
ರಾಣೆಬೆನ್ನೂರಿನಲ್ಲಿ ಮೆಕ್ಕೆಜೋಳ, ಭತ್ತ ಹಾಗೂ ಕಬ್ಬಿಗೆ ಬೆಂಬಲ ಬೆಲೆ ಘೋಷಣೆ ಮಾಡಿ, ಖರೀದಿ ಕೇಂದ್ರ ಆರಂಭಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ರೈತ ಮೋರ್ಚಾ, ಜೆಡಿಎಸ್ ಜಿಲ್ಲಾ ಘಟಕ ಹಾಗೂ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ ಆರ್.ಎಚ್.ಭಾಗವಾನ ಅವರಿಗೆ ಮನವಿ ಸಲ್ಲಿಸಿದರು
ರಾಣೆಬೆನ್ನೂರು: ನಗರದಲ್ಲಿ ಮೆಕ್ಕೆಜೋಳ, ಭತ್ತ ಹಾಗೂ ಕಬ್ಬಿಗೆ ಬೆಂಬಲ ಬೆಲೆ ಘೋಷಣೆ ಮಾಡಿ, ಖರೀದಿ ಕೇಂದ್ರ ಆರಂಭಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ರೈತ ಮೋರ್ಚಾ, ಜೆಡಿಎಸ್ ಜಿಲ್ಲಾ ಘಟಕ ಹಾಗೂ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಪ್ರತಿಭಟನಾ ಮೆರವಣಿಗೆಯು ಎತ್ತು ಚಕ್ಕಡಿಯೊಂದಿಗೆ ನಗರದ ಹೆಸ್ಕಾಂ ಗಣೇಶ ದೇವಸ್ಥಾನದಿಂದ ಆರಂಭವಾಗಿ ಸಿದ್ಧೇಶ್ವರ ನಗರದ ತಹಶೀಲ್ದಾರ್ ಕಚೇರಿಗೆ ತೆರಳಿತು. ರಾಜ್ಯ ಸರ್ಕಾರದ ವಿರುದ್ಧ ರೈತರು ಘೋಷಣೆಗಳನ್ನು ಕೂಗಿದರು. ಮಿನಿ ವಿಧಾನಸೌಧದ ಎದುರುಗಡೆ ಹಳೇ ಪಿ.ಬಿ.ರಸ್ತೆಯಲ್ಲಿ ಕೆಲ ಕಾಲ ಪ್ರತಿಭಟನೆ ನಡೆಸಿದರು. ನಂತರ ತಹಶೀಲ್ದಾರ ಆರ್.ಎಚ್.ಭಾಗವಾನ ಅವರಿಗೆ ಮನವಿ ಸಲ್ಲಿಸಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ ಮಾತನಾಡಿ, ರೈತರು ವರ್ಷ ವಿಡೀ ಕಷ್ಟಪಟ್ಟು ಬೆಳೆದ ಬೆಳೆಗೆ ಬೆಲೆಯೇ ಇಲ್ಲದೇ ಕಂಗಾಲಾಗಿದ್ದಾರೆ. ಸರ್ಕಾರ ಪ್ರತಿ ಕ್ವಿಂಟಲ್‌ಗೆ ಮೆಕ್ಕೆಜೋಳಕ್ಕೆ ₹ 2500, ಭತ್ತಕ್ಕೆ ₹ 2500 ಮತ್ತು ಕಬ್ಬಿಗೆ ₹ 3500 ಬೆಂಬಲ ಬೆಲೆ ಯೋಜನೆಯಂತೆ ಖರೀದಿ ಕೇಂದ್ರ ಆರಂಭಿಸಿ ಜಿಲ್ಲಾ ಹಾಗೂ ತಾಲ್ಲೂಕಿನ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ರೈತ ಮುಖಂಡರಾದ ಈರಣ್ಣ ಹಲಗೇರಿ ಮಾತನಾಡಿ, ಕೇಂದ್ರ ಸರ್ಕಾರ ಘೋಷಿಸಿರುವ ಬೆಂಬಲ ಬೆಲೆಗೂ ಮತ್ತು ದಲ್ಲಾಳಿಗಳು ಖರೀದಿ ಮಾಡುತ್ತಿರುವ ಬೆಲೆಗೂ ಇರುವ ಅಂತರದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಭಾಗದ ಪ್ರಮುಖ ಬೆಳೆ ಮೆಕ್ಕೆಜೋಳ ಈಗಾಗಲೇ ಕಟಾವಾಗಿದೆ. ಆದರೆ, ಮಾರುಕಟ್ಟೆಯಲ್ಲಿ ದರ ₹ 1800ಕ್ಕೆ ಕುಸಿದಿದೆ. ರೈತರು ಎಕರೆಗೆ ₹ 25-30 ಸಾವಿರ ಹಣ ಖರ್ಚು ಮಾಡಿ ಬೆಳೆದ ಬೆಳೆಗೆ ಇಷ್ಟು ಕಡಿಮೆ ಬೆಲೆ ದೊರಕುತ್ತಿರುವುದು ಅತ್ಯಂತ ವಿಷಾದನೀಯ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಮತ್ತು ಮಾಜಿ ಶಾಸಕ ಅರುಣಕುಮಾರ ಪೂಜಾರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ ಹಾಗೂ ಹನುಮಂತಪ್ಪ ಕಬ್ಬಾರ, ಹನುಮಂತಪ್ಪ ದೀವಿಗಿಹಳ್ಳಿ, ಸುರೇಶಪ್ಪ ಮೈದೂರ ಅವರು ಮಾತನಾಡಿದರು.
ವೈದ್ಯ ಡಾ.ಬಸವರಾಜ ಕೇಲಗಾರ, ಬಿಜೆಪಿ ನಗರ ಘಟಕ ಅಧ್ಯಕ್ಷ ಮಂಜುನಾಥ ಕಾಟಿ, ಜೆಡಿಎಸ್ ತಾಲೂಕಾಧ್ಯಕ್ಷ ನಿಂಗಪ್ಪ ಸತ್ಯಪ್ಪನವರ, ಸುಭಾಷ ಶಿರಗೇರಿ, ಪರಮೇಶ ಗೂಳಣ್ಣನವರ, ಕೆ.ಶಿವಲಿಂಗಪ್ಪ, ಸಿದ್ದು ಚಿಕ್ಕಬಿದರಿ, ನಿಂಗರಾಜ ಕೋಡಿಹಳ್ಳಿ, ಚೋಳಪ್ಪ ಕಸವಾಳ, ಎ.ಬಿ.ಪಾಟೀಲ, ಜಿ.ಜಿ. ಹೊಟ್ಟಿಗೌಡ್ರ, ಪ್ರಕಾಶ ಪೂಜಾರ, ಮೈಲಪ್ಪ ಗೋಣಿಬಸಮ್ಮನವರ, ಸೋಮು ಗೌಡಶಿವಣ್ಣನವರ, ಉಷಾ ಜಾಡಮಲಿ, ಕದರಮಂಡಲಗಿ, ಪೂಜಾ ದೈವಜ್ಞ, ಐಶ್ವರ್ಯ ಮಡಿವಾಳರ, ರವಿ ತಳವಾರ, ಶ್ರೀನಿವಾಸ ಅಡ್ಮನಿ, ಹನುಮಂತಪ್ಪ ದೇವರಗುಡ್ಡ, ಸಂತೋಷ ತೆವರಿ, ಯುವರಾಜ ಬಾರಟಕ್ಕೆ, ಸಂತೋಷ ಬಗಾಡೆ, ಕೊಟ್ರೇಶಪ್ಪ ಎಮ್ಮಿ, ಬಸವರಾಜ ಮೈಲಾರ, ಅಶೋಕ ಪಾಸಿಗಾರ, ಹನುಮಂತಪ್ಪ ಬಿಷ್ಟಣ್ಣನವರ, ರಮೇಶ ಮಾಕನೂರು, ವಿಠ್ಠಲ ಸುಣಗಾರ, ಶಿವು ಕರಿಯಪ್ಪನವರ, ರಮೇಶ ನಂದಿಹಳ್ಳಿ, ಈರಣ್ಣ ನಿಟ್ಟೂರು, ಮನು ಗೌಡಶಿವಣ್ಣನವರ, ಬಿರೇಶ ಬಾರ್ಕಿ, ಬಸವರಾಜ ಕೊಪ್ಪದ, ನಿಂಗಣ್ಣ ಹೊನ್ನಾಳ್ಳಿ, ಮಲ್ಲಿಕಾರ್ಜುನ ಹಲಗೇರಿ ಸೇರಿದಂತೆ ಬಿಜೆಪಿ, ಜೆಡಿಎಸ್ ಹಾಗೂ ರಾಜ್ಯ ರೈತ ಸಂಘ, ಹಸಿರು ಸೇನೆ ಮತ್ತು ತಾಲ್ಲೂಕಿನ ವಿವಿಧ ರೈತ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ಇದ್ದರು.
ರಾಜ್ಯ ಸರ್ಕಾರ ಕೂಡಲೇ ಮೆಕ್ಕೆಜೋಳಕ್ಕೆ ₹ 2500 ಬೆಲೆ ನಿಗದಿ ಮಾಡಿ ಖರೀದಿ ಕೇಂದ್ರ ಪ್ರಾರಂಭಿಸಿ ಅತಿವೃಷ್ಟಿ ಬಾಧಿತ ರೈತರಿಗೆ ನೆರವು ನೀಡಲೇಬೇಕು
–ಈರಣ್ಣ ಹಲಗೇರ ರೈತ ಮುಖಂಡ
ಈ ಭಾಗದಲ್ಲಿ ಮೆಕ್ಕೆಜೋಳ ಮತ್ತು ಭತ್ತ ಬೆಳೆಗಾರರು ಹೆಚ್ಚಾಗಿದ್ದು ಈಗಾಗಲೇ ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿದೆ ರಾಜ್ಯ ಸರ್ಕಾರ ವಿಳಂಬ ಸಲ್ಲದು
–ವಿರುಪಾಕ್ಷಪ್ಪ ಬಳ್ಳಾರಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.