
ಬ್ಯಾಡಗಿ: ಇಲ್ಲಿಯ ತಾಲ್ಲೂಕು ಆಸ್ಪತ್ರೆಗೆ ಕ್ಯಾಸುಲ್ಟಿ ವಿಭಾಗದಲ್ಲಿ ಇಸಿಜಿ ಪರೀಕ್ಷೆ, ಹೊಸ ಗಾಯಕ್ಕೆ ಹೊಲಿಗೆ ಹಾಕುವುದು ಅಟೆಂಡರ್, ರಕ್ತ ಪರೀಕ್ಷೆಗೆ ಹಣ ಪಡೆದರೂ ರಸೀತಿ ನೀಡುವುದು ಅಪರೂಪ, ಜನೌಷಧಿ ಹಾಗೂ ಉಚಿತ ಔಷಧ ವಿತರಣೆ ವ್ಯವಸ್ಥೆ ಇದ್ದರೂ ಹೊರಗಿನಿಂದ ಔಷಧಿ ತರುವಂತೆ ವೈದ್ಯರ ಸೂಚನೆ, ಮಹಿಳೆಯರ ರಕ್ತ ಪರೀಕ್ಷೆಗೆ ಖಾಸಗಿ ಕೇಂದ್ರಕ್ಕೆ ಕಳಿಸುವುದು ಇವು ತಾಲ್ಲೂಕು ಆಸ್ಪತ್ರೆಯಲ್ಲಿ ಕಂಡು ಬರುವ ಸಮಸ್ಯೆಗಳು.
ಪಟ್ಟಣದಲ್ಲಿ 100 ಹಾಸಿಗೆಯ ತಾಲ್ಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಿದ ಬಳಿಕ ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ಒಟ್ಟಾರೆ 83 ಹುದ್ದೆಗಳಲ್ಲಿ 40 ಜನ ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿದಿನ 500ಕ್ಕೂ ಹೆಚ್ಚು ಹೊರರೋಗಿಗಳ ನೋಂದಣಿಯಾಗುತ್ತಿದ್ದು, ಅವರಿಗೆ ಸಮರ್ಪಕ ವೈದ್ಯಕೀಯ ಸೇವೆ ದೊರೆಯುತ್ತಿಲ್ಲ.
ಪ್ರಮುಖವಾಗಿ ವರ್ಗಾವಣೆಗೊಂಡ ಚರ್ಮರೋಗ ವೈದ್ಯರ ಹುದ್ದೆ ಎರಡು ವರ್ಷಗಳಿಂದ ಖಾಲಿ ಉಳಿದಿದೆ, ತುರ್ತು ವೈದ್ಯಾಧಿಕಾರಿಗಳು, ಹಿರಿಯ ಪ್ರಯೋಗಾಲಯದ ತಜ್ಞರು, ಪ್ರಥಮ ಹಾಗೂ ದ್ವಿತೀಯ ದರ್ಜೆ ಸಹಾಯಕರು ಮತ್ತು ಹಿರಿಯ ಶುಶ್ರೂಷಾಧಿಕಾರಿಗಳ ತಲಾ ಎರಡು ಹುದ್ದೆಗಳು ಖಾಲಿ ಇವೆ.
28 ಹಾಸ್ಪಿಟಲ್ ಅಟೆಂಡರ್‌ಗಳ ಹುದ್ದೆಗಳು ಸಹ ಖಾಲಿ ಉಳಿದಿರುವುದು ಸಾರ್ವಜನಿಕರಿಗೆ ಉತ್ತಮ ವೈದ್ಯಕೀಯ ಸೇವೆಯ ಕೊರತೆ ಎದುರಿಸುತ್ತಿದೆ. ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರ ಮುಂದಾಗದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಬೈಕ್ ಅಪಘಾತದಲ್ಲಿ ಗಾಯವಾಗಿದ್ದ ಕಾಲಿಗೆ ಕ್ಯಾಜ್‌ವಲ್ಟಿ ವಿಭಾಗದಲ್ಲಿ ಅಟೆಂಡರ್ ಹೊಲಿಗೆ ಹಾಕಿದ್ದರು. ನರ್ಸಗಳಿದ್ದರೂ ನೆರವಿಗೆ ಬಾರದೇ ಇದ್ದುದರಿಂದ ಇಂದಿಗೂ ನೋವನ್ನು ಅನುಭವಿಸುವಂತಾಗಿದೆ ಎಂದು ಚಿಕಿತ್ಸೆಗೆ ಒಳಗಾದ ವ್ಯಕ್ತಿಯೊಬ್ಬರು ಅಳಲು ತೋಡಿಕೊಂಡರು.
‘ದಿನಕ್ಕೆ 500ಕ್ಕೂ ಹೆಚ್ಚು ಹೊರರೋಗಗಳು ನೋಂದಣಿಯಾಗುತ್ತಿದ್ದಾರೆ. ಇದರಲ್ಲಿ ಪ್ರತಿ ಶತ ಶೇ 25 ರಷ್ಟು ಜನರು ರಕ್ತ ಪರೀಕ್ಷೆಗ ಒಳಗಾಗುತ್ತಾರೆ. ಆದರೆ ಹಣ ಪಡೆದರೂ ರಸೀದಿ ನೀಡುವುದಿಲ್ಲ. ಅತೀ ಕಡಿಮೆ ದರದಲ್ಲಿ ಬಡವರಿಗೆ ಔಷಧ ದೊರೆಯಬೇಕು ಎನ್ನುವ ಉದ್ದೇಶದಿಂದ ಆಸ್ಪತ್ರೆ ಆವರಣದಲ್ಲಿ ಜನೌಷಧಿ ಮಳಿಗೆ ತೆರೆಯಲಾಗಿದೆ. ಆದರೆ ಹೊರಗಿನಿಂದ ಔಷಧ ತರುವಂತೆ ವೈದ್ಯರು ಚೀಟಿ ಬರೆದು ಕೊಡುತ್ತಾರೆ’ ಎಂದು ಬನ್ನಿಹಟ್ಟಿ ಗ್ರಾಮದ ನಿವಾಸಿಯೊಬ್ಬರು ದೂರಿದರು.
‘ಮಹಿಳೆಯರ ರಕ್ತ ಪರೀಕ್ಷೆಗೆ ಸೂಕ್ತ ವ್ಯವಸ್ಥೆ ಇಲ್ಲದೇ ಇರುವುದರಿಂದ ಖಾಸಗಿ ಲ್ಯಾಬ್‌ಗೆ ಹೋಗಾಬೇಕಾದ ಪರಿಸ್ಥತಿ ನಿರ್ಮಾಣವಾಗಿದೆ. ಅಲ್ಲಿ ಹೆಚ್ಚಿನ ಹಣ ಪಾವತಿಸಬೇಕಾಗಿದೆ’ ಎಂದು ಸಂತಾನ ಹರಣ ಚಿಕಿತ್ಸೆಗೆ ಒಳಗಾದ ಮಹಿಳೆಯೊಬ್ಬಳು ಅಸಮಧಾನ ವ್ಯಕ್ತಪಡಿಸಿದರು.
ವಸತಿ ಗೃಹಗಳ ಸಮಸ್ಯೆ:
ವೈದ್ಯರ ಸಂಖ್ಯೆಗೆ ಅನುಗುಣವಾಗಿ ಆಸ್ಪತ್ರೆಯ ಆವರಣದಲ್ಲಿ ವಸತಿ ಗೃಹಗಳ ನಿರ್ಮಾಣವಾಗಿಲ್ಲ. ಇದರಿಂದ ತುರ್ತು ಸಂದರ್ಭದಲ್ಲಿ ವೈದ್ಯರು ಲಭ್ಯವಾಗದೆ ಸಾರ್ವಜನಿಕರು ಪರದಾಡುವಂತಾಗಿದೆ. ರಾಣೆಬೆನ್ನೂರು, ದಾವಣಗೆರೆ ಮತ್ತಿತರ ನಗರಗಳಲ್ಲಿ ವೈದ್ಯರು ವಾಸವಾಗಿದ್ದಾರೆ.
ಅವರಿಗೆಲ್ಲ ಆಸ್ಪತ್ರೆ ಆವರಣದಲ್ಲಿ 10 ವಸತಿ ಗೃಹಗಳನ್ನಾದರೂ ನಿರ್ಮಿಸಿ ಸೌಲಭ್ಯವನ್ನು ಕಲ್ಪಿಸಬೇಕು ಎನ್ನುವ ಕೂಗು ಸರ್ಕಾರಕ್ಕೆ ತಲುಪಿಲ್ಲ ಎನ್ನಲಾಗಿದೆ. ಕೇವಲ ಗ್ಯಾರಂಟಿಗಳಲ್ಲಿ ತಲ್ಲೀನವಾಗಿರುವ ಸರ್ಕಾರ ಜನರಿಗೆ ಸಮರ್ಪಕ ವೈದ್ಯಕೀಯ ಸೇವೆ ಕಲ್ಪಿಸಲು ವಿಫಲವಾಗಿದೆ ಎಂದು ಸಾರ್ಜನಿಕರು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.