
ಹಾವೇರಿ: ಮರಿ ಕಲ್ಯಾಣ ಖ್ಯಾತಿಯ ಹಾವೇರಿಯಲ್ಲಿರುವ ಹುಕ್ಕೇರಿಮಠದ ಜಾತ್ರಾ ಮಹೋತ್ಸವ ಆರಂಭವಾಗಿದ್ದು, ಇದರ ನಿಮಿತ್ತ ಸದಾಶಿವ ಸ್ವಾಮೀಜಿ ಹಾಗೂ ಇತರೆ ಮಠಾಧೀಶರು ಜನರ ಮನೆ ಮನೆಗೆ ಪಾದಯಾತ್ರೆ ನಡೆಸುತ್ತಿದ್ದಾರೆ.
ಪ್ರತಿವರ್ಷವೂ ಜಾತ್ರೆ ನಡೆಯುತ್ತದೆ. ಆದರೆ, ಈ ಬಾರಿಯ ಜಾತ್ರೆ ಹಲವು ಕಾರ್ಯಕ್ರಮಗಳಿಗೆ ಸಾಕ್ಷಿಯಾಗುತ್ತಿದೆ. ಶಿವಬಸವೇಶ್ವರ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಸುವರ್ಣ ಮಹೋತ್ಸವ, ಶಿವಬಸವೇಶ್ವರ ಪ್ರಸಾದ ನಿಲಯದ ಅಮೃತ ಮಹೋತ್ಸವ, ಪ್ರಸಾದ ನಿಲಯದ ಹಳೇ ವಿದ್ಯಾರ್ಥಿಗಳ ಸಂಘದ ಸುವರ್ಣ ಮಹೋತ್ಸವ, ಶಿವಬಸವ ಜಾನುವಾರು ಜಾತ್ರೆಯ ಸುವರ್ಣ ಮಹೋತ್ಸವವು ನಡೆಯುತ್ತಿದೆ.
ಜಾತ್ರೆಯನ್ನು ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಿರುವ ಸದಾಶಿವ ಸ್ವಾಮೀಜಿ, ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ದುಶ್ಚಟಗಳ ದಾಸರಾಗಿರುವ ಯುವಸಮೂಹವನ್ನು ಎಚ್ಚರಿಸಲು ಜನಜಾಗೃತಿ ಪಾದಯಾತ್ರೆ ಆರಂಭಿಸಿದ್ದಾರೆ. ಹಾವೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಂಚರಿಸಿದ ಸ್ವಾಮೀಜಿ, ಈಗಾಗಲೇ ನೂರಾರು ಯುವಕರು ದುಶ್ಚಟಗಳನ್ನು ತ್ಯಜಿಸುವಂತೆ ಮಾಡಿದ್ದಾರೆ. ಈಗ, ಹಾವೇರಿ ನಗರದಲ್ಲೂ ಪಾದಯಾತ್ರೆ ನಡೆಯುತ್ತಿದೆ.
ಸ್ವಾಮೀಜಿಯವರನ್ನು ನೋಡಲು ಭಕ್ತರೇ ಮಠಕ್ಕೆ ಬರುವ ಸಂಪ್ರದಾಯವಿತ್ತು. ಆದರೆ, ಈಗ ಸದಾಶಿವ ಸ್ವಾಮೀಜಿ ಪಾದಯಾತ್ರೆ ಮೂಲಕ ಮನೆ ಮನೆಗೆ ತೆರಳಿ ಭಕ್ತರಿಗೆ ದರುಶನ ನೀಡುತ್ತಿದ್ದಾರೆ. ಇದರ ಜೊತೆಯಲ್ಲಿಯೇ ಧರ್ಮ, ಜಾತಿ, ಮತ–ಪಂಥ ಎಂಬ ತಾರತಮ್ಯವಿಲ್ಲದೇ ಪ್ರತಿಯೊಬ್ಬರಿಗೂ ರುದ್ರಾಕ್ಷಿ ಧಾರಣೆ ಮಾಡುತ್ತಿದ್ದಾರೆ. ಸ್ವಾಮೀಜಿಯವರ ಈ ಕೆಲಸಕ್ಕೆ ಭಕ್ತರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.
ಪರಿಶಿಷ್ಟ ಸಮುದಾಯದವರ ಮನೆಗಳಿಗೆ ಭೇಟಿ; ನಗರದ ಅಂಬೇಡ್ಕರ್ ವೃತ್ತದಲ್ಲಿರುವ ಪರಿಶಿಷ್ಟ ಸಮುದಾಯದವರ ಮನೆಗಳಿಗೂ ಭೇಟಿ ನೀಡಿದ ಸ್ವಾಮೀಜಿ, ಅಲ್ಲಿಯ ಜನರೊಂದಿಗೆ ಬೆರೆತು ಹಲವರಿಗೆ ರುದ್ರಾಕ್ಷಿ ಧಾರಣೆ ಮಾಡಿದರು. ಅಂದು ಬಸವಣ್ಣನವರ ಜೊತೆಗಿದ್ದ ಶರಣರ ಬಗ್ಗೆ ಹಾಗೂ ಅವರು ವಚನ ಸಾಹಿತ್ಯಕ್ಕೆ ನೀಡಿದ ಕೊಡುಗೆಗಳನ್ನು ನೆನೆದರು.
ಸ್ವಾಮೀಜಿ ತಮ್ಮ ಮನೆಗೆ ಬರುವ ಮಾಹಿತಿ ತಿಳಿದಿದ್ದ ಜನರು, ಅಂಗಳವನ್ನು ಸ್ವಚ್ಛಗೊಳಿಸಿ ರಂಗೋಲಿ ಹಾಕಿದ್ದರು. ಸ್ವಾಮೀಜಿ ಬರುತ್ತಿದ್ದಂತೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು. ಇಡೀ ಕಾಲೊನಿಯಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು.
‘ಪಾದಯಾತ್ರೆ ನಿಮಿತ್ತ 5 ಲಕ್ಷ ಮಂದಿಗೆ ರುದ್ರಾಕ್ಷಿ ಧಾರಣೆ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ. ಈ ಪೈಕಿ ಈಗಾಗಲೇ 3.50 ಲಕ್ಷ ಮಂದಿಗೆ ರುದ್ರಾಕ್ಷಿ ಧಾರಣೆ ಮಾಡಲಾಗಿದೆ. ಮುಂದಿನ ಕೆಲವೇ ದಿನಗಳಲ್ಲಿ ಮತ್ತಷ್ಟು ಮಂದಿಗೆ ರುದ್ರಾಕ್ಷಿ ಧಾರಣೆ ಮಾಡಲಾಗುವುದು’ ಎಂದು ಜಾತ್ರಾ ಕಮಿಟಿ ತಿಳಿಸಿದೆ.
ನಿತ್ಯವೂ ಅನ್ನದಾಸೋಹ: ಜಾತ್ರೆ ನಿಮಿತ್ತ ಹುಕ್ಕೇರಿಮಠದ ಶಾಲೆಯ ಆವರಣದಲ್ಲಿ ನಿತ್ಯವೂ ಸಂಜೆ 6 ಗಂಟೆಯಿಂದ 8 ಗಂಟೆಯವರೆಗೆ ಆಧ್ವಾತ್ಮ ಪ್ರವಚನ ಹಮ್ಮಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಅನ್ನದಾಸೋಹವೂ ನಡೆಯುತ್ತಿದೆ. ಭಕ್ತರು ನೀಡಿದ ದೇಣಿಗೆ ಹಾಗೂ ವಿವಿಧ ಪದಾರ್ಥಗಳನ್ನು ಪ್ರಸಾದ ರೂಪದಲ್ಲಿ ಜನರಿಗೆ ನೀಡಲಾಗುತ್ತಿದೆ. ನಗರ ಮಾತ್ರವಲ್ಲದೇ ಗ್ರಾಮೀಣ ಭಾಗದಿಂದಲೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಚನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
‘ದುಶ್ಚಟಗಳಿಂದ ಮನುಷ್ಯ ವಿನಾಶ’
ಹಾವೇರಿ: ‘ದುಶ್ಚಟಗಳು ಮನುಷ್ಯನನ್ನು ವಿನಾಶಗೊಳಿಸುತ್ತದೆ. ಸದಾಚಾರ ಮತ್ತು ಸದ್ಗುಣಗಳು ಮಾತ್ರ ಮನುಷ್ಯನನ್ನು ವಿಕಾಸಗೊಳಿಸುತ್ತವೆ. ಯುವಜನರು ತಮ್ಮ ಅಮೂಲ್ಯವಾದ ಜೀವನವನ್ನು ಸಾರ್ಥಕಗೊಳಿಸಲು ಸಜ್ಜನರ ಸಂಗದಲ್ಲಿರಬೇಕು. ದುರ್ಜನರಿಂದ ದೂರವಿರಬೇಕು’ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.
ನಗರದ ರಾಮದೇವರ ಗುಡಿಯಲ್ಲಿ ಮಂಗಳವಾರ ನಡೆದ ಪಾದಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ದುಶ್ಚಟಗಳಿಗೆ ಅಂಟಿಕೊಂಡ ಒಬ್ಬ ವ್ಯಕ್ತಿಯಿಂದ ಇಡೀ ಕುಟುಂಬವೇ ತತ್ತರಿಸುತ್ತದೆ. ಸ್ವಸ್ಥ ಸಮಾಜ ಹಾಗೂ ಸ್ವಸ್ಥ ಕುಟುಂಬ ನಿರ್ಮಾಣಕ್ಕೂ ದುಶ್ಚಟಗಳು ಮಾರಕ’ ಎಂದರು.
‘ಇಂದಿನ ಯುವ ಪೀಳಿಗೆ ಸನ್ಮಾರ್ಗದಿಂದ ವಿಮುಖವಾಗುತ್ತಿದೆ. ಮಕ್ಕಳು ಮಾತು ಕೇಳದ ಕಾಲಘಟ್ಟದಲ್ಲಿದ್ದೇವೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ಪಾಲಕರು ಮತ್ತು ವಿಶೇಷವಾಗಿ ಮಹಿಳೆಯರು ತಮ್ಮ ಕೌಟುಂಬಿಕ ವಾತಾವರಣವನ್ನು ಸುಸ್ಥಿತಿಯಲ್ಲಿಡಲು ಶ್ರಮಿಸಬೇಕು. ಅಂದಾಗ ಮಾತ್ರ ನೆಮ್ಮದಿ ಜೀವನ ಸಾಧ್ಯ’ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಸ್ವಾಮೀಜಿಯವರು ನಾಯಕ ಚಾಳದಿಂದ ದ್ಯಾಮವ್ವನ ಗುಡಿ ಓಣಿ ದೇಸಾಯಿ ಗಲ್ಲಿ ಕೊರಗರ ಓಣಿ ಮುದ್ದುರಗೆಮ್ಮ ದೇವಸ್ಥಾನ ಮಾರ್ಗವಾಗಿ ರಾಮದೇವರ ಗುಡಿಯವರೆಗೂ ಪಾದಯಾತ್ರೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.