ADVERTISEMENT

ಹಾವೇರಿ: ಸಕ್ಕರೆ ಕಾರ್ಖಾನೆ ಚಿಮಣಿ ಏರಿ ಆತ್ಮಹತ್ಯೆ ಬೆದರಿಕೆ ಹಾಕಿದ ನೌಕರ 

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2021, 13:22 IST
Last Updated 16 ಏಪ್ರಿಲ್ 2021, 13:22 IST
150 ಅಡಿ ಎತ್ತರದ ಚಿಮಣಿ ಏರಿ ಬೆದರಿಕೆ ಹಾಕಿದ ಮಾಜಿ ನೌಕರ
150 ಅಡಿ ಎತ್ತರದ ಚಿಮಣಿ ಏರಿ ಬೆದರಿಕೆ ಹಾಕಿದ ಮಾಜಿ ನೌಕರ   

ಹಾವೇರಿ: ‘ನನ್ನನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬೇಕು, ಇಲ್ಲದಿದ್ದರೆ ಇಲ್ಲಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ತಾಲ್ಲೂಕಿನ ಸಂಗೂರ ಸಕ್ಕರೆ ಕಾರ್ಖಾನೆಯ ಮಾಜಿ ನೌಕರನೊಬ್ಬ, 150 ಅಡಿ ಎತ್ತರದ ಚಿಮಣಿ ಏರಿ ಬೆದರಿಕೆ ಹಾಕಿದ ಘಟನೆ ಶುಕ್ರವಾರ ನಡೆಯಿತು.

ಮೈಸೂರು ಜಿಲ್ಲೆ ಕೆ.ಆರ್‌. ನಗರ ತಾಲ್ಲೂಕಿನ ಬೋರೇಗೌಡ ಆತ್ಮಹತ್ಯೆಯ ಬೆದರಿಕೆ ಹಾಕಿದವರು. ಇವರು ಶುಕ್ರವಾರ ಬೆಳಿಗ್ಗೆ 10.30ಕ್ಕೆ ಏಕಾಏಕಿ ಕಾರ್ಖಾನೆಯ ಚಿಮಣಿ ಏರಿ, ನನಗೆ ನ್ಯಾಯ ಬೇಕು, ಇಲ್ಲವಾದರೆ ಸಾಯಲು ಸಿದ್ಧ ಎಂದು ಪಟ್ಟು ಹಿಡಿದರು. ಇದರಿಂದ ಮಧ್ಯಾಹ್ನ 3.30ರವರೆಗೆ ಆತಂಕದ ವಾತಾವರಣ ಸೃಷ್ಟಿಯಾಯಿತು.

‘2011ರಿಂದ 2018ರವರೆಗೆ ಕಾರ್ಖಾನೆಯಲ್ಲಿ ಕೆಲಸ ಮಾಡಿದ್ದೆ. ಅಧಿಕಾರಿಗಳು ನನಗೆ ಮಾನಸಿಕ ಕಿರುಕುಳ ನೀಡಿದ್ದರು. ನಂತರ ಬಲವಂತದಿಂದ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿಸಿಕೊಂಡು ಕೆಲಸದಿಂದ ತೆಗೆದರು. ಇದರಿಂದ ನಮ್ಮ ಕುಟುಂಬ ಸಂಕಷ್ಟಕ್ಕೆ ಈಡಾಗಿದೆ. ಹೀಗಾಗಿ ಮೂರು ವರ್ಷದ ಸಂಬಳವನ್ನು ನನಗೆ ನೀಡಬೇಕು ಮತ್ತು ಕೆಲಸ ಕೊಡಬೇಕು’ ಎಂದು ಬೋರೇಗೌಡ ಒತ್ತಾಯಿಸಿದರು.

ADVERTISEMENT

ಮಾಹಿತಿ ತಿಳಿದ ಹಾವೇರಿ ಗ್ರಾಮೀಣ ಠಾಣೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದರು. ನಂತರ ಬೋರೇಗೌಡ ಅವರ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಸ್ಥಳಕ್ಕೆ ಕರೆಸಲಾಯಿತು. ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವುದಾಗಿ ಕಾರ್ಖಾನೆಯ ಆಡಳಿತ ಮಂಡಳಿಯವರು ಭರವಸೆ ನೀಡಿದರು. ನಂತರ ಬೋರೇಗೌಡರ ಮನವೊಲಿಸಿದ ಪೊಲೀಸರು ಚಿಮಣಿಯ ತುದಿಯಿಂದ ಆತನನ್ನು ಕೆಳಗಿಳಿಸುವ ಮೂಲಕ ಪ್ರಕರಣವನ್ನು ಸುಖಾಂತ್ಯಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.