ADVERTISEMENT

ಹಾವೇರಿ: ಜ.1ರಿಂದ ಎಸ್ಸೆಸ್ಸೆಲ್ಸಿ ತರಗತಿ ಆರಂಭ

6ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ–2 ಕಾರ್ಯಕ್ರಮಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2020, 15:49 IST
Last Updated 28 ಡಿಸೆಂಬರ್ 2020, 15:49 IST
ವಿದ್ಯಾಗಮ ಕಾರ್ಯಕ್ರಮದ ನೋಟ (ಸಾಂದರ್ಭಿಕ ಚಿತ್ರ)
ವಿದ್ಯಾಗಮ ಕಾರ್ಯಕ್ರಮದ ನೋಟ (ಸಾಂದರ್ಭಿಕ ಚಿತ್ರ)   

ಹಾವೇರಿ: ಹೊಸವರ್ಷ 2021ರ ಜನವರಿ 1ರಿಂದ ಜಿಲ್ಲೆಯಲ್ಲಿ 6ನೇ ತರಗತಿಯಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ‘ವಿದ್ಯಾಗಮ-2’ ತರಗತಿಗಳು ಆರಂಭಗೊಳ್ಳಲಿವೆ ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ಅರ್ಧದಿನದ ತರಗತಿಗಳು ನಡೆಯಲಿವೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದರು.

ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿ, ಕೇಂದ್ರೀಯ ವಿದ್ಯಾಲಯ (ಕೆ.ವಿ) ಸಹ ಆರಂಭಗೊಳ್ಳಲಿದೆ. ಸದ್ಯ 1ರಿಂದ 5ನೇ ತರಗತಿ ಮಕ್ಕಳಿಗೆ ತರಗತಿ ಆರಂಭಿಸುವುದಿಲ್ಲ. ಮುಂದಿನ ಸೂಚನೆವರೆಗೆ ಈ ಮಕ್ಕಳನ್ನು ಶಾಲೆಗೆ ಕಳುಹಿಸಬಾರದು ಎಂದರು.

ಪಾಲಕರೊಂದಿಗೆ ಚರ್ಚೆ:ವಸತಿ ಶಾಲೆಗಳಾದ ನವೋದಯ ಶಾಲೆ, ಮೊರಾರ್ಜಿ ಹಾಗೂ ಕಿತ್ತೂರು ರಾಣಿ ಚನ್ನಮ್ಮ ಒಳಗೊಂಡಂತೆ ಎಲ್ಲ ವಸತಿ ಶಾಲೆಗಳ ಆರಂಭಿಸುವ ಪೂರ್ವದಲ್ಲಿ ವಿದ್ಯಾರ್ಥಿಗಳ ಪಾಲಕರೊಂದಿಗೆ ಸಭೆ ನಡೆಸಿ, ಅಭಿಪ್ರಾಯದೊಂದಿಗೆ ಶಾಲೆ ಆರಂಭಿಸಲು ಕ್ರಮವಹಿಸುವಂತೆ ಸಂಸ್ಥೆಗಳ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ADVERTISEMENT

ಸ್ವಚ್ಛತೆಗೆ ಆದ್ಯತೆ:ಶಾಲೆ ಆರಂಭಿಸುವ ಮುನ್ನ ಶಾಲಾ ಹೊರ ಹಾಗೂ ಒಳ ಆವರಣ ಸ್ವಚ್ಛಗೊಳಿಸಬೇಕು. ಸ್ಯಾನಿಟೈಸ್ ಮಾಡಿ ವರದಿ ನೀಡಬೇಕು. ಕೊಠಡಿಯ ಸಾಮರ್ಥ್ಯಕ್ಕೆ ಅನುಗುಣವಾಗಿ ಒಂದು ತಂಡದಲ್ಲಿ 15ರಿಂದ ಗರಿಷ್ಠ 20 ವಿದ್ಯಾರ್ಥಿಗಳು ಇರುವಂತೆ ನೋಡಿಕೊಂಡು ಅಂತರ ಕಾಯ್ದುಕೊಂಡು ಕೊಠಡಿಯೊಳಗೆ ಕೂರಿಸಿ ಪಾಠ ಮಾಡಬೇಕು. ಶೌಚಾಲಯಗಳನ್ನು ಪ್ರತಿ ಮಗು ಬಳಕೆ ಮಾಡಿದ ನಂತರ ಸೋಡಿಯಂ ಹೈಫ್ಲೋರೈಡ್‍ನಿಂದ ಸ್ವಚ್ಛಗೊಳಿಸಬೇಕು. ಪ್ರತಿ ಶಾಲೆಯಲ್ಲಿ ಥರ್ಮಲ್ ಸ್ಕ್ಯಾನರ್ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.

ಘೋಷ ವಾಕ್ಯ:‘ಶಾಲೆಗೆ ಬನ್ನಿ ಮಕ್ಕಳೆ, ಮಹಾಮಾರಿ ಓಡಿಸೋಣ, ಮಕ್ಕಳನ್ನು ಓದಿಸೋಣ’ ಎಂಬ ಘೋಷವಾಕ್ಯದೊಂದಿಗೆ ಶಾಲಾ ಆರಂಭ ದಿನವಾದ ಜ.1ರಂದು ಶಾಲೆಗಳನ್ನು ರಂಗೋಲಿ, ತಳಿರು ತೋರಣದಿಂದ ಅಲಂಕರಿಸಿ ಮಕ್ಕಳಲ್ಲಿ ಸಂಭ್ರಮ ತುಂಬುವ ಕೆಲಸ ಮಾಡಬೇಕು. ಆ ಮೂಲಕ ಮಕ್ಕಳನ್ನು ಶಾಲೆಗೆ ಸ್ವಾಗತಿಸಬೇಕು. ಈ ಕುರಿತಂತೆ ಪ್ರತಿ ಶಾಲೆಯ ಮುಖ್ಯಸ್ಥರು ವರದಿ ಸಲ್ಲಿಸಬೇಕು’ ಎಂದು ಸೂಚಿಸಲಾಗಿದೆ ಎಂದು ಹೇಳಿದರು.

ಶಾಲೆಗೆ ಬರುವ ಪ್ರತಿ ಮಗುವಿನ ದೈನಂದಿನ ಆರೋಗ್ಯದ ಬಗ್ಗೆ ಗಮನ ಇರಿಸಬೇಕು. ಈ ಕುರಿತಂತೆ ಪ್ರತಿ 10 ಮಕ್ಕಳಿಗೆ ಒಬ್ಬ ಶಿಕ್ಷಕರನ್ನು ‘ಮೆಂಟರ್’ ಆಗಿ ನೇಮಕ ಮಾಡಬೇಕು.ಪ್ರತಿ ಶಾಲೆಯಲ್ಲಿ ಒಂದು ಕೊಠಡಿಯನ್ನು ಐಸೋಲೇಷನ್ ಕೊಠಡಿಯಾಗಿ ಗುರುತಿಸಬೇಕು. ವಿದ್ಯಾರ್ಥಿಗಳು ಶಾಲೆಗೆ ಬಂದಾಗ ಕೆಮ್ಮು, ಶೀತ, ನೆಗಡಿ ಮತ್ತಿತರ ಕೋವಿಡ್ ಲಕ್ಷಣಗಳನ್ನು ಕಂಡುಂಬದಲ್ಲಿ ಈ ಕೊಠಡಿಯಲ್ಲಿ ಪ್ರತ್ಯೇಕಿಸಬೇಕು.

ಶಿಕ್ಷಕರಿಗೆ ತಪಾಸಣೆ:ಎಲ್ಲ ಶಿಕ್ಷಕರು ಶಾಲಾ ಆರಂಭವಾಗುವ 72 ಗಂಟೆಗಳ ಮೊದಲು ಕೋವಿಡ್-19 ಸಂಬಂಧಿಸಿದ ಪರೀಕ್ಷೆಗಳನ್ನು ಮಾಡಿಕೊಳ್ಳಿಸಬೇಕು. ನೆಗಟಿವ್ ವರದಿ ಇದ್ದವರು ಮಾತ್ರ ಶಾಲೆಗೆ ಹಾಜರಾಗಬೇಕು. 50 ವರ್ಷ ಮೇಲ್ಪಟ್ಟ ಶಿಕ್ಷಕರು ಕಡ್ಡಾಯವಾಗಿ ಮಾಸ್ಕ್‌ನೊಂದಿಗೆ ಫೇಸ್‍ಶೀಲ್ಡ್‌ ಅನ್ನು ಬಳಸಬೇಕು. ಜಿಲ್ಲೆಯಲ್ಲಿ 7,500 ಶಿಕ್ಷಕರಿದ್ದಾರೆ ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ.ಎಚ್. ಪಾಟೀಲ, ವಿಷಯ ಪರಿವೀಕ್ಷಕರಾದ ಮಂಜಪ್ಪ, ಹಿರೇಮಠ ಅವರು ವರದಾ ಜ್ಞಾನವಾಹಿನಿ ಯೂಟ್ಯೂಬ್ ಚಾನಲ್, ಆನ್‍ಲೈನ್ ತರಗತಿಗಳು, ಬ್ಲಾಗ್ ಕುರಿತಂತೆ ಮಾಹಿತಿ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌. ಯೋಗೇಶ್ವರ, ಉಪವಿಭಾಗಾಧಿಕಾರಿ ಡಾ.ದಿಲೀಷ್ ಶಶಿ, ಡಿಡಿಪಿಐ ಅಂದಾನೆಪ್ಪ ವಡಗೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.