ADVERTISEMENT

ತಹಶೀಲ್ದಾರ್ ಚಂದ್ರಶೇಖರ ಗಾಳಿ ಕಲಬುರ್ಗಿಗೆ ವರ್ಗಾವಣೆ

ಶಿಗ್ಗಾವಿ ತಹಶೀಲ್ದಾರ್‌ ಹುದ್ದೆಗೆ ಅಧಿಕಾರ ಕಿತ್ತಾಟ ಪ್ರಕರಣ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 14:41 IST
Last Updated 10 ಫೆಬ್ರುವರಿ 2020, 14:41 IST
ಚಂದ್ರಶೇಖರ್ ಗಾಳಿ
ಚಂದ್ರಶೇಖರ್ ಗಾಳಿ   

ಶಿಗ್ಗಾವಿ: ತಾಲ್ಲೂಕಿನ ಗ್ರೇಡ್‌–1 ತಹಶೀಲ್ದಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಚಂದ್ರಶೇಖರ ಗಾಳಿ ಅವರನ್ನು ಕಲಬುರ್ಗಿ ಚುನಾವಣಾ ವಿಭಾಗದ ಗ್ರೇಡ್‌–2 ತಹಶೀಲ್ದಾರರನ್ನಾಗಿ ಸೋಮವಾರ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಚಂದ್ರಶೇಖರ ಗಾಳಿ ಅವರು ಫೆ.3ರಂದು ಶಿಗ್ಗಾವಿ ತಾಲ್ಲೂಕಿನ ನೂತನ ತಹಶೀಲ್ದಾರ್‌ ಪ್ರಕಾಶ ಕುದರಿ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದ್ದರು. ನಂತರ ವರ್ಗಾವಣೆ ಮಾಡಿರುವುದು ಕಾನೂನು ಬಾಹಿರ ಎಂದು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ)ಯಿಂದ ತಡೆಯಾಜ್ಞೆ ತಂದು, ಫೆ.5ರಂದು ಮತ್ತೆ ಶಿಗ್ಗಾವಿ ತಹಶೀಲ್ದಾರ್‌ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಇದಕ್ಕೆಫೆ.7ರಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಡೆಯಾಜ್ಞೆ ನೀಡಿದ್ದರು.

ಶಿಗ್ಗಾವಿ ತಹಶೀಲ್ದಾರ್‌ ಹುದ್ದೆಗಾಗಿ ಚಂದ್ರಶೇಖರ ಗಾಳಿ ಮತ್ತು ಪ್ರಕಾಶ ಕುದರಿ ನಡುವೆ ಜಟಾಪಟಿ ನಡೆದಿತ್ತು. ಗೃಹಸಚಿವರ ತಾಲ್ಲೂಕಿನಲ್ಲೇ ಅಧಿಕಾರಕ್ಕಾಗಿ ನಡೆದ ಈ ಕಿತ್ತಾಟ ಜನರ ಬೇಸರಕ್ಕೆ ಕಾರಣವಾಗಿತ್ತು.

ADVERTISEMENT

‘ಈ ಮುಂಚೆ ಶಿಗ್ಗಾವಿಯಿಂದ ನನ್ನನ್ನು ವರ್ಗಾವಣೆ ಮಾಡಿರುವುದಕ್ಕೆ ಕೆಎಟಿಯಿಂದ ತಡೆಯಾಜ್ಞೆ ತಂದಿದ್ದೇನೆ. ಹಾಗಾಗಿ ಇನ್ನೂ ಎರಡು ವರ್ಷ ನನ್ನನ್ನು ವರ್ಗಾವಣೆ ಮಾಡುವಂತಿಲ್ಲ. ಜಿಲ್ಲಾಧಿಕಾರಿ ಅನುಮತಿ ಪಡೆದು ಶಿಗ್ಗಾವಿ ತಹಶೀಲ್ದಾರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಸೋಮವಾರ ಮತ್ತೆ ಸರ್ಕಾರ ನನ್ನನ್ನು ಕಲಬುರ್ಗಿಗೆ ವರ್ಗಾವಣೆ ಮಾಡಿದೆ. ಕೆಎಟಿಯಲ್ಲಿ ಇನ್ನೂ ಪ್ರಕರಣ ಇತ್ಯರ್ಥವಾಗಿಲ್ಲ. ಹಾಗಾಗಿ ಶಿಗ್ಗಾವಿಯಲ್ಲಿ ಮುಂದುವರಿಯಬೇಕೋ ಅಥವಾ ಕಲಬುರ್ಗಿಗೆ ಹೋಗಬೇಕೋ ಎಂಬುದನ್ನು ಮೇಲಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ’ ಎಂದು ಚಂದ್ರಶೇಖರ ಗಾಳಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸರ್ಕಾರದ ಆದೇಶ ಬರುವವರೆಗೆ ತಾವು ಅಧಿಕಾರದಲ್ಲಿ ಮುಂದುವರಿಯುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಹೀಗಾಗಿ ಆವರ ಆದೇಶದಂತೆ ಶಿಗ್ಗಾವಿ ತಹಶೀಲ್ದಾರ್‌ರಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ’ ಎಂದು ಪ್ರಕಾಶ ಕುದರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.