ADVERTISEMENT

ಮೈಲಾರ ಜಾತ್ರೆ: ಭಕ್ತರ ಪ್ರಯಾಣಕ್ಕೆ ವಿಶೇಷ ಬಸ್

ಹಾವೇರಿ, ರಾಣೆಬೆನ್ನೂರಿನಿಂದ ಸಾರಿಗೆ ಸಂಚಾರ, ನಿಲ್ದಾಣಗಳಲ್ಲಿ ಶಾಮಿಯಾನ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 7:19 IST
Last Updated 4 ಫೆಬ್ರುವರಿ 2026, 7:19 IST
ಹಾವೇರಿ ನಿಲ್ದಾಣದಿಂದ ವಾಕರಸಾಸಂ ಬಸ್‌ನಲ್ಲಿ ಮೈಲಾರ ಜಾತ್ರೆಗೆ ಮಂಗಳವಾರ ಹೊರಟ ಪ್ರಯಾಣಿಕರು 
ಹಾವೇರಿ ನಿಲ್ದಾಣದಿಂದ ವಾಕರಸಾಸಂ ಬಸ್‌ನಲ್ಲಿ ಮೈಲಾರ ಜಾತ್ರೆಗೆ ಮಂಗಳವಾರ ಹೊರಟ ಪ್ರಯಾಣಿಕರು    

ಹಾವೇರಿ: ಜಿಲ್ಲೆಯ ದೇವರಗುಡ್ಡದ ಮಾಲತೇಶ ಸ್ವಾಮಿ ಹಾಗೂ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಮೈಲಾರದ ಮೈಲಾರಲಿಂಗೇಶ್ವರ ಜಾತ್ರೆಗೆ ಹೋಗಿ ಬರುವ ಭಕ್ತರ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ (ವಾಕರಸಾಸಂ) ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ ಹಾವೇರಿ ಹಾಗೂ ರಾಣೆಬೆನ್ನೂರು ನಿಲ್ದಾಣದಿಂದ ಶಾಮಿಯಾನ ಮೂಲಕ ತಾತ್ಕಾಲಿಕ ತಂಗುದಾಣವನ್ನೂ ನಿರ್ಮಿಸಲಾಗಿದೆ.

ಉತ್ತರ ಕರ್ನಾಟಕದ ಅತಿ ದೊಡ್ಡ ಜಾತ್ರೆ ಎನಿಸಿಕೊಂಡಿರುವ ಮೈಲಾರದ ಜಾತ್ರೆಗೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಭಾರತ ಹುಣ್ಣಿಮೆ ಹಾಗೂ ಅದರ ನಂತರದ ಮೂರು ದಿನಗಳ ಕಾಲ ನಿರಂತರವಾಗಿ ಭಕ್ತರು ಮೈಲಾರಕ್ಕೆ ಹೋಗಿ ಬರುತ್ತಾರೆ. ಜಾತ್ರೆಯಲ್ಲಿ ಗೊರವಜ್ಜ ನುಡಿಯುವ ಕಾರಣಿಕ ಹೆಚ್ಚು ಮಹತ್ವ ಪಡೆದುಕೊಳ್ಳುತ್ತದೆ.

ಫೆ. 4ರಂದು ಮೈಲಾರದಲ್ಲಿ ಕಾರಣಿಕವಿದೆ. ಇದನ್ನು ಆಲಿಸಲು ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದಲೂ ಭಕ್ತರು ಮೈಲಾರಕ್ಕೆ ಬಂದು ಹೋಗುತ್ತಾರೆ. ಇಂಥ ಭಕ್ತರ ಸಂಚಾರಕ್ಕೆ ಅನುಕೂಲವಾಗಲೆಂದು ವಾಕರಸಾಸಂನಿಂದ 145 ಬಸ್‌ಗಳನ್ನು ರಸ್ತೆಗೆ ಇಳಿಸಲಾಗಿದೆ.

ADVERTISEMENT

‘ಹಾವೇರಿ ಹಾಗೂ ರಾಣೆಬೆನ್ನೂರು ನಗರದಿಂದ ದೇವರಗುಡ್ಡ–ಮೈಲಾರಕ್ಕೆ ಹೆಚ್ಚಿನ ಭಕ್ತರು ಹೋಗಿ ಬರುತ್ತಾರೆ. ಇವರ ಅನುಕೂಲಕ್ಕಾಗಿ ಎರಡೂ ನಗರಗಳ ನಿಲ್ದಾಣದಿಂದ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಇದರ ಉಸ್ತುವಾರಿಗೂ ಅಧಿಕಾರಿಗಳನ್ನು ನೇಮಿಸಲಾಗಿದೆ’ ಎಂದು ವಾಕರಸಾಸಂ ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯಕುಮಾರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಜ. 30ರಿಂದಲೇ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಫೆ. 1ರಿಂದ ಫೆ. 3ರವರೆಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಾರೆ. ಈ ದಿನಗಳಂದು ಹೆಚ್ಚಿನ ಬಸ್‌ಗಳನ್ನು ರಸ್ತೆಗೆ ಬಿಡಲಾಗಿದೆ. ಹಾವೇರಿ, ಹಾನಗಲ್, ಸವಣೂರು, ರಾಣೆಬೆನ್ನೂರು, ಹಿರೇಕೆರೂರು, ಬ್ಯಾಡಗಿ ಘಟಕಗಳಿಂದ ಬಸ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ’ ಎಂದರು.

ಶಾಮಿಯಾನ ವ್ಯವಸ್ಥೆ: ‘ಜಾತ್ರಾ ಸ್ಥಳಗಳಲ್ಲಿ ಬಸ್‌ ಸಂಚಾರ ವ್ಯವಸ್ಥೆಗೆ ಅನುಕೂಲವಾಗುವಂತೆ ಶಾಮಿಯಾನ ವ್ಯವಸ್ಥೆ ಮಾಡಲಾಗಿದೆ. ಧ್ವನಿವರ್ಧಕ ಹಾಗೂ ಬೆಳಕಿನ ವ್ಯವಸ್ಥೆಯನ್ನು ಮಾಡಲಾಗಿದೆ. ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಹಾಗೂ ಯಾವುದಾದರೂ ಸಮಸ್ಯೆ ಕಂಡುಬಂದರೆ ತ್ವರಿತವಾಗಿ ಸ್ಪಂದಿಸಲು ವಿಶೇಷ ಅಧಿಕಾರಿಗಳನ್ನು ನಿಯೋಜಿಸಲಾಗಿದೆ’ ಎಂದು ವಿಭಾಗೀಯ ಸಂಚಾರ ಅಧಿಕಾರಿ ಅಶೋಕ ಪಾಟೀಲ ತಿಳಿಸಿದರು.

‘ಹಾವೇರಿ–ರಾಣೆಬೆನ್ನೂರು ಬಸ್ ನಿಲ್ದಾಣ, ದೇವರಗುಡ್ಡ, ಮೈಲಾರ, ಬಸವಣ್ಣನ ಗುಡಿ, ಚಂದಾಪುರ, ಗುತ್ತಲ, ಮೈಲಾರ ಕ್ರಾಸ್‌ಗಳಲ್ಲಿ ಶಾಮಿಯಾನ ಹಾಕಲಾಗಿದೆ’ ಎಂದರು.

ಶಕ್ತಿ ಯೋಜನೆ ಪ್ರಭಾವ: ಪ್ರತಿ ವರ್ಷದಂತೆ ಈ ವರ್ಷವೂ ಹಾವೇರಿಯಿಂದ ಮೈಲಾರ ಜಾತ್ರೆಗೆ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಶಕ್ತಿ ಯೋಜನೆ ಜಾರಿಯಲ್ಲಿರುವುದರಿಂದ, ಅತೀ ಹೆಚ್ಚಿನ ಮಹಿಳಾ ಪ್ರಯಾಣಿಕರು ಬಸ್‌ಗಳಲ್ಲಿ ಪ್ರಯಾಣಿಸಲಿದ್ದಾರೆ. ಇದೇ ಕಾರಣಕ್ಕೆ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.

ಮಹಿಳಾ ಪ್ರಯಾಣಿಕರ ಜೊತೆ ಸೌಜನ್ಯದಿಂದ ವರ್ತಿಸುವಂತೆಯೂ ಚಾಲಕರು ಹಾಗೂ ನಿರ್ವಾಹಕರಿಗೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಹಾವೇರಿ, ರಾಣೆಬೆನ್ನೂರು ಮಾತ್ರವಲ್ಲದೇ ಗುತ್ತಲ, ಬ್ಯಾಡಗಿ, ಹೊಸರಿತ್ತಿ, ಲಕ್ಷೇಶ್ವರ, ರಾಮದುರ್ಗ ನಿಲ್ದಾಣಗಳಿಂದಲೂ ದೇವರಗುಡ್ಡ–ಮೈಲಾರಕ್ಕೆ ಬಸ್‌ಗಳು ಓಡಾಡಲಿವೆ.

ಮನೆಗಳ ಬಗ್ಗೆ ಹುಷಾರು: ಪೊಲೀಸರು ಗುತ್ತಲ ಠಾಣೆ ವ್ಯಾಪ್ತಿಯ ನಿವಾಸಿಗಳಲ್ಲಿ ಬಹುತೇಕರು ದೇವರಗುಡ್ಡ ಹಾಗೂ ಮೈಲಾರ ಜಾತ್ರೆಗೆ ಹೋಗಿಬರುತ್ತಾರೆ. ಇಂಥ ಸಂದರ್ಭದಲ್ಲಿ ಕೆಲವರು ಮನೆ ಮಂದಿಯೆಲ್ಲ ಜಾತ್ರೆಯಲ್ಲಿರುತ್ತಾರೆ. ಇಂಥ ಸಂದರ್ಭದಲ್ಲಿ ಮನೆಗಳಲ್ಲಿ ಕಳ್ಳತನ ನಡೆಯುವ ಸಾಧ್ಯತೆಯಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಗುತ್ತಲ ಠಾಣೆ ಪೊಲೀಸರು ‘ಮನೆಗಳಲ್ಲಿ ಇಟ್ಟಿರುವ ಬೆಲೆಬಾಳುವ ವಸ್ತುಗಳ ಬಗ್ಗೆ ಜೋಪಾನ’ ಎಂದು ಹೇಳುತ್ತಿದ್ದಾರೆ. ‘ಜಾತ್ರೆಗೆ ಹೋಗುವ ಸಡಗರದ ಸಂದರ್ಭದಲ್ಲಿ ಮನೆ ಬಗ್ಗೆ ಹುಷಾರಾಗಿರಬೇಕು. ಯಾವುದೇ ರೀತಿಯ ಬೆಲೆಬಾಳುವ ವಸ್ತುಗಳನ್ನು ಇಟ್ಟು ಹೋಗತಕ್ಕದ್ದಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.

ಹಾವೇರಿ ಕೇಂದ್ರ ನಿಲ್ದಾಣದಲ್ಲಿ ಜಾತ್ರೆ ಬಸ್‌ಗಳ ಪ್ರಯಾಣಿಕರ ಅನುಕೂಲಕ್ಕೆ ಶಾಮಿಯಾನ್ ನಿರ್ಮಿಸಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.