ADVERTISEMENT

‘ಸಹಕಾರ ಡಿಜಿಟಲ್‌ ಗ್ರಂಥಾಲಯ’ ಸ್ಥಾಪನೆಗೆ ಕ್ರಮ: ಬಸವರಾಜ ಅರಬಗೊಂಡ

ಜಿಲ್ಲಾ ಸಹಕಾರ ಯೂನಿಯನ್‌ ‘ಹೈಟೆಕ್‌ ಕಚೇರಿ’ ಮಂಜೂರು

​ಪ್ರಜಾವಾಣಿ ವಾರ್ತೆ
Published 4 ಜನವರಿ 2022, 12:48 IST
Last Updated 4 ಜನವರಿ 2022, 12:48 IST
ಹಾವೇರಿ ನಗರದಲ್ಲಿ ಮಂಗಳವಾರ ‘ಜಿಲ್ಲಾ ಸಹಕಾರ ಯೂನಿಯನ್‌’ ಕಚೇರಿಯಲ್ಲಿ ಸಹಕಾರ ವಾರಪತ್ರಿಕೆ, ಡೈರಿ, ಕ್ಯಾಲೆಂಡರ್‌ ಬಿಡುಗಡೆ ಮಾಡಲಾಯಿತು 
ಹಾವೇರಿ ನಗರದಲ್ಲಿ ಮಂಗಳವಾರ ‘ಜಿಲ್ಲಾ ಸಹಕಾರ ಯೂನಿಯನ್‌’ ಕಚೇರಿಯಲ್ಲಿ ಸಹಕಾರ ವಾರಪತ್ರಿಕೆ, ಡೈರಿ, ಕ್ಯಾಲೆಂಡರ್‌ ಬಿಡುಗಡೆ ಮಾಡಲಾಯಿತು    

ಹಾವೇರಿ: ‘ಜಿಲ್ಲಾ ಸಹಕಾರ ಯೂನಿಯನ್‌ ಕಟ್ಟಡದ ಮೇಲಂತಸ್ತಿನಲ್ಲಿ ‘ಹೈಟೆಕ್‌ ಕಚೇರಿ’ ಸ್ಥಾಪನೆಗೆ ₹36 ಲಕ್ಷ ಅನುದಾನ ಮಂಜೂರಾಗಿದೆ. ಜತೆಗೆ ‘ಸಹಕಾರ ಡಿಜಿಟಲ್‌ ಗ್ರಂಥಾಲಯ’ ಮಾಡುವ ದೂರದೃಷ್ಟಿ ಹೊಂದಿದ್ದೇವೆ’ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಬಸವರಾಜ ಅರಬಗೊಂಡ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಹೈಟೆಕ್‌ ಕಚೇರಿ ಸ್ಥಾಪನೆಯಾದರೆ, ಎಲ್ಲ ತರಬೇತಿ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲವಾಗಲಿದೆ. ‘ಹಾಲು ಉತ್ಪಾದಕರ ಸಹಕಾರ ಬ್ಯಾಂಕ್‌’ ಸ್ಥಾಪನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದು, ಈ ಸಂಬಂಧ ಬೈಲಾ ರಚನೆಯ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದರು.

ಪ್ರತ್ಯೇಕ ಹಾಲು ಒಕ್ಕೂಟಕ್ಕೆ ಅನುದಾನ ಮತ್ತು ಜಾಗ ಮಂಜೂರಾಗಿದ್ದು, ಡಿಸೆಂಬರ್‌ ಒಳಗಾಗಿ ಲೋಕಾರ್ಪಣೆ ಮಾಡುವ ಗುರಿ ಹಾಕಿಕೊಂಡಿದ್ದೇವೆ. ಕಟ್ಟಡ ಕಾಮಗಾರಿಗೆ ಸಂಬಂಧಿಸಿದಂತೆ ಟೆಂಡರ್‌ ಕಾರ್ಯ ಪೂರ್ಣಗೊಂಡಿದೆ. ಉತ್ತರ ಕನ್ನಡ ಮತ್ತು ಮೈಸೂರು ಜಿಲ್ಲಾ ಸಹಕಾರಿ ಯೂನಿಯನ್‌ ಮಾದರಿಯಲ್ಲಿ ‘ಆಧುನಿಕ ಜಿಲ್ಲಾ ಸಹಕಾರ ಯೂನಿಯನ್‌’ ಮಾಡುವ ಕನಸಿದೆ ಎಂದರು.

ADVERTISEMENT

‘ಮಹಾಮಂಡಳದ ನಡಿಗೆ, ಸಹಕಾರ ಸಂಘಗಳ ಕಡೆಗೆ’ ಎಂಬ ಶೀರ್ಷಿಕೆಯಡಿ 2022ನೇ ಸಾಲಿನ ನೂತನ ವರ್ಷಾರಂಭದ ಅಂಗವಾಗಿ ವಿಶೇಷ ಸಹಕಾರ ವಾರಪತ್ರಿಕೆ, ಡೈರಿ, ಕ್ಯಾಲೆಂಡರ್‌ಗಳನ್ನು ಜಿಲ್ಲೆಯ 1194 ಸಹಕಾರ ಸಂಘಗಳಿಗೆ ವಿತರಿಸಿ, ಸಹಕಾರ ಸಂಸ್ಥೆಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಲು ವಿಶೇಷ ಯೋಜನೆಯನ್ನು ಹಾಕಿಕೊಂಡಿದ್ದೇವೆ’ ಎಂದು ಮಾಹಿತಿ ನೀಡಿದರು.

ಈ ವರ್ಷ ಕನಿಷ್ಠ 150 ಸಹಕಾರ ಸಂಘಗಳನ್ನು ಜಿಲ್ಲಾ ಸಹಕಾರ ಯೂನಿಯನ್‌ಗೆ ನೋಂದಣಿ ಮಾಡಿಸುವ ಗುರಿ ಹಾಕಿಕೊಂಡಿದ್ದೇವೆ. ಈಗ ಸಹಕಾರ ಸಂಘಗಳಿಂದ ಸಿಗುತ್ತಿರುವ ₹20 ಲಕ್ಷ ‘ಸಹಕಾರ ಶಿಕ್ಷಣ ನಿಧಿ’ಯನ್ನು ಹೆಚ್ಚಳ ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷ ಶಿವಾನಂದ ರಾಮಗೇರಿ, ಉಪಾಧ್ಯಕ್ಷ ಉಮೇಶ ಬ್ಯಾಡಗಿ, ಸಿಇಒ ಶರಣಬಸಪ್ಪ ಕಾಟ್ರಳ್ಳಿ, ಸಮನ್ವಯಾಧಿಕಾರಿ ಮಂಜುನಾಥ, ನಿರ್ದೇಶಕ ಗುರುಬಸಪ್ಪ ನವಲೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.