ತಿಳವಳ್ಳಿ: ರೈತರು ಪ್ರತಿ ವರ್ಷ ಸರ್ಕಾರದಿಂದ ಅಥವಾ ಮಾರುಕಟ್ಟೆಯ ವಿವಿಧ ತಳಿ ಬಿತ್ತನೆ ಬೀಜಕ್ಕೆ ಅವಲಂಬನೆ ಆಗದೆ ಸ್ಥಳೀಯ ಬಿತ್ತನೆ ಬೀಜಗಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳವಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶಪ್ಪ ಕೋಡಿಹಳ್ಳಿ ಹೇಳಿದರು.
ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾ ಭವನದಲ್ಲಿ ಶುಕ್ರವಾರ ಉಪಬೀಜ ಮಾರಾಟ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ಸ್ಥಳೀಯವಾಗಿ ಬೆಳೆದ ಬೀಜ ಸಂಗ್ರಹ ಮಾಡುವುದರಿಂದ ಇಳುವರಿ ಬರುವುದಿಲ್ಲ ಎಂಬುದು ತಪ್ಪು ಕಲ್ಪನೆ. ಹೊಸ ತಳಿಗಳ ಅವಲಂಬನೆ ತಪ್ಪಿಸಲು ಬೀಜ ಸಂಗ್ರಹಣೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ ಕುರುಬರ ಮಾತನಾಡಿ, ತಿಳವಳ್ಳಿ ಭಾಗದ ರೈತರು ಕೃಷಿ ಬೀಜ ಕೊಂಡುಕೊಳ್ಳಲು ಹಾನಗಲ್ ಕೃಷಿ ಇಲಾಖೆ ಮತ್ತು ಅಕ್ಕಿಆಲೂರಿನ ಕೃಷಿ ಸಂಪರ್ಕ ಕೇಂದ್ರಕ್ಕೆ ತೆರಳಿ ಬಿತ್ತನೆ ಬೀಜಗಳನ್ನು ಖರಿದಿಸಬೇಕಾಗಿತ್ತು. ಆದರೆ ತಿಳವಳ್ಳಿಯಲ್ಲಿ ಉಪ ಬೀಜ ಮಾರಾಟ ಕೇಂದ್ರವನ್ನು ಪ್ರತಿ ವರ್ಷ ತೆರೆಯುತ್ತಿರುವುದರಿಂದ ಈ ಭಾಗದ ರೈತರಿಗೆ ಅನುಕೂಲವಾಗಿದೆ ಎಂದರು.
ಕೃಷಿ ಇಲಾಖೆ ಅಧಿಕಾರಿಗಳಾದ ಸಂತೋಷ ಎಚ್, ಯಂಕಾನಂದ ಪೂಜಾರ, ಗ್ರಾಮ ಪಂಚಾಯ್ತಿ ಸದಸ್ಯ ಬಸವರಾಜ ಚವ್ಹಾಣ, ಇಮಾಮಸಾಬ್ ನಾಯಕವಾಡಿ, ಪ್ರಕಾಶ ಶಿರಾಳಕೊಪ್ಪ, ವಾಸೀಮ್ ಆಡೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.