
ರಾಣೆಬೆನ್ನೂರು: ಪಠ್ಯ ಬೋಧನೆ ಜತೆಗೆ ಸಹ ಪಠ್ಯೇತರ ಚಟುವಟಿಕೆಯಲ್ಲಿ ತೊಡಗುವುದು ಅಗತ್ಯ. ಇದರಿಂದ ಗುಣಾತ್ಮ ಕಲಿಕೆಗೆ ಅವಕಾಶವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ಪಾಟೀಲ ಹೇಳಿದರು.
ಇಲ್ಲಿನ ಹಳೇ ಅಂತರವಳ್ಳಿ ರಸ್ತೆಯ ಕೆ.ವಿ.ಸೆಂಟ್ರಲ್ ಸ್ಕೂಲ್ ಸಭಾಂಗಣದಲ್ಲಿ ಬುಧವಾರ ಬೆಂಗಳೂರಿನ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ, ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದ ಆಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಸಹ ಪಠ್ಯ ಚಟುವಟಿಕೆಗಳ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೆ.ವಿ.ಸೆಂಟ್ರಲ್ ಸ್ಕೂಲಿನ ಕಾರ್ಯದರ್ಶಿ ಅಭಿಲಾಷ್ ಬ್ಯಾಡಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳ ಪ್ರತಿಭೆ ಅನಾವರಣದಲ್ಲಿ ಶಿಕ್ಷಕರ ಶ್ರಮ ಬಹಳವಿದೆ. ಅದರ ಹಿನ್ನೆಲೆಯಲ್ಲಿ ಶಿಕ್ಷಕರ ಸಹ ಪಠ್ಯೇತರ ಚಟುವಟಿಕೆ ಸ್ಪರ್ಧೆಯನ್ನು ಏರ್ಪಡಿಸಿದ್ದು, ಶಿಕ್ಷಕರ ಸೂಕ್ತ ಪ್ರತಿಭೆಯನ್ನು ಇಲ್ಲಿ ಗುರುತಿಸಲಾಗುತ್ತಿದೆ ಎಂದರು.
ಕ್ಷೇತ್ರ ಸಮನ್ವಾಧಿಕಾರಿ ಮಂಜು ನಾಯಕ.ಎಲ್ ಮಾತನಾಡಿ, ಮಕ್ಕಳ ಕಲಿಕೆಯ ಜತೆಗೆ ಶಿಕ್ಷಕರಿಗೆ ಇತರೆ ವಿಷಯಗಳ ಕುರಿತು ಜ್ಞಾನ ಹೆಚ್ಚಿಸಲು ಸರ್ಕಾರ ಶಿಕ್ಷಕರ ಕಲ್ಯಾಣ ನಿಧಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಗಾಯನ, ರಸಪ್ರಶ್ನೆ, ಭಾವಗೀತೆ, ಜಾನಪದ, ಆಶುಭಾಷಣ, ಪ್ರಬಂಧ, ಪಾಠೋಪಕರಣ, ಚಿತ್ರಕಲೆ ಕುರಿತು ಸ್ಪರ್ಧೆ ನಡೆಯಲಿದೆ ಎಂದರು.
ಈ ಸ್ಪರ್ಧೆಯಲ್ಲಿ ವಿಜೇತರಾದ ಶಿಕ್ಷಕರಿಗೆ ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟಕ್ಕೆ ಆಯ್ಕೆ ಮಾಡಲಾಗುವುದು. ಸಹ ಪಠ್ಯ ಚಟುವಟಿಕೆ ಸ್ಪರ್ಧೆಗಳಲ್ಲಿ 120ಕ್ಕೂ ಹೆಚ್ಚು ಶಿಕ್ಷಕರು ಭಾಗವಹಿಸಿದ್ದರು. 42 ಜನ ಶಿಕ್ಷಕರು ಸ್ಪರ್ಧೆಗಳಲ್ಲಿ ಆಯ್ಕೆಯಾಗಿದ್ದಾರೆ.
ಕೆ.ವಿ.ಸೆಂಟ್ರಲ್ ಸ್ಕೂಲಿನ ಕಾರ್ಯದರ್ಶಿ ಅಭಿಲಾಷ್ ಬ್ಯಾಡಗಿ ಅಧ್ಯಕ್ಷತೆ ವಹಿಸಿದ್ದರು. ದೇವರಾಜ ಹುಣಸೀಕಟ್ಟಿ, ಬಿಆರ್‌ಪಿ ಎನ್.ನಾಗರಾಜ, ಗಂಗಪ್ಪ ನಾಯಕ, ರಾಜೇಶ ಮುದ್ದಿ, ಸವಿತಾ ಹಾದಿಮನಿ, ನಸ್ರೀನ್ ಮನಿಯಾರ್, ಆರ್.ಎಂ. ಗುಂಜಾಳ, ಎಂ.ಸಿ. ಬಲ್ಲೂರ, ಟಿ.ಎಂ.ಚನ್ನಪ್ಪನವರ, ಬಿ.ಎನ್.ಕೂಸನೂರ, ಇಮ್ತಿಯಾಜ್ ಚೂಡಿಗಾರ, ರಾಜೇಂದ್ರ ಸಿ.ಬಿ ಹಾಗೂ ಸಂಘದ ಪದಾಧಿಕಾರಿಗಳಾದ ಹೇಮಂತ ಎಸ್,ಕೆ, ಎಸ್.ಎಸ್. ರಾಮನಗೌಡ್ರ, ಸವಿತಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.