ADVERTISEMENT

ಹಾವೇರಿ: ಮತಯಂತ್ರಗಳಿಗೆ ಪೊಲೀಸರ ಸರ್ಪಗಾವಲು

ಡಿ.9ರಂದು ಮತ ಎಣಿಕೆ: ಸ್ಟ್ರಾಂಗ್ ರೂಮ್‌ನಲ್ಲಿ ಸಿಸಿಟಿವಿ ಕಣ್ಗಾವಲು

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2019, 13:18 IST
Last Updated 6 ಡಿಸೆಂಬರ್ 2019, 13:18 IST
ಹಾವೇರಿಯ ದೇವಗಿರಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಇಟ್ಟಿರುವ ಮತಯಂತ್ರಗಳಿಗೆ ಪೊಲೀಸ್‌ ಭದ್ರತೆ ಒದಗಿಸಲಾಗಿದೆ
ಹಾವೇರಿಯ ದೇವಗಿರಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಇಟ್ಟಿರುವ ಮತಯಂತ್ರಗಳಿಗೆ ಪೊಲೀಸ್‌ ಭದ್ರತೆ ಒದಗಿಸಲಾಗಿದೆ   

ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ಹಾಗೂ ಹಿರೇಕೆರೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ಕಾರ್ಯ ಡಿಸೆಂಬರ್ 9ರ ಸೋಮವಾರ ಹಾವೇರಿಯ ದೇವಗಿರಿ ಸರ್ಕಾರಿ ಎಂಜಿನಿಯರಿಂಗ್‌ಕಾಲೇಜಿನಲ್ಲಿ ನಡೆಯಲಿದೆ.

ಎರಡೂ ಕ್ಷೇತ್ರಗಳ ಮತಯಂತ್ರಗಳನ್ನು ಈಗಾಗಲೇ ನಗರದ ಎಂಜಿನಿಯರಿಂಗ್‌ ಕಾಲೇಜಿನ ಸ್ಟ್ರಾಂಗ್ ರೂಮ್‍ನಲ್ಲಿ ಪೊಲೀಸ್ ಸರ್ಪಗಾವಲಿನಲ್ಲಿ ಕಾಯ್ದಿರಿಸಲಾಗಿದೆ. ಭದ್ರತೆಗಾಗಿ ಸಶಸ್ತ್ರ ಮೀಸಲು ಪಡೆ, ಕೆ.ಎಸ್.ಆರ್.ಪಿ.ತಂಡ, ಪಿ.ಎಸ್.ಐ, ಸರ್ಕಲ್‌ ಇನ್‌ಸ್ಪೆಕ್ಟರ್‌, ಡಿ.ವೈ.ಎಸ್.ಪಿ.ಗಳನ್ನು ನಿಯೋಜಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಭದ್ರತೆಯ ಮೇಲುಸ್ತುವಾರಿ ವಹಿಸಿದ್ದಾರೆ.

ರಾಣೆಬೆನ್ನೂರು ಹಾಗೂ ಹಿರೇಕೆರೂರು ಕ್ಷೇತ್ರದ ಮತ ಯಂತ್ರಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ಇಡಲಾಗಿದೆ. ಕೊಠಡಿಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಬಾಗಿಲು ಕಿಟಕಿಗಳನ್ನು ಭದ್ರಪಡಿಸಿ ಯಾವುದೇ ಅಗ್ನಿ ಅವಘಡಕ್ಕೆ ಅವಕಾಶವಿಲ್ಲದಂತೆ ದಾಸ್ತಾನು ಕೊಠಡಿಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಬೆಂಕಿ ನಿರೋಧಕ ಹಾಗೂ ನೀರಿನಿಂದ ಯಾವುದೇ ಹಾನಿಯಾಗದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿದೆ. ಅಭ್ಯರ್ಥಿಗಳ ಸಮ್ಮುಖದಲ್ಲಿ ಸ್ಟ್ರಾಂಗ್ ರೂಮ್‍ಗಳಿಗೆ ಸೀಲ್ ಮಾಡಲಾಗಿದೆ. ಶಸ್ತ್ರ ಸಹಿತ ಪೊಲೀಸ್ ಭದ್ರತೆಯನ್ನು ದಿನದ 24 ಗಂಟೆ ಕಾವಲಿರಿಸಲಾಗಿದೆ.

ADVERTISEMENT

ಮತ ಎಣಿಕೆ ನಡೆಯುವ ಎಂಜಿನಿಯರಿಂಗ್‌ ಕಾಲೇಜಿನ ಕಟ್ಟಡದ ಆವರಣ ಸುತ್ತಲೂ ಬ್ಯಾರಿಕೇಡ್‍ಗಳನ್ನು ನಿರ್ಮಿಸಲಾಗಿದೆ. ಅನಧಿಕೃತ ಯಾವುದೇ ವ್ಯಕ್ತಿಗಳು ಅಕ್ರಮ ಪ್ರವೇಶ ಮಾಡದಂತೆ ಬಿಗಿ ಭದ್ರತೆ ಕಲ್ಪಿಸಲಾಗಿದೆ.

ಶುಕ್ರವಾರ ಮುಂಜಾನೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ ಹಾಗೂ ಕ್ಷೇತ್ರ ಚುನಾವಣಾಧಿಕಾರಿ, ಭಾರತ ಚುನಾವಣಾ ಆಯೋಗದ ಕೇಂದ್ರ ವೀಕ್ಷಕರು ಮತ ಎಣಿಕೆ ಕೇಂದ್ರಕ್ಕೆ ಭೇಟಿ ಪರಿಶೀಲನೆ ನಡೆಸಿದರು.

ಎರಡು ಕ್ಷೇತ್ರಗಳ ಮತ ಎಣಿಕೆಗೆ ಪ್ರತ್ಯೇಕ ಕೊಠಡಿ ಹಾಗೂ ಮತ ಎಣಿಕೆಗೆ ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಕೊಠಡಿಯಲ್ಲಿ 14 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆಗೆ ಈಗಾಗಲೇ ಸಿಬ್ಬಂದಿ ನಿಯೋಜಿಸಲಾಗಿದ್ದು ಡಿ.7ರಂದು ತರಬೇತಿಯನ್ನು ಆಯೋಜಿಸಲಾಗಿದೆ. ಮಾಧ್ಯಮ ಕೊಠಡಿ, ಎನ್.ಐ.ಸಿ. ಕೊಠಡಿ, ಅಭ್ಯರ್ಥಿಗಳ ಕೊಠಡಿ ಹಾಗೂ ಕೇಂದ್ರ ಚುನಾವಣಾ ಆಯೋಗದ ವೀಕ್ಷಕರ ಕೊಠಡಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.