
ಶಿಗ್ಗಾವಿ: ಮೌಲ್ಯಾಧಾರಿತ ಬದುಕಿಗೆ ಮನುಷ್ಯನಲ್ಲಿ ಸದ್ಗುಣಗಳು ಅವಶ್ಯಕವಾಗಿವೆ. ಅದರಿಂದ ವ್ಯಕ್ತಿಯ ವ್ಯಕ್ತಿತ್ವ ಹೆಚ್ಚಿಸಲು ಸಾಧ್ಯವಿದೆ. ಆದ್ದರಿಂದ ಇಂತಹ ಧರ್ಮ ಸಮಾರಂಭದಿಂದ ಮೂಡಲು ಸಾಧ್ಯವಿದೆ ಎಂದು ಬಂಕಾಪುರ ಕಸಾಪ ಹೋಬಳಿ ಘಟಕದ ಅಧ್ಯಕ್ಷ ಎ.ಕೆ.ಆದವಾನಿಮಠ ಹೇಳಿದರು.
ತಾಲ್ಲೂಕಿನ ಬಂಕಾಪುರ ಪಟ್ಟಣದ ಹುಚ್ಚೇಶ್ವರ ಮಹಾಮಠದಲ್ಲಿ ಮಂಗಳವಾರ ನಡೆದ ಇಷ್ಟಲಿಂಗಪೂಜೆ ಸಿದ್ದಾಂತ ಶಿಖಾಮಣಿ ಪಾರಾಯಣ, ಮುತ್ತೈದೆಯರಿಗೆ ಉಡಿ ತುಂಬುವುದು ಹಾಗೂ 21ನೇ ಜನ ಜಾಗೃತಿ ಧರ್ಮ ಸಮಾರಂಭದಲ್ಲಿ ಅವರು ಮಾತನಾಡಿದರು.
ಪರಂಪರಾಗತವಾಗಿ ಅನೇಕ ರಾಜ ಮನೆತನಗಳು ನಾಡು, ನುಡಿಗಾಗಿ ಶ್ರಮಿಸಿವೆ. ಅದರಲ್ಲಿ ಬಂಕಾವುರ ಕೋಟೆ ರಾಷ್ಟ್ರಕೂಟರ ಪ್ರಮುಖ ಕೇಂದ್ರವಾಗಿತು. ಹೀಗಾಗಿ ದೇವಾಲಯಗಳ ತವರೂರು ಎನ್ನಿಸಿಕೊಂಡಿದೆ. ಇಲ್ಲಿ ಪ್ರತಿಯೊಂದು ದೇವಾಲಯಗಳಿವೆ. ರಾಜಮನೆತನಗಳು ಮಠಮಂದಿರಗಳನ್ನು ಸಂರಕ್ಷಣೆ ಮಾಡುವ ಮೂಲಕ ಮೂಲ ಸಂಸ್ಕಾರ, ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.
ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಮಾತನಾಡಿ, ಸನಾತನ ಪರಂಪರೆಯನ್ನು ಮಠಮಂದಿಗಳು ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಇತರರಲ್ಲಿನ ಲೋಪದೋಷಗಳ ಮಾತನಾಡುವುದನ್ನು ಬಿಟ್ಟು ಅದರಲ್ಲಿ ನಮ್ಮ ಪಾತ್ರದ ಬಗ್ಗೆ ಅರಿಯಬೇಕು. ಸಮಾಜಕ್ಕಾಗಿ ನಮ್ಮ ಕೊಡುಗೆ ನೀಡುವಂತಾಗಬೇಕು ಎಂದರು.
ಅಂಕಣಕಾರ, ವಾಗ್ಮೀ ಕಿರಣ ವಿವೇಕವಂಶಿ ಉಪನ್ಯಾಸ ನೀಡಿ, ಜಗತ್ತಿನಲ್ಲಿ ಭಾರತ ಜ್ಞಾನದ ಬೆಳಕಾಗಿದ್ದು, ಹೀಗಾಗಿ ಭಾರತ ದೇಶ ಜಗತ್ತಿಗೆ ವಿಶ್ವಗುರು ಎನ್ನಿಸಿಕೊಳ್ಳಲು ಸಾಧ್ಯವಾಗಿದೆ. ಇಷ್ಟಲಿಂಗ ಪೂಜೆ ಸಲ್ಲಿಸುವ ಮೂಲಕ ಆರೋಗ್ಯ ಆಯುಷ್ಯ ಹೆಚ್ಚಿಸಿಕೊಳ್ಳಲು ಸಾಧ್ಯವಿದೆ ಎಂದರು.
ಅಗಡಿ ಆನಂದವನದ ವಿಶ್ವನಾಥ ಚಕ್ರವರ್ತಿ ಮಾತನಾಡಿ, ಸನಾತನ ಧರ್ಮ ಸಂರಕ್ಷಣೆ ಹೊಣೆ ನಮ್ಮದಾಗಿದ್ದು, ಧರ್ಮದ ಶಕ್ತಿಯಿಂದ ದೇಶ ಸದೃಢವಾಗಿ ನಿಂತಿದೆ. ಆದರೆ ನೂರಾರು ದೇಶಗಳು ನಲುಗಿ ಹೋಗಿವೆ. ಗುರುವಿನ ಕಾರುಣ್ಯದಿಂದ ಆತ್ಮಜ್ಞಾನ ಹೊಂದಲು ಸಾಧ್ಯವಿದೆ ಎಂದರು.
ಬೆಳ್ಳಟ್ಟಿ ರಾಮಲಿಂಗೇಶ್ವರ ದಾಸೋಹಮಠದ ಬಸವರಾಜ ಸ್ವಾಮೀಜಿ, ಜಡೆ ಸಂಸ್ಥಾನಮಠದ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಹಿಳಾ ರುದ್ರಾಣಿ ಬಳಗದಿಂದ ರುದ್ರಪಠಣ ಮತ್ತು ಸಿದ್ಧಾಂತ ಶಿಖಾಮಣಿ ಪಾರಾಯಣ, ಇಷ್ಟಲಿಂಗ ಮಹಾಪೂಜೆ, ಕಲಾವಿದರಾದ ಸಿದ್ಲಿಂಗಪ್ಪ ನರೇಗಲ್ಲ, ಚನ್ನಪ್ಪ ಹಳೇಜೊಪ್ಪದ ಹಾಗೂ ಗುರು.ಎಸ್.ಚಲವಾದಿ ಅವರಿಂದ ಸಂಗೀತ ಕಾರ್ಯಕ್ರಮಗಳು, ಗೌತಮಿ ಕನವಳ್ಳಿ ಅವರಿಂದ ಭರತ ನಾಟ್ಯ ಜರುಗಿದವು.
ಉದ್ಯಮಿ ರಾಘವೇಂದ್ರ ಮೇಲಗೇರಿ, ಮುಖಂಡರಾದ ಶಂಕ್ರಯ್ಯಸ್ವಾಮಿ ಹುಚ್ಚಯ್ಯನಮಠ, ಹುಚ್ಚಪ್ಪ ಹುಚ್ಚಯ್ಯನಮಠ, ಮಲ್ಲಯ್ಯ ಹುಚ್ಚಯ್ಯನಮಠ, ನಿಂಗನಗೌಡ ಪಾಟೀಲ, ರಮೇಶ ಶೆಟ್ಟರ, ಬಾಪುಗೌಡ ಪಾಟೀಲ, ಎಂ.ಬಿ.ಉಂಕಿ, ಸಿದ್ದಪ್ಪ ಹರವಿ ಮುಂತಾದವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.