ADVERTISEMENT

ಹಾವೇರಿ: ನಿವೃತ್ತ ಶಿಕ್ಷಕಗೆ 43 ಲೀ.ರಕ್ತದ ತುಲಾಭಾರ

ಹಳೇ ವಿದ್ಯಾರ್ಥಿಗಳು– ಅಭಿಮಾನಿಗಳಿಂದ ಗುರುವಂದನೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 19:01 IST
Last Updated 22 ಡಿಸೆಂಬರ್ 2025, 19:01 IST
ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಅಕ್ಕಿಆಲೂರಿನಲ್ಲಿ ನಿವೃತ್ತ ಶಿಕ್ಷಕ ಪಿ.ಆರ್. ಮಠ ಅವರಿಗೆ ಹಳೇ ವಿದ್ಯಾರ್ಥಿಗಳು ರಕ್ತದ ತುಲಾಭಾರ ಮಾಡಿದರು
ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಅಕ್ಕಿಆಲೂರಿನಲ್ಲಿ ನಿವೃತ್ತ ಶಿಕ್ಷಕ ಪಿ.ಆರ್. ಮಠ ಅವರಿಗೆ ಹಳೇ ವಿದ್ಯಾರ್ಥಿಗಳು ರಕ್ತದ ತುಲಾಭಾರ ಮಾಡಿದರು   

ಹಾವೇರಿ: ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದ ಪಿ.ಆರ್. ಮಠ ಅವರ 80ನೇ ಜನ್ಮದಿನವನ್ನು ಹಾನಗಲ್ ತಾಲ್ಲೂಕು ಅಕ್ಕಿಆಲೂರುನಲ್ಲಿ ಅರ್ಥಪೂರ್ಣವಾಗಿ ಆಚರಿಸಿದ ಹಳೇ ವಿದ್ಯಾರ್ಥಿಗಳು, ಅಭಿಮಾನಿಗಳು, 43 ಲೀಟರ್ ರಕ್ತ ಮತ್ತು ಪುಸ್ತಕದಿಂದ ತುಲಾಭಾರ ಮಾಡಿದ್ದಾರೆ.

ಗ್ರಾಮದ ನರಸಿಂಗರಾವ್ ದೇಸಾಯಿ ಪ್ರೌಢಶಾಲೆ ಹಾಗೂ ಸಿಂಧೂರು ಸಿದ್ದಪ್ಪ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಪಿ.ಆರ್.ಮಠ ಅವರು ಇಂಗ್ಲಿಷ್‌ ವಿಷಯದ ಶಿಕ್ಷಕರಾಗಿ 35 ವರ್ಷ ಕೆಲಸ ಮಾಡಿದ್ದರು. ಅವರ ಶಿಷ್ಯರು ಸರ್ಕಾರ ಉದ್ಯೋಗ ಸೇರಿ, ವಿವಿಧ ಕೆಲಸಗಳಲ್ಲಿದ್ದಾರೆ.

ನೆಚ್ಚಿನ ಶಿಕ್ಷಕರ 80ನೇ ಜನ್ಮದಿನ ಆಚರಿಸಲು ಶಿಷ್ಯ ವೃಂದ ಮತ್ತು ಅಭಿಮಾನಿ ಬಳಗ ರಚಿಸಿ, ದುಂಡಿ ಬಸವೇಶ್ವರ ಜನಪದ ಕಲಾ ಸಂಘ, ಸ್ನೇಹ ಮೈತ್ರಿ ಬ್ಲಡ್ ಆರ್ಮಿ, ಜಿಲ್ಲಾ ರಕ್ತನಿಧಿ ಕೇಂದ್ರದ ಸಹಕಾರದೊಂದಿಗೆ ಕುಮಾರೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ (ಡಿ. 20) ರಕ್ತದಾನ ಶಿಬಿರ ಏರ್ಪಡಿಸಿದ್ದರು.

ADVERTISEMENT

ಹಳೇ ವಿದ್ಯಾರ್ಥಿಗಳು ಹಾಗೂ ಅಭಿಮಾನಿಗಳು ಸೇರಿ 108 ಮಂದಿ (35 ಮಹಿಳೆಯರು) ರಕ್ತದಾನ ಮಾಡಿದ್ದು, 43 ಲೀಟರ್ ರಕ್ತ ಸಂಗ್ರಹವಾಇತ್ತು. ರಕ್ತದ ಬಾಕ್ಸ್‌ ಇಟ್ಟು ತುಲಾಭಾರ ಮಾಡಿದರು. 

‘ಅಕ್ಕಿಆಲೂರು ರಕ್ತದಾನಕ್ಕೆ ಹೆಸರಾಗಿದ್ದು, ಗುರುಗಳಿಗೆ ಭಿನ್ನವಾಗಿ ನಮನ ಸಲ್ಲಿಸಿ ರಕ್ತವನ್ನು ರಕ್ತನಿಧಿಗೆ ನೀಡಲಾಗಿದೆ. ಪುಸ್ತಕಗಳಿಂದಲೂ ತುಲಾಭಾರ ನಡೆಸಿದ್ದು,80 ಸಸಿಗಳನನು ನೆಡಲಾಗಿದೆ’ ಎಂದು ದುಂಡಿ ಬಸವೇಶ್ವರ ಜನಪದ ಕಲಾ ಸಂಘದ ಅಧ್ಯಕ್ಷ ಬಸವರಾಜ ಕೋರಿ ತಿಳಿಸಿದರು.