆಗಳೂ ಭರ್ತಿಯಾಗಿಲ್ಲ. ಲಭ್ಯವಿರುವ ವೈದ್ಯರು ಒತ್ತಡದಲ್ಲಿ ಜನರ ತಪಾಸಣೆ ಮಾಡುತ್ತಿದ್ದಾರೆ.
ಆಸ್ಪತೆಯಲ್ಲಿ ಪ್ರಯೋಗಾಲಯ ಹಾಗೂ ಶಸ್ತ್ರ ಚಿಕಿತ್ಸಾ ಸಾಮಗ್ರಿಗಳು ಉತ್ತಮವಾಗಿವೆ. ಅವುಗಳನ್ನು ಇರಿಸಿರುವ ಜಾಗವೂ ಇಕ್ಕಟ್ಟಾಗಿದೆ. ಅವುಗಳನ್ನು ಸರಿಯಾಗಿ ಬಳಕೆ ಮಾಡುವ ತಜ್ಞ ವೈದ್ಯರ ಕೊರತೆಯಿದೆ.
ತುರ್ತು ಚಿಕಿತ್ಸಾ ವಿಭಾಗ, ರಕ್ತ ತಪಾಸಣೆ, ದಂತ ಚಿಕಿತ್ಸೆ ವಿಭಾಗ, ಡಯಾಲಿಸೀಸ್ ಘಟಕ ಕಾರ್ಯನಿರ್ವಹಿಸುತ್ತಿವೆ. ಎಲ್ಲ ಡಕೆಯೂ ನುರಿತ ಮತ್ತು ತಜ್ಞ ವೈದ್ಯರ ಕೊರತೆ ಇದೆ. ಇದರಿಂದಾಗಿ ರೋಗಗಳಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಹೊಸ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಿ, ಸೇವೆಗೆ ಲಭ್ಯಗೊಳಿಸಬೇಕು ಎಂದು ಜನರು ಆಗ್ರಹಿಸುತ್ತಿದ್ದಾರೆ.
’ಹೆಚ್ಚಿರುವ ನೈರ್ಮಲ್ಯ‘
ಆಸ್ಪತ್ರೆಯ ಹಲವೆಡೆ ನೈರ್ಮಲ್ಯ ಹೆಚ್ಚಾಗಿದೆ. ಆಸ್ಪತ್ರೆಯ ನೆಲವನ್ನು ಸಮರ್ಪಕವಾಗಿ ತೊಳೆಯುತ್ತಿಲ್ಲ. ಅಕ್ಕ–ಪಕ್ಕದ ಪರಿಸರವನ್ನೂ ಶುಚಿಗೊಳಿಸುತ್ತಿಲ್ಲ. ಇದರಿಂದಾಗಿ ಆಸ್ಪತ್ರೆಗೆ ಬರುವ ಹಲವು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಇದೆ. ಹಳೇ ಕಟ್ಟಡವಾದರೂ ಸ್ವಚ್ಛತೆಯನ್ನಾದರೂ ಸರಿಯಾಗಿ ಮಾಡಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ. ಬಡವರು ಮದ್ಯಮ ವರ್ಗದವರು ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡುತ್ತಾರೆ. ಇವರ ಜೊತೆಯಲ್ಲಿ ಸಿಬ್ಬಂದಿ ಸೌಜನ್ಯದಿಂದ ವರ್ತಿಸುತ್ತಿಲ್ಲ. ಇದೇ ಕಾರಣಕ್ಕೆ ಆಸ್ಪತ್ರೆಗಳಲ್ಲಿ ಜನರು ಹಾಗೂ ಸಿಬ್ಬಂದಿ ನಡುವೆ ಆಗಾಗ ಮಾತಿನ ಚಕಮಕಿಗಳು ನಡೆಯುತ್ತಿವೆ. ‘ಮಾಜಿ ಮುಖ್ಯಮಂತ್ರಿಯ ಕ್ಷೇತ್ರವಿದು. ಆದರೆ ಆಸ್ಪತ್ರೆಯಲ್ಲಿ ಸೌಕರ್ಯಗಳ ಕೊರತೆ ಸಾಕಷ್ಟಿದೆ. ಹೊಸ ಕಟ್ಟಡ ಬೇಗನೇ ಮುಗಿಯುವ ಭರವಸೆ ಇತ್ತು. ಆದರೆ ಇದುವರೆಗೂ ಮುಗಿದಿಲ್ಲ. ಆಸ್ಪತ್ರೆಯ ಗೋಳು ಇನ್ನು ಎಷ್ಟು ದಿನ ಅನುಭವಿಸಬೇಕು‘ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.
ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಸಾಧ್ಯವಾದಷ್ಟು ಬೆಡ್ ವ್ಯವಸ್ಥೆ ಮಾಡಲಾಗುತ್ತಿದೆ. ನೂತನ ಕಟ್ಟಡ ಮುಗಿಯುವವರೆಗೆ ಸ್ಪಲ್ಪ ಸಮಸ್ಯೆಯಾಗಲಿದೆ-ಡಾ. ಲಕ್ಷ್ಮಣ ನಾಯಕ ಆಡಳಿತ ವೈದ್ಯಾಧಿಕಾರಿ (ಪ್ರಭಾರಿ) ಶಿಗ್ಗಾವಿ ಆಸ್ಪತ್ರೆ
ಕಟ್ಟಡ ಕಾಮಗಾರಿ ಆಮೆ ವೇಗದಲ್ಲಿ ಸಾಗುತ್ತಿದೆ. ಹಳೇ ಕಟ್ಟಡದಲ್ಲಿ ಬೆಡ್‌ಗಳು ಸಿಗದೇ ಜನರು ಪರದಾಡುತ್ತಿದ್ದಾರೆ. ಆಸ್ಪತ್ರೆಯಲ್ಲಿ ಖಾಲಿ ಇರುವ ವೈದ್ಯರ ಹುದ್ದೆಗಳನ್ನಾದರೂ ತುರ್ತಾಗಿ ಭರ್ತಿ ಮಾಡಬೇಕು-ಶಿವರಾಮಗೌಡ ಪಾಟೀಲ ಶಿಗ್ಗಾವಿ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.