
ಶಿಗ್ಗಾವಿ: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ 90ರಷ್ಟು ಅಂಕ ಪಡೆದ ಜ್ಯೋತಿ ಶಿಗ್ಗಾವಿ ಅವರಿಗೆ ತಾಲ್ಲೂಕಿನ ಹನುಮರಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವದಲ್ಲಿ ಕಿರಾಣಿ ಅಂಗಡಿ ವ್ಯಾಪಾರಿ ಗೋಪಾಲಕೃಷ್ಣ ಆಡಿನ ಅವರು ಅರ್ಧ ತೊಲೆ ಬಂಗಾರದ ಜುಮಕಿ ನೀಡಿ ಸನ್ಮಾನಿಸಿದರು.
‘ಆರ್ಥಿಕವಾಗಿ ಹಿಂದುಳಿದ ಗ್ರಾಮದ ಮಕ್ಕಳು ಉತ್ತಮ ಸಾಧನೆ ಮಾಡಲಿ. ಜ್ಯೋತಿ ಶಿಗ್ಗಾವಿ ಅವರಿಗೆ ಮಕ್ಕಳಿಗೆ ಪ್ರೇರಣೆಯಾಗಿ ನಿಂತಿದ್ದಾರೆ. ಕಿರಾಣಿ ದುಡಿಮೆಯಲ್ಲಿ ಹಣ ಉಳಿಸಿ ಈ ಕಾರ್ಯಕ್ಕೆ ಮೀಸಲಿಟ್ಟೆ. ಮುಂದಿನ ದಿನಗಳಲ್ಲಿ ಶಾಲಾ ಮಕ್ಕಳಿಗೆ ವಿಶೇಷ ರೀತಿಯ ಪ್ರೋತ್ಸಾಹ ನೀಡುವ ಯೋಚನೆಯಲ್ಲಿದ್ದೇನೆ’ ಎಂದು ಹೇಳಿದರು.
‘ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರದ ಜೊತೆ ಗ್ರಾಮಸ್ಥರ, ವಿವಿಧ ಸಂಘ–ಸಂಸ್ಥೆಗಳ ಸಹಕಾರ ಅಗತ್ಯ, ಅದರಿಂದ ಇಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳ್ಳಲು ಸಾಧ್ಯ’ ಎಂದು ಬಿಇಒ ಎಂ.ಬಿ. ಅಂಬಿಗೇರ ಹೇಳಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಸಾಳುಂಕೆ, ಸರ್ಕಾರಿ ನೌಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಅರುಣಗೌಡ ಹುಡೇದಗೌಡ, ಸವಣೂರು ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಹೊಸಮನಿ, ಭೂದಾನಿ ಶಿವಾಜಿರಾವ ಶಿಂಧೆ, ತಾಲ್ಲೂಕು ಪಂಚಾಯಿತಿ ಪ್ರಕಾಶ ಔಂದಕರ, ಶಾಲಾ ಸಮಿತಿ ಅಧ್ಯಕ್ಷ ರಾಜೇಶ ದೊಡ್ಡಮನಿ, ಶೇಖಪ್ಪ ನೀರಲಗಿ, ಶಿಲ್ಪಾ ಫ. ಗುಡ್ಡನಗೌಡ, ನೀಲಮ್ಮ ಆಡಿನ, ಕಮಲ ಪಾಟೀಲ, ರೇವಣಸಿದ್ದಪ್ಪ ಆಡಿನ, ಶಂಭನಗೌಡ ಮೇಲಿನಮನಿ, ಎ.ಡಿ. ಮುಲ್ಲಾ ಮುಖ್ಯ ಶಿಕ್ಷಕ ಸಂಜೀವ ಪೂಜಾರ, ಶಕುಂತಲಾ ಸಾಲಿಮಠ ಇದ್ದರು.
ಜನರಿಂದ ದೇಣಿಗೆ
ಹನುಮರಹಳ್ಳಿ ಶಾಲಾ ಸಮಿತಿ ಹಾಗೂ ಗ್ರಾಮದ ಜನತೆಯು ಶಾಲೆಯನ್ನು ಅಭಿವೃದ್ಧಿಪಡಿಸಲು ಸುಮಾರು ₹ 3 ಲಕ್ಷಕ್ಕಿಂತ ಹೆಚ್ಚು ಹಣ ಸಂಗ್ರಹಿಸಿ ಶಾಲೆಗೆ 1 ಗುಂಟೆ ಭೂಮಿ ಖರೀದಿಸಿದ್ದಾರೆ. ಸಿ.ಸಿ.ಟಿ.ವಿ ಗ್ರೀನ್ ಬೊರ್ಡ್ ಮತ್ತು ಮೈಕ್ ಟ್ಯಾಲಿಯನ್ನು ಸಹ ದೇಣಿಗೆಯಾಗಿ ನೀಡಿದರು. ಶಿಕ್ಷಣ ಪ್ರೇಮಿ ಗುರುನಾಥ ನಿಂ. ಅಣ್ಣಿಗೇರಿ ಅವರು ಗ್ರಾಮದ ಶಾಲೆಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಪೈಕಿ ಕಡುಬಡತನ ಹಿನ್ನೆಲೆಯ 5 ವಿದ್ಯಾರ್ಥಿಗಳನ್ನು ಪ್ರತಿ ವರ್ಷ ನಿರಂತರವಾಗಿ ಶೈಕ್ಷಣಿಕವಾಗಿ ದತ್ತು ಸ್ವೀಕರಿಸಿ ಅವರ ಶೈಕ್ಷಣಿಕ ವೆಚ್ಚ ಭರಿಸುವುದಾಗಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.