ADVERTISEMENT

ಅಧ್ಯಕ್ಷ, ಉಪಾಧ್ಯಕ್ಷರ ಪದಚ್ಯುತಿ

ತಮ್ಮ ವಿರುದ್ಧ ತಾವೇ ಕೈ ಎತ್ತಿದ ಉಪಾಧ್ಯಕ್ಷೆ!

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2020, 3:27 IST
Last Updated 5 ಡಿಸೆಂಬರ್ 2020, 3:27 IST
ಹಾನಗಲ್ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ವಿರುದ್ಧ ಶುಕ್ರವಾರ ನಿಗದಿಯಾಗಿದ್ದ ಅವಿಶ್ವಾಸ ಗೊತ್ತುವಳಿ ನಿರ್ಣಯದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ತಾಲ್ಲೂಕು ಪಂಚಾಯ್ತಿ ಸದಸ್ಯರು
ಹಾನಗಲ್ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ವಿರುದ್ಧ ಶುಕ್ರವಾರ ನಿಗದಿಯಾಗಿದ್ದ ಅವಿಶ್ವಾಸ ಗೊತ್ತುವಳಿ ನಿರ್ಣಯದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ತಾಲ್ಲೂಕು ಪಂಚಾಯ್ತಿ ಸದಸ್ಯರು   

ಹಾನಗಲ್‌ (ಹಾವೇರಿ ಜಿಲ್ಲೆ): ಹೊಸದಾಗಿ ಅಧ್ಯಕ್ಷ ಉಪಾಧ್ಯಕ್ಷರನ್ನು ಆಯ್ಕೆಮಾಡುವ ಉದ್ದೇಶದಿಂದ ಹಾನಗಲ್ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಸಿದ್ಧಪ್ಪ ಹಿರಗಪ್ಪನವರ ಮತ್ತು ಉಪಾಧ್ಯಕ್ಷೆ ಸರಳಾ ಜಾಧವ ಅವರ ವಿರುದ್ಧ ಶುಕ್ರವಾರ ಅವಿಶ್ವಾಸ ಗೊತ್ತುವಳಿ ನಿರ್ಣಯ ಮಂಡಿಸಿ ಪದಚ್ಯುತಗೊಳಿಸಲಾಯಿತು.

24 ಸದಸ್ಯ ಬಲದ ತಾಲ್ಲೂಕು ಪಂಚಾಯ್ತಿಯಲ್ಲಿ 20 ಮಂದಿ ಕಾಂಗ್ರೆಸ್‌ ಸದಸ್ಯರಿದ್ದು ಅವಿಶ್ವಾಸ ನಿರ್ಣಯಕ್ಕೆ ಅವರೇ ಮುಂದಾದರು. ತಮ್ಮ ಮತ್ತು ಅಧ್ಯಕ್ಷ ಸ್ಥಾನದ ವಿರುದ್ಧವಾಗಿ
ಉಪಾಧ್ಯಕ್ಷೆ ಕೂಡ ಕೈ ಎತ್ತಿದ್ದು ವಿಶೇಷವಾಗಿತ್ತು. ಬಿಜೆಪಿ ಸದಸ್ಯರು ಸಭೆಗೆ ಗೈರಾಗಿದ್ದರು.

ಅವಿಶ್ವಾಸ ಗೊತ್ತುವಳಿ ನಿರ್ಣಯದ ಪ್ರಕ್ರಿಯೆಗಳನ್ನು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ ನಡೆಸಿಕೊಟ್ಟರು. ‘ತೆರವುಗೊಂಡ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆಗೆ ದಿನ ನಿಗದಿ ಮಾಡಲಾಗುತ್ತದೆ’ ಎಂದು ಅವರು ತಿಳಿಸಿದರು.

ADVERTISEMENT

‘ನವೆಂಬರ್‌ 2ರಂದೇ ನಾನು ರಾಜೀನಾಮೆ ನೀಡಿದ್ದೇನೆ. ಆದರೆ ಕಾರಣಾಂತರಗಳಿಂದ ರಾಜೀನಾಮೆ ಅಂಗೀಕಾರ ಆಗಿರಲಿಲ್ಲ. ಹೀಗಾಗಿ ಅವಿಶ್ವಾಸ ನಿರ್ಣಯದಲ್ಲಿ ಪಾಲ್ಗೊಂಡು ಕೈ ಎತ್ತಿದ್ದೇನೆ’ ಎಂದು ಪದಚ್ಯುತ ಉಪಾಧ್ಯಕ್ಷೆ ಸರಳಾ ಜಾಧವ ಸ್ಪಷ್ಟಪಡಿಸಿದರು.

ತಹಶೀಲ್ದಾರ್ ಎರ್ರಿಸ್ವಾಮಿ ಪಿ.ಎಸ್ ಹಾಗೂ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.