ADVERTISEMENT

ಎಸ್ಸೆಸ್ಸೆಲ್ಸಿ: 161 ವಿದ್ಯಾರ್ಥಿಗಳು ಗೈರು

ಗಣಿತ ಪರೀಕ್ಷೆಗೆ 20,979 ಮಕ್ಕಳು ಹಾಜರು; 68 ಮಕ್ಕಳಿಗೆ ವಿಶೇಷ ಕೊಠಡಿ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2020, 16:18 IST
Last Updated 27 ಜೂನ್ 2020, 16:18 IST
ಹಾವೇರಿ ನಗರದ ಪರೀಕ್ಷಾ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿದ ಶಾಸಕ ನೆಹರು ಓಲೇಕಾರ ಪರಿಶೀಲನೆ ನಡೆಸಿದರು 
ಹಾವೇರಿ ನಗರದ ಪರೀಕ್ಷಾ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿದ ಶಾಸಕ ನೆಹರು ಓಲೇಕಾರ ಪರಿಶೀಲನೆ ನಡೆಸಿದರು    

ಹಾವೇರಿ: ಜಿಲ್ಲೆಯಲ್ಲಿ ಶನಿವಾರ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಗಣಿತ ವಿಷಯದ 20,979 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಎರಡನೇ ದಿನವೂ ಯಾವುದೇ ಗೊಂದಲವಿಲ್ಲದೆ, ಸುಗಮವಾಗಿ ನಡೆಯಿತು.

ಪರೀಕ್ಷೆಗೆ ನೋಂದಾಯಿಸಿಕೊಂಡ 21,140 ವಿದ್ಯಾರ್ಥಿಗಳ ಪೈಕಿ 20,979 ವಿದ್ಯಾರ್ಥಿಗಳು ಹಾಜರಾಗಿದ್ದರು. 161 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಕಂಟೈನ್ಮೆಂಟ್ ವಲಯದ 68 ಮಕ್ಕಳಿಗೆ ಪರೀಕ್ಷೆ ಬರೆಯಲು ವಿಶೇಷ ಕೊಠಡಿ ವ್ಯವಸ್ಥೆ ಮಾಡಿಕೊಡಲಾಗಿತ್ತು. ಯಾವುದೇ ವಿದ್ಯಾರ್ಥಿಗಳು ಡಿಬಾರ್ ಆಗಿರುವುದಿಲ್ಲ ಎಂದು ಡಿಡಿಪಿಐ ಅಂದಾನಪ್ಪ ವಡಗೇರಿ ತಿಳಿಸಿದ್ದಾರೆ.

ಅನಾರೋಗ್ಯ ನಿಮಿತ್ತ 4 ವಿದ್ಯಾರ್ಥಿಗಳು ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆದರು. ಮೊದಲ ಬಾರಿಗೆ ಪರೀಕ್ಷೆ ಬರೆದವರು 19,684 ವಿದ್ಯಾರ್ಥಿಗಳು. 393 ಖಾಸಗಿ ಹೊಸ ಅಭ್ಯರ್ಥಿಗಳು, 124 ಖಾಸಗಿ ಪುನರಾವರ್ತಿತ ಅಭ್ಯರ್ಥಿಗಳು ಹಾಜರಾಗಿದ್ದರು. 695 ವಲಸೆ ವಿದ್ಯಾರ್ಥಿಗಳ ಪೈಕಿ, 691 ಮಕ್ಕಳು ಪರೀಕ್ಷೆ ಬರೆದರು. ಒಟ್ಟು ಗೈರಾದವರ ಸಂಖ್ಯೆ 1127. ಇವರಲ್ಲಿ 407 ಬೇರೆ ಕಡೆ ವಲಸೆ ಹೋದ ಮಕ್ಕಳು, 659 ಪ್ರವೇಶ ಪತ್ರವನ್ನು ಮಂಡಳಿಗೆ ಹಿಂದುರುಗಿಸಿದವರು ಸೇರಿದ್ದಾರೆ. ವಾಸ್ತವಾಗಿ 161 ಮಕ್ಕಳು ಗೈರಾಗಿದ್ದರು ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ಪರೀಕ್ಞಾ ಕೇಂದ್ರಗಳಿಗೆ ಬಂದ ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್‌ ಹಾಕಿ, ಆರೋಗ್ಯ ತಪಾಸಣೆ ಮಾಡಿ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲಾಯಿತು. ಮಾಸ್ಕ್‌ ಇಲ್ಲದವರಿಗೆ ಮಾಸ್ಕ್ ಅನ್ನು ಶಿಕ್ಷಕರು ನೀಡಿದರು. ಬಸ್‌ಗಳಲ್ಲಿ ಅಂತರ ಕಾಯ್ದುಕೊಂಡು ಬಂದ ವಿದ್ಯಾರ್ಥಿಗಳು ಸುರಕ್ಷಿತವಾಗಿ ಪರೀಕ್ಷೆ ಬರೆದರು.

ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಣೆ:

ನಗರದ ಲಯನ್ಸ್ ಇಂಗ್ಲಿಷ್‌ ಮೀಡಿಯಂ ಸ್ಕೂಲ್‍ನ ಎಸ್.ಎಸ್.ಎಲ್.ಸಿ. ಪರೀಕ್ಷಾ ಕೇಂದ್ರ ಸೇರಿದಂತೆ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಶನಿವಾರ ಭೇಟಿ ನೀಡಿದ ಶಾಸಕ ನೆಹರು ಓಲೇಕಾರ ಅವರು ವಿದ್ಯಾರ್ಥಿಗಳಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಿ, ಆತ್ಮಸ್ಥೈರ್ಯ ತುಂಬಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕರು, ‘ಸುವ್ಯವಸ್ಥಿತ ಪರೀಕ್ಷೆ ನಡೆಸಲು ಸರ್ಕಾರದಿಂದ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಪರೀಕ್ಷಾ ಕೊಠಡಿಯಲ್ಲಿ ಪ್ರತಿ ವಿದ್ಯಾರ್ಥಿಗಳಿಗೆ ಆರು ಅಡಿ ಅಂತರದಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ನಗರಸಭೆ ಸದಸ್ಯರಾದ ಬಾಬುಸಾಬ ಮೋಮಿನಗಾರ, ಶಿವರಾಜ ಮತ್ತಿಹಳ್ಳಿ, ಶ್ರೀಕಾಂತ ಪೂಜಾರ, ತಹಶೀಲ್ದಾರ್‌ ಶಂಕರ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ಪಾಟೀಲ, ದೈಹಿಕ ಶಿಕ್ಷಣಾಧಿಕಾರಿ ಇಚ್ಚಂಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.