ADVERTISEMENT

ಶ್ರೀರಾಮ ನವಮಿ: ಸಂಭ್ರಮದ ತೊಟ್ಟಿಲೋತ್ಸವ

ಜಿಲ್ಲೆಯ ವಿವಿಧೆಡೆ ರಾಮ ನಾಮ ಜಪ: ದೇಗುಲಗಳಲ್ಲಿ ಪಾನಕ, ಕೋಸಂಬರಿ ವಿತರಣೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2023, 13:16 IST
Last Updated 30 ಮಾರ್ಚ್ 2023, 13:16 IST
ಹಾವೇರಿ ನಗರದ ಜೆ.ಪಿ. ಸರ್ಕಲ್‌ ಸಮೀಪದ ಶ್ರೀರಾಮ ದೇವಸ್ಥಾನದಲ್ಲಿ ಶ್ರೀರಾಮ ನವಮಿ ಅಂಗವಾಗಿ ಗುರುವಾರ ತೊಟ್ಟಿಲೋತ್ಸವ ವೈಭವದಿಂದ ನಡೆಯಿತು 
ಹಾವೇರಿ ನಗರದ ಜೆ.ಪಿ. ಸರ್ಕಲ್‌ ಸಮೀಪದ ಶ್ರೀರಾಮ ದೇವಸ್ಥಾನದಲ್ಲಿ ಶ್ರೀರಾಮ ನವಮಿ ಅಂಗವಾಗಿ ಗುರುವಾರ ತೊಟ್ಟಿಲೋತ್ಸವ ವೈಭವದಿಂದ ನಡೆಯಿತು    

ಹಾವೇರಿ: ಶ್ರೀರಾಮ ನವಮಿ ಅಂಗವಾಗಿ ಗುರುವಾರ ಜಿಲ್ಲೆಯಾದ್ಯಂತ ಶ್ರೀರಾಮ ಮತ್ತು ಆಂಜನೇಯ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮತ್ತು ಅಭಿಷೇಕ ನಡೆದವು. ದೇಗುಲಗಳಲ್ಲಿ ಪಾನಕ, ಕೋಸಂಬರಿ ವಿತರಿಸಲಾಯಿತು.

ಹಾವೇರಿ ನಗರದ ಜೆ.ಪಿ.ಸರ್ಕಲ್‌ ಸಮೀಪದ ಶ್ರೀರಾಮ ದೇವಸ್ಥಾನದಲ್ಲಿ ಬೆಳಿಗ್ಗೆ 6ಕ್ಕೆ ಕಾಕಡಾರತಿ, ಬೆಳಿಗ್ಗೆ 8ಕ್ಕೆ ರುದ್ರಾಭಿಷೇಕ, ಅಲಂಕಾರ ನಡೆದವು. ಪುನರ್ವಸು ನಕ್ಷತ್ರ, ಕರ್ಕ ಲಗ್ನದಲ್ಲಿ ಜನ್ಮತಾಳಿದ ಶ್ರೀರಾಮನಿಗೆ ಮಧ್ಯಾಹ್ನ 12.40ಕ್ಕೆ ತೊಟ್ಟಿಲೋತ್ಸವ ಕಾರ್ಯಕ್ರಮ ನಡೆಯಿತು. ನೂರಾರು ಮಹಿಳೆಯರು ಮತ್ತು ಭಕ್ತರು ಸಂಭ್ರಮದಿಂದ ಪಾಲ್ಗೊಂಡಿದ್ದರು.

ಮಧ್ಯಾಹ್ನ 1ಕ್ಕೆ ಪಲ್ಲಕ್ಕಿ ಸೇವೆ ನಡೆಯಿತು. ನಂತರ ದೇಗುಲಕ್ಕೆ ಬಂದ ಭಕ್ತರಿಗೆ ಪಾನಕ, ಕೋಸಂಬರಿ ಹಂಚಲಾಯಿತು. ಮಧ್ಯಾಹ್ನ 2ಕ್ಕೆ ಉಪಾಹಾರ ಬಡಿಸಲಾಯಿತು.

ADVERTISEMENT

‘ಈ ಪುರಾತನ ಶ್ರೀರಾಮ ದೇವಸ್ಥಾನ 138 ವರ್ಷಗಳ ಇತಿಹಾಸ ಹೊಂದಿದೆ. ಇಲ್ಲಿ ಶ್ರೀರಾಮ, ಸೀತಾಮಾತೆ, ಲಕ್ಷ್ಮಣ ಹಾಗೂ ಆಂಜನೇಯಸ್ವಾಮಿಯ ವಿಗ್ರಹಗಳಿವೆ. ಬೆಳಿಗ್ಗೆ 6ರಿಂದಲೇ ಭಕ್ತರು ದೇಗುಲಕ್ಕೆ ಬಂದು ಅರ್ಚನೆ, ಅಭಿಷೇಕ, ವಿಶೇಷ ಪೂಜೆ ಸಲ್ಲಿಸಿದರು. ಯುಗಾದಿ ಹಬ್ಬದಿಂದ ಒಟ್ಟು 8 ದಿನ (ಮಾರ್ಚ್‌ 31ರವರೆಗೆ) ನಿತ್ಯ ಸಂಜೆ 8 ಗಂಟೆಗೆ ಮಹಾಮಂಗಳಾರತಿ, ಅಷ್ಟಾವಧಾನ, ಪ್ರಸಾದ ವಿನಿಯೋಗ ನಡೆಯುತ್ತಿದೆ. ಶುಕ್ರವಾರ ಮಧ್ಯಾಹ್ನ 1.30ಕ್ಕೆ ಮಹಾಪ್ರಸಾದ ನಡೆಯಲಿದೆ’ ಎಂದು ಶ್ರೀರಾಮ ದೇವಸ್ಥಾನದ ಸೇವಾಕರ್ತ ಹನುಮಂತನಾಯಕ ಬಾದಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.