ಬ್ಯಾಡಗಿ: ಹಾವೇರಿ ವಿಶ್ವವಿದ್ಯಾಲಯದಡಿ ಬರುವ ಕಾಲೇಜುಗಳ ಕ್ರೀಡಾಪಟುಗಳು ಸರ್ಕಾರಿ ಕೆಲಸಕ್ಕೆ ಅರ್ಹತೆ ಪಡೆದುಕೊಂಡಿದ್ದು, ಕಬಡ್ಡಿ ಕ್ರೀಡಾ ಸಾಧಕರಿಗೆ ಉದ್ಯೋಗಾವಕಾಶಗಳು ಹೆಚ್ಚಲಿವೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಹಾವೇರಿ ಜಿಲ್ಲಾ ಅಮೆಚೂರ ಕಬಡ್ಡಿ ಅಸೋಸಿಯೇಷನ್ ಹಾಗೂ ತೀರ್ಪುಗಾರರ ಮಂಡಳಿ ಇವರ ಸಹಯೋಗದಲ್ಲಿ ಗುರುವಾರದಿಂದ 2 ದಿನಗಳವರೆಗೆ ನಡೆಯಲಿರುವ ಹಾವೇರಿ ವಿಶ್ವವಿದ್ಯಾಲಯ ಪುರುಷರ (ಬ್ಲೂ ಸೆಲೆಕ್ಷನ್) ತಂಡದ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದರು.
ಈ ಮೊದಲು ಕರ್ನಾಟಕ ವಿಶ್ವವಿದ್ಯಾಲಯ ತಂಡದಲ್ಲಿ ನಮ್ಮ ಭಾಗದ ಕ್ರೀಡಾಪಟುಗಳಿಗೆ ಅವಕಾಶಗಳ ಕೊರತೆಯಿದ್ದರೂ ಬಹುತೇಕ ಪ್ರತಿಭೆಗಳು ಬೆಳಕಿಗೆ ಬಂದಿವೆ. ಈಗ ಹಾವೇರಿ ವಿಶ್ವವಿದ್ಯಾಲಯ ಅಸ್ತಿತ್ವವನ್ನು ಉಳಿಸಿಕೊಂಡಿದ್ದರಿಂದ ಅದರ ವ್ಯಾಪ್ತಿಯ 42 ಕಾಲೇಜುಗಳ 170 ಕ್ರೀಡಾಪಟುಗಳು ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ ಎಂದರು.
ಕಬಡ್ಡಿ ಕ್ರೀಡೆಗೆ ಬ್ಯಾಡಗಿ ಪ್ರಸಿದ್ಧಿ ಪಡೆದಿದೆ. ನವರಂಗ, ನ್ಯಾಷನಲ್ ಯೂಥ್ ಕ್ಲಬ್‌ಗಳ ಬಳಿಕ ಹಾವೇರಿ ಜಿಲ್ಲಾ ಅಮೆಚೂರ ಕಬಡ್ಡಿ ಅಸೋಸಿಯೇಶನ್ ಕಬಡ್ಡಿಯನ್ನು ಮುಂದುವರೆಸುವ ಹೊಣೆಗಾರಿಕೆ ಪಡೆದುಕೊಂಡಿದೆ. ಹೀಗಾಗಿ 40ಕ್ಕೂ ಹೆಚ್ಚು ಕ್ರೀಡಾಪಟುಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.
ಈ ವೇಳೆ ಪ್ರಾಂಶುಪಾಲ ಮಲ್ಲಿಕಾರ್ಜುನ ಕಡ್ಡಿಪುಡಿ, ಮುಖಂಡರಾದ ದಾನಪ್ಪ ಚೂರಿ, ದುರ್ಗೇಶ ಗೋಣೆಮ್ಮನವರ, ಹಾವೇರಿ ವಿವಿ ಕ್ರೀಡಾ ವಿಭಾಗದ ಮುಖ್ಯಸ್ಥ ಸಿ.ಎನ್.ಸೊರಟೂರು, ಹಾವೇರಿ ಜಿಲ್ಲಾ ಅಮೆಚೂರ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಸಿ.ಜಿ.ಚಕ್ರಸಾಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.