ADVERTISEMENT

ಮಕ್ಕಳ ಭಾಗ್ಯ ಕರುಣಿಸುವ ‘ದತ್ತು ಕೇಂದ್ರ’

ನವೆಂಬರ್‌ನಲ್ಲಿ ದತ್ತು ಮಾಸಾಚರಣೆ: ಮಕ್ಕಳ ಮಾರಾಟ ಘೋರ ಅಪರಾಧ

ಸಿದ್ದು ಆರ್.ಜಿ.ಹಳ್ಳಿ
Published 24 ನವೆಂಬರ್ 2020, 4:46 IST
Last Updated 24 ನವೆಂಬರ್ 2020, 4:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹಾವೇರಿ: ಪುಟಾಣಿಗಳ ಕಾಲ್ಗೆಜ್ಜೆ ಸದ್ದು, ಮುಗ್ಧ ನಗು, ತೊದಲು ನುಡಿ, ತುಂಟತನಗಳನ್ನು ಆನಂದಿಸುವ ಅವಕಾಶದಿಂದ ವಂಚಿತರಾದ ಹಾಗೂಮನೆಯೊಳಗೊಂದು ಮಗುವಿಲ್ಲ ಎಂಬ ಬೇಸರದಲ್ಲಿರುವ ಪೋಷಕರಿಗೆ ಮಕ್ಕಳ ಭಾಗ್ಯ ಕರುಣಿಸುವ ಅಕ್ಷಯಪಾತ್ರೆ ಎನಿಸಿದೆ ಹಾವೇರಿಯ ‘ಸ್ಪಂದನ ವಿಶೇಷ ದತ್ತು ಸ್ವೀಕಾರ ಕೇಂದ್ರ’.

ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ (ಸಿಎಆರ್‌ಎ), ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಶ್ರಯದಲ್ಲಿ 2008ರಲ್ಲಿ ಹಾವೇರಿಯಲ್ಲಿ ಆರಂಭಗೊಂಡ ಈ ದತ್ತು ಕೇಂದ್ರವು ಅನಾಥ, ನಿರ್ಗತಿಕ, ಪರಿತ್ಯಕ್ತ ಮಕ್ಕಳಿಗೆ ಮಮತೆಯ ಮಾಡಲಾಗಿದೆ.

85 ಪರಿತ್ಯಕ್ತ ಮಕ್ಕಳಿಗೆ ಆಶ್ರಯ:

ADVERTISEMENT

ಇದುವರೆಗೆ ಆರು ವರ್ಷದೊಳಗಿನ ಒಟ್ಟು 85 ಪರಿತ್ಯಕ್ತ ಮಕ್ಕಳನ್ನು ದತ್ತು ಕೇಂದ್ರದಲ್ಲಿ ಪಾಲನೆ ಪೋಷಣೆ ಮಾಡಲಾಗಿದೆ. 26 ಮಕ್ಕಳನ್ನು ಮೂಲ ಪೋಷಕರಿಗೆ ಒಪ್ಪಿಸಲಾಗಿದೆ. 25 ಮಕ್ಕಳನ್ನು ಕಾನೂನುಬದ್ಧವಾಗಿ ಮಕ್ಕಳಿಲ್ಲದ ಪೋಷಕರಿಗೆ ದತ್ತು ಕೊಡಲಾಗಿದೆ. ಆರು ವರ್ಷ ತುಂಬಿದ ನಂತರ 22 ಮಕ್ಕಳನ್ನು ಬಾಲಮಂದಿರ ಮತ್ತು ತೆರೆದ ತಂಗುದಾಣಗಳಿಗೆ ಸ್ಥಳಾಂತರ ಮಾಡಲಾಗಿದೆ. ಪ್ರಸ್ತುತ 4 ಗಂಡು ಹಾಗೂ 8 ಹೆಣ್ಣು ಮಕ್ಕಳು ದತ್ತು ಕೇಂದ್ರದಲ್ಲಿ ಆಶ್ರಯ ಪಡೆದಿವೆ.

ದತ್ತು ಮುಕ್ತ ಆದೇಶ:

‘ಆಸ್ಪತ್ರೆಗಳ ಆವರಣ, ಚರಂಡಿ, ಕಸದ ತೊಟ್ಟಿ, ಹೊಲ, ರಸ್ತೆಬದಿ, ಬಸ್‌ ನಿಲ್ದಾಣ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಸಿಕ್ಕ ಅನಾಥ ಮಕ್ಕಳಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಿ, ಪೊಲೀಸ್‌ ಠಾಣೆಗಳಲ್ಲಿ ಎಫ್‌ಐಆರ್‌ ಮಾಡಿಸುತ್ತೇವೆ. ನಂತರ ಜಾಹೀರಾತು ಪ್ರಕಟಣೆ ನೀಡಿ, 60 ದಿನದೊಳಗೆ ಪೋಷಕರು ಬಾರದೇ ಇದ್ದರೆ, ಅಂಥ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿ ಆದೇಶಾನುಸಾರ ‘ದತ್ತು ಮುಕ್ತ’ ಎಂದು ಘೋಷಣೆ ಮಾಡಲಾಗುತ್ತದೆ’ ಎನ್ನುತ್ತಾರೆ ಸಂಯೋಜಕಿ ಸಂಗೀತಾ ಹರಪನಹಳ್ಳಿ.

ಆನ್‌ಲೈನ್‌ ಅರ್ಜಿ:

‘ಜೈವಿಕ ಪಾಲಕರಿಂದ ಬೇರ್ಪಟ್ಟ ಮಕ್ಕಳನ್ನು ಕಾನೂನು ಬದ್ಧವಾಗಿ ದತ್ತು ಪಡೆಯಬಹುದು. ಈ ದತ್ತು ಕೇಂದ್ರದಿಂದ ತೆಲಂಗಾಣ, ಕೋಲ್ಕತ್ತ, ಮುಂಬೈ, ಹೈದರಾಬಾದ್‌, ಕೇರಳ ಹಾಗೂ ದುಬೈನ ಪೋಷಕರಿಗೆ ಮಕ್ಕಳನ್ನು ದತ್ತು ನೀಡಲಾಗಿದೆ. ಸ್ಪೇನ್‌ ದೇಶಕ್ಕೂ ಮಗು ಕೊಡಲು ಪ್ರಕ್ರಿಯೆ ನಡೆಯುತ್ತಿದೆ. ಸರ್ವಧರ್ಮಕ್ಕೆ ಸೇರಿದ ಸ್ವದೇಶಿ ಮತ್ತು ವಿದೇಶಿಯರು 2017ರ ನೂತನ ದತ್ತು ಮಾರ್ಗಸೂಚಿ ಪ್ರಕಾರ carings.nic.in‌ ವೆಬ್‌ಸೈಟ್ ಮೂಲಕ ಆನ್‌ಲೈನ್‌ ಅರ್ಜಿ ಸಲ್ಲಿಸಿ ಕಾನೂನು ಬದ್ಧವಾಗಿ ಮಗು ಪಡೆಯಬಹುದು’ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ವಿನಯ ಗುಡಗೂರ ಮಾಹಿತಿ ನೀಡಿದರು.

ದತ್ತು ಪಡೆಯಲು ಯಾರು ಅರ್ಹರು?

25 ವರ್ಷ ಮೇಲ್ಪಟ್ಟ ಹಾಗೂ 55 ವರ್ಷದೊಳಗಿನ ದಂಪತಿಯು ದೈಹಿಕ ಮತ್ತು ಮಾನಸಿಕ ಆರೋಗ್ಯದಿಂದ ಕೂಡಿರಬೇಕು. ಆರ್ಥಿಕವಾಗಿ ಸಬಲರಾಗಿರಬೇಕು. ವಿವಾಹವಾಗಿ 2 ವರ್ಷಗಳ ಕಾಲ ಜೀವನ ನಡೆಸಿರಬೇಕು. ಏಕ ಪೋಷಕರು ಕೂಡ ವಯಸ್ಸಿನ ಮಿತಿಗೊಳಪಟ್ಟು ಮಗುವನ್ನು ದತ್ತು ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.