ರಟ್ಟೀಹಳ್ಳಿ: ತಾಲ್ಲೂಕಿನ ಹಿರೇಮೊರಬ ಗ್ರಾಮದಿಂದ ಮಾಸೂರು, ಶಿಕಾರಿಪುರ, ರಟ್ಟೀಹಳ್ಳಿ –ರಾಣೆಬೆನ್ನೂರಿಗೆ ಶಾಲಾ, ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಬಸ್ ವ್ಯವಸ್ಥೆಯಿಲ್ಲ ಹಾಗೂ ಸಂಚರಿಸುವ ಬಸ್ ಗಳನ್ನು ಗ್ರಾಮದಲ್ಲಿ ನಿಲುಗಡೆ ಮಾಡದೇ ಹೋಗುತ್ತಿರುವ ಚಾಲಕರ ವಿರುದ್ಧ ಸಿಡಿದೆದ್ದ ನೂರಾರು ಶಾಲಾ, ಕಾಲೇಜು ವಿದ್ಯಾರ್ಥಿಗಳು ರಸ್ತೆಗಿಳಿದು ದಿಢೀರ್ ಪ್ರತಿಭಟನೆ ಕೈಗೊಂಡರು.
ಬಸ್‌ಗಳನ್ನು ತಡೆದು ರಸ್ತೆಯಲ್ಲಿ ಕುಳಿತು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಗ್ರಾಮದ ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆ ಅರಿತು ಗ್ರಾಮಸ್ಥರು ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲವಾಗಿ ನಿಂತರು. ಸ್ಥಳಕ್ಕೆ ಆಗಮಿಸಿದ ಹಿರೇಕೆರೂರ ಪಿ.ಎಸ್.ಐ. ಹಾಗೂ ಪೊಲೀಸರು ಸಂಚಾರ ಸುಗಮಗಳಿಸುವ ಪ್ರಯತ್ನಕ್ಕೆ ಮುಂದಾದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಗೂ ಪೊಲೀಸ್ ಅಧಿಕಾರಗಳ ಮಧ್ಯ ಮಾತಿನ ಚಕಮಿಕಿ ನಡೆಯಿತು. ಅಲ್ಲದೆ ತಳ್ಳಾಟ, ನೂಕಾಟ ನಡೆಸಲಾಯಿತು. ಸ್ಥಳಕ್ಕೆ ಆಗಮಿಸಿದ ಹಿರೇಕೆರೂರ ಡಿಪೋ ವ್ಯವಸ್ಥಾಪಕರು, ‘ಹಿರೇಮೊರಬ ಗ್ರಾಮಕ್ಕೆ ಬಸ್ ನಿಲುಗಡೆ ಮಾಡದೆ ಹೋಗುತ್ತಿರುವ ಶಿಕಾರಿಪುರ ಹಾಗೂ ರಾಣೇಬೆನ್ನೂರ ಡಿಪೋ ಚಾಲಕ ಹಾಗೂ ನಿರ್ವಾಹಕರಿಗೆ ನೋಟಿಸ್ ನೀಡುವಂತೆ ಅಲ್ಲಿನ ಡಿಪೋ ಮಾನ್ಯೇಜರ್ ಅವರಿಗೆ ಹೇಳಲಾಗಿದೆ. ಮುಂದೆ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಕ್ರಮವಹಿಸಲಾಗುವುದು’ ಎಂದು ವಿನಂತಿಸಿದ ಮೇಲೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.