ADVERTISEMENT

ಜೀವದ್ರವ್ಯಕ್ಕೆ ಆಧಾರವಾದ ‘ವಿಶ್ವಧಾರ’

ಐದು ವರ್ಷಗಳ ಸಾರ್ಥಕ ಸೇವೆ: ಸಾವಿರಾರು ಜನರಿಗೆ ರಕ್ತ ಪೂರೈಕೆ ಮಾಡಿದ ಹೆಗ್ಗಳಿಕೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2022, 16:36 IST
Last Updated 30 ಜೂನ್ 2022, 16:36 IST
ಧಾರವಾಡದ ಕೃಷಿ ವಿಶ್ವವಿದ್ಯಾಲಯ ಮತ್ತು ಹಾವೇರಿಯ ವಿಶ್ವಧಾರ ಬ್ಲಡ್‌ ಬ್ಯಾಂಕ್‌ ಸಹಯೋಗದಲ್ಲಿ ರಾಣೆಬೆನ್ನೂರು ತಾಲ್ಲೂಕಿನ ಹನುಮನಮಟ್ಟಿಯಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರ 
ಧಾರವಾಡದ ಕೃಷಿ ವಿಶ್ವವಿದ್ಯಾಲಯ ಮತ್ತು ಹಾವೇರಿಯ ವಿಶ್ವಧಾರ ಬ್ಲಡ್‌ ಬ್ಯಾಂಕ್‌ ಸಹಯೋಗದಲ್ಲಿ ರಾಣೆಬೆನ್ನೂರು ತಾಲ್ಲೂಕಿನ ಹನುಮನಮಟ್ಟಿಯಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರ    

ಹಾವೇರಿಯ ‘ವಿಶ್ವಧಾರ ರಕ್ತನಿಧಿ ಕೇಂದ್ರ’ವು 10ನೇ ಅಕ್ಟೋಬರ್ 2017ರಿಂದ ತನ್ನ ಸೇವೆಯನ್ನು ಪ್ರಾರಂಭಿಸಿದೆ. ಪ್ರಪ್ರಥಮವಾಗಿ ರಕ್ತ ವಿಭಜನಾ ಘಟಕವನ್ನು ಹಾವೇರಿ ನಗರದಲ್ಲಿ ಸ್ಥಾಪಿಸಿ ದಿನದ 24 ಗಂಟೆಗಳ ಕಾಲ ಸೇವೆಯನ್ನು ಒದಗಿಸುತ್ತಾ ಬಂದಿದೆ. ಕಳೆದ 5 ವರ್ಷಗಳಿಂದ ಜಿಲ್ಲಾ ಸರ್ಕಾರಿ ಆಸ್ಪತ್ರೆ ಹಾಗೂ ಎಲ್ಲಾ ತಾಲ್ಲೂಕು ಸರ್ಕಾರಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ರಕ್ತದ ಎಲ್ಲಾ ರೀತಿಯ ವಿಭಾಗಗಳನ್ನು ಒದಗಿಸುತ್ತಾ ಬಂದಿದೆ.

ವಿಶ್ವಧಾರ ರಕ್ತನಿಧಿ ಕೇಂದ್ರವು ಶ್ರೀಸಾಯಿ ಸೇವಾನಂದ ಆಧ್ಯಾತ್ಮಿಕ ಟ್ರಸ್ಟ್‌ ಅಡಿಯಲ್ಲಿ ಹಾಗೂ ಕರ್ನಾಟಕ ರಾಜ್ಯ ಔಷಧ ನಿಯಂತ್ರಣ ಇಲಾಖೆ, ಕೇಂದ್ರ ಸರ್ಕಾರದ ಔಷಧ ವಿಭಾಗ ನಿಯಂತ್ರಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ರಕ್ತ ಚಾಲನಾ ಪರಿಷತ್ ಇವರ ಮಾರ್ಗದರ್ಶನದಲ್ಲಿ ಇಲಾಖೆಯು ನಿಗದಿಪಡಿಸಿರುವ ಸೇವಾ ದರಕ್ಕಿಂತ ಕಡಿಮೆ ಸೇವಾ ಶುಲ್ಕದಲ್ಲಿ ಕಾರ್ಯನಿರ್ವಹಿಸುತ್ತಿದೆ.

ರಕ್ತದಾನ ಮಾಡುವ ವ್ಯಕ್ತಿಯ ರಕ್ತದ ತಪಾಸಣೆ ಎಚ್.ಐ.ವಿ, ಹೆಪಟೈಟಿಸ್-ಬಿ, ಹೆಪಟೈಟಿಸ್-ಸಿ, ಸಿಫಲಿಸ್, ಮಲೇರಿಯಾ, ರಕ್ತದ ಗುಂಪಿನ ಹೊಂದಾಣಿಕೆಯ ಪರೀಕ್ಷೆ ಇವೆಲ್ಲವುಗಳ ಪರೀಕ್ಷೆಗೆ ತಗಲುವ ವೆಚ್ಚ ಸುಮಾರು ₹2,000ಗಳವರೆಗೆ ಆಗುತ್ತದೆ. ಆದರೆ, ರಕ್ತ ನಿಧಿ ಕೆಂದ್ರವು ಇದರ ಅರ್ಧದಷ್ಟು ದರವನ್ನು ಮಾತ್ರ ರೋಗಿಗಳ ಕಡೆಯಿಂದ ಪಡೆಯುತ್ತಾ ಬಂದಿದೆ. ರಕ್ತನಿಧಿ ಕೇಂದ್ರದ ಬಾಡಿಗೆ ಹಾಗೂ ಸಿಬ್ಬಂದಿಯ ವೇತನ ಮತ್ತು ವಿದ್ಯುತ್ ಶುಲ್ಕ ಇವೆಲ್ಲವುಗಳ ವೆಚ್ಚವನ್ನು ಟ್ರಸ್ಟ್‌ನಿಂದ ಭರಿಸಲಾಗುತ್ತಿದೆ.

ADVERTISEMENT

ವಿಶ್ವಧಾರ ರಕ್ತನಿಧಿ ಕೇಂದ್ರವು ಇಲ್ಲಿಯವರೆಗೂ ಕರ್ನಾಟಕ ರಾಜ್ಯ ರಕ್ತ ಚಾಲನಾ ಪರಿಷತ್‌ನವರ ನಿರ್ದೇಶನದಂತೆ, ರಕ್ತದ ಅವಶ್ಯಕತೆ ಇರುವ ರೋಗಿಗಳ ಸಂಬಂಧಿಕರು ರಕ್ತವನ್ನು ಪಡೆದುಕೊಳ್ಳಲು ರಕ್ತನಿಧಿ ಕೇಂದ್ರಕ್ಕೆ ಬಂದಾಗ ಯಾರಿಗೂ ರಕ್ತದ ಬದಲಾಗಿ ರಕ್ತವನ್ನು ಕೊಡಬೇಕೆಂದು ಒತ್ತಾಯ ಮಾಡದೇ, ಮತ್ತೆ ಯಾವುದೇ ರೀತಿಯ ನಿರ್ಬಂಧಗಳನ್ನು ವಿಧಿಸಿದೇ ಎಲ್ಲಾ ರಕ್ತದ ಮಾದರಿಗಳನ್ನು ಒದಗಿಸುತ್ತಾ ಬಂದಿದೆ.

ವಿಶ್ವಧಾರ ರಕ್ತನಿಧಿ ಕೇಂದ್ರವು ಕರ್ನಾಟಕ ರಾಜ್ಯ ರಕ್ತ ಚಾಲನಾ ಪರಿಷತ್ ನಿರ್ದೇಶನದ ಪ್ರಕಾರ ಸ್ವಯಂಪ್ರೇರಿತ ರಕ್ತದಾನ ಶಿಬಿರಗಳನ್ನು ಜಿಲ್ಲೆಯ ಪದವಿ ಕಾಲೇಜುಗಳು ಹಾಗೂ ಸಂಘ ಸಂಸ್ಥೆಗಳೊಂದಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ನಡೆಸುತ್ತಾ ಬಂದಿದೆ. ಇತ್ತೀಚಿನ ದಿನಗಳಲ್ಲಿ ಚಾರಿಟಬಲ್ ರಕ್ತನಿಧಿ ಕೇಂದ್ರದ ಬಗ್ಗೆ ಕೆಲವರಿಗೆ ತಪ್ಪು ತಿಳಿವಳಿಕೆ ಇದ್ದು, ಸ್ವಯಂಪ್ರೇರಿತ ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳಲು ರಕ್ತದಾನಿಗಳು ಮುಂದಾಗುತ್ತಿಲ್ಲ. ಈ ತಪ್ಪು ಮಾಹಿತಿಯಿಂದ ಹೊರಬಂದು ಸ್ವಯಂಪ್ರೇರಿತ ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳಲು ಕೋರುತ್ತೇವೆ.

ವಿಶ್ವಧಾರ ರಕ್ತನಿಧಿ ಕೇಂದ್ರವು ತನ್ನ ಸೇವೆಯನ್ನು ಪ್ರಾರಂಭಿಸಿದ ದಿನದಿಂದ ಪ್ರತಿ ತಿಂಗಳಿಗೆ ಕನಿಷ್ಠ 400 ರಿಂದ 500 ರೋಗಿಗಳಿಗೆ ರಕ್ತವನ್ನು ಒದಗಿಸುತ್ತಿದೆ ಮತ್ತು ಥಲಸೇಮಿಯಾ ಹಾಗೂ ಕ್ಯಾನ್ಸರ್ ರೋಗಗಳಿಂದ ಬಳಲುತ್ತಿರುವ ರೋಗಿಗಳಿಗೆ ಹಾಗೂ ಆರ್ಥಿಕ ದುರ್ಬಲರಿಗೆ ಉಚಿತವಾಗಿ ರಕ್ತವನ್ನು ನೀಡುತ್ತಿದೆ.

ಶ್ರೀಸಾಯಿ ಸೇವಾನಂದ ಆಧ್ಯಾತ್ಮಿಕ ಟ್ರಸ್ಟ್ ರಕ್ತವನ್ನು ಒದಗಿಸುವುದಲ್ಲದೇ ಇನ್ನು ಅನೇಕ ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದು, ಅಂಧ ಮಕ್ಕಳ ಶಾಲೆಯಲ್ಲಿ ಅಂಧ ಮಕ್ಕಳಿಗೆ ಹಾಗೂ ಸಾಂಕ್ರಾಮಿಕ ರೋಗವಾದ ಕೋವಿಡ್-19 ವೇಳೆಯಲ್ಲಿ ಮಠ ಮಾನ್ಯಗಳಿಗೂ ಸಹ ದವಸ ಧಾನ್ಯಗಳನ್ನು ವಿತರಿಸಲಾಗಿದೆ ಹಾಗೂ ಅವರಿಗೆ ಅವಶ್ಯಕತೆ ಇರುವ ಹಾಸಿಗೆ ಮತ್ತು ಔಷಧೋಪಚಾರಗಳ ಸೇವೆ ನೀಡಿದೆ.

ಉಚಿತ ರಕ್ತದ ಗುಂಪಿನ ತಪಾಸಣೆ ಶಿಬಿರವನ್ನು ಏರ್ಪಡಿಸಿ, ನೂರಾರು ರಕ್ತದಾನಿಗಳಿಗೆ ಸನ್ಮಾನ ಮಾಡುವುದರ ಮೂಲಕ ರಕ್ತದಾನದ ಬಗ್ಗೆ ಅರಿವನ್ನು ಮೂಡಿಸುವ ಕಾರ್ಯಕ್ರಮಗಳನ್ನು ಪ್ರತಿ ವರ್ಷವೂ ಎರಡರಿಂದ ಮೂರು ಬಾರಿ ನಡೆಸುತ್ತಿದೆ.

ತುರ್ತು ಸಂದರ್ಭದಲ್ಲಿ ವಿಶೇಷವಾಗಿ ಗರ್ಭಿಣಿಯರಿಗೆ ಹೆರಿಗೆಯ ಸಮಯದಲ್ಲಿ ಎಲ್ಲಾ ಗುಂಪಿನ ರಕ್ತ ಹಾಗೂ ರಕ್ತದ ಭಾಗಗಳನ್ನು ಒದಗಿಸಿದ್ದರಿಂದ ಸಾವಿರಾರು ಮಹಿಳೆಯರಿಗೆ ಸಹಾಯವಾಗಿದೆ.ಮುಂದಿನ ದಿನಗಳಲ್ಲಿ ಬಡರೋಗಿಗಳಿಗೆ ಹಾಗೂ ದುರ್ಬಲರಿಗೆ ಇನ್ನು ಹೆಚ್ಚಿನ ಸೇವೆ ಒದಗಿಸುವ ಅದಮ್ಯ ಗುರಿಯನ್ನು ಟ್ರಸ್ಟ್‌ ಹೊಂದಿದೆ.

‘ವಿಶ್ವಧಾರ’ ಬಗ್ಗೆ ಅನಿಸಿಕೆಗಳು
ಹಾವೇರಿಯ ವಿಶ್ವಧಾರ ರಕ್ತನಿಧಿ ಕೇಂದ್ರವು ಹಲವಾರು ರೋಗಿಗಳ ಪಾಲಿಗೆ ‘ಸಂಜೀವಿನಿ’ಯಾಗಿದೆ ಎಂದರೆ ತಪ್ಪಾಗಲಾರದು. ಇನ್ನೂ ಹಲವು ರಕ್ತಭಂಡಾರಗಳಿದ್ದರೂ ಹೆಚ್ಚಿನ ಹಾಗೂ ಮೊದಲ ಸಾಲಿನಲ್ಲಿ ನಿಲ್ಲುವುದು ನಮ್ಮ ವಿಶ್ವಧಾರ ರಕ್ತ ಭಂಡಾರ. ಬಡವರ ಹಾಗೂ ಥಲಸೇಮಿಯಾ ರೋಗಿಗಳ ಪಾಲಿನ ಅಕ್ಷಯಪಾತ್ರೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ.
–ದತ್ತಾತ್ರೆಯ ಕುಲಕರ್ಣಿ, ಸ್ವಯಂಪ್ರೇರಿತ ರಕ್ತದಾನಿ, ಹಾವೇರಿ

*

ಈ ಸಂಸ್ಥೆಯು ತುಂಬಾ ಉತ್ತಮವಾದ ಕೆಲಸ ಮಾಡುತ್ತಿದೆ. ಕೇಂದ್ರ ಪ್ರಾರಂಭವಾದ ಮೇಲೆ ನಮ್ಮ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಯಾವುದೇ ಸಮಯದಲ್ಲಿ ರಕ್ತದ ಅಗತ್ಯ ಬಿದ್ದಲ್ಲಿ ದಿನದ 24 ಗಂಟೆಗಳೂ ತಮ್ಮ ಸೇವೆಯನ್ನು ನಗುಮುಖದಿಂದ ಮಾಡಿಕೊಡುತ್ತಾರೆ. ಅವರಲ್ಲಿರುವ ಸಿಬ್ಬಂದಿ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ರಕ್ತದಾನಿಗಳನ್ನು ಉಪಚರಿಸುವ ರೀತಿ ಇತರರಿಗೆ ಅನುಕರಣೀಯವಾಗಿದೆ
– ಶ್ರೀಕಾಂತ ಅಯ್ಯಂಗಾರ್, ರಕ್ತದಾನಿ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರು, ಹಾವೇರಿ.

*

ವಿಶ್ವಧಾರ ರಕ್ತಕೇಂದ್ರವು ಅಮೃತಕ್ಕೆ ಸಮಾನವಾದ ರಕ್ತನಿಧಿ ಕೇಂದ್ರವಾಗಿದೆ. ಏಕೆಂದರೆ ಶಿರಡಿ ಶ್ರೀ ಸಾಯಿಬಾಬಾ ಅವರು ಅಂದಿನ ಕಾಲದಲ್ಲಿ ಬಡಜನರಿಗೆ ಅನ್ನವನ್ನು ಕೊಡುವ ಅಕ್ಷಯಪಾತ್ರೆಯಾಗಿದ್ದರು. ಪವಾಡ ಪುರುಷರ ಅಥವಾ ಗುರುವಿನ ಹೆಸರಿನ ವಿಶ್ವಧಾರ ರಕ್ತನಿಧಿ ಕೇಂದ್ರ ರಕ್ತವನ್ನು ನೀಡುವ ಮುಖಾಂತರ ಹೆಚ್ಚು ಸಮಾಜಮುಖಿ ಕಾರ್ಯವನ್ನು ಮಾಡುತ್ತಿದೆ.
– ವಿವೇಕಾನಂದ ಶಿವಬಸಪ್ಪ ಇಂಗಳಗಿ, ಸೈಕಲ್ ಯಾತ್ರಿಕ ಹಾಗೂ ಹಾವೇರಿ ಸೈಕಲ್ ಕ್ಲಬ್‌ ಸದಸ್ಯ.

*

ಜಾತಿ,ಮತ ಭೇದವಿಲ್ಲದೆ ಬಡವರಿಗೆ ತುರ್ತು ಪರಿಸ್ಥಿತಿಯಲ್ಲಿ ರಕ್ತ ಪೂರೈಕೆ ಮಾಡುತ್ತಿರುವ ನಿಮ್ಮ ಕಾರ್ಯ ಶ್ಲಾಘನೀಯ. ಕೊರೊನಾ ಕಾರಣ ದೇಶದಾದ್ಯಂತ ಲಾಕ್‌ಡೌನ್‌ ಜಾರಿಯಾದ ತಕ್ಷಣ ರೋಗಿಗಳಿಗೆ ರಕ್ತದ ಕೊರತೆಯಾಗದಂತೆ ಪೂರೈಕೆ ಮಾಡಿದ ನಿಮ್ಮ ಸಮಾಜ ಸೇವಾಕಾರ್ಯಕ್ಕೆ ನನ್ನ ಅನಂತ ನಮನಗಳು. 5 ವರ್ಷ ಪೂರೈಸುತ್ತಿರುವ ನಿಮ್ಮ ವಿಶ್ವಧಾರ ರಕ್ತನಿಧಿ ಕೇಂದ್ರಕ್ಕೆ ಅಭಿನಂದನೆಗಳು.
– ಅಭಿಷೇಕ ಬ್ಯಾಡಗಿ, ಸ್ವಯಂ ಪ್ರೇರಿತ ರಕ್ತದಾನಿ ಮತ್ತು ಸಾಮಾಜಿಕ ಕಾರ್ಯಕರ್ತ

*

ಥಲಸೇಮಿಯಾ ಕಾಯಿಲೆಯಿಂದ ಬಳಲುತ್ತಿರುವ ನಮ್ಮ ಮಗಳುಪೂಜಾ ಶಿವಬಸಪ್ಪ ಬ್ಯಾಡಗಿಗೆ 8 ವರ್ಷಗಳಿಂದ ರಕ್ತ ಹಾಕಿಸುತ್ತಿದ್ದೇವೆ. ಎಲ್ಲಿಯೂ ಬ್ಲಡ್ ಸಿಗದಿದ್ದಾಗ ನಮಗೆ ವಿಶ್ವಧಾರ ಬ್ಲಡ್ ಬ್ಯಾಂಕಿನಿಂದ ಹಲವಾರು ಬಾರಿ ಬ್ಲಡ್ ಡೋನರ್‌ ಇಲ್ಲದೆ ಹಣ ಇಲ್ಲದೆ ರಕ್ತ ನೀಡಿ ಬಹಳ ಸಹಾಯ ಮಾಡಿದ್ದಾರೆ.
–ಚನ್ನಬಸಪ್ಪ ಬ್ಯಾಡಗಿ, ದೇವಿಹೊಸೂರ, ಹಾವೇರಿ

*

ನನ್ನ ಮಗಳ ಹೆರಿಗೆಯ ಸಂದರ್ಭದಲ್ಲಿ ಚಿಕಿತ್ಸೆಗೆ ರಕ್ತದ ಅವಶ್ಯ ಉಂಟಾಯಿತು. ಎಲ್ಲಿಯೂ ರಕ್ತ ಸಿಗದೇ ಇದ್ದಾಗ ವಿಶ್ವಧಾರ ರಕ್ತನಿಧಿಗೆ ಭೇಟಿ ನೀಡಿದಾಗ ‘ಓ’ ನೆಗೆಟಿವ್‌ ರಕ್ತವನ್ನು ಪಡೆದುಕೊಂಡಿದ್ದೇನೆ. ನನ್ನ ಮಗಳ ತುರ್ತು ಚಿಕಿತ್ಸೆಗೆ ಸಹಾಯವಾಗಿದೆ.
– ನಾಗಪ್ಪ ಹಾವೇರಿ

*****

ವಿಶ್ವಧಾರ ಬ್ಲಡ್‌ ಬ್ಯಾಂಕ್‌, ಹಳೇ ಪಿ.ಬಿ.ರಸ್ತೆ, ಶಿವಲಿಂಗನಗರ, ಹಾವೇರಿ. ಮೊ: 72046 92678, ದೂ: 08375– 296510

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.