ADVERTISEMENT

ಹಾವೇರಿ | ಶಾಪ ಮನ್ನಿಸಿದ ಅಜ್ಜ: ದೇವಸ್ಥಾನಕ್ಕೆ ಪೂಜೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 7:53 IST
Last Updated 7 ಸೆಪ್ಟೆಂಬರ್ 2025, 7:53 IST
ಹೊಂಕಣದ ಗುಬ್ಬಿ ನಂಜುಂಡೇಶ್ವರ ಶಿವಯೋಗಿಯವರ ಅಪ್ಪಣೆ ಮೇರೆಗೆ ಹಾವೇರಿ ತಾಲ್ಲೂಕಿನ ಹೊಸಳ್ಳಿಯಲ್ಲಿ ವೀರಭದ್ರೇಶ್ವರ ದೇವರ ದೇವಸ್ಥಾನ ನಿರ್ಮಾಣಕ್ಕೆ ಪೂಜೆ ಸಲ್ಲಿಸಲು ಭಕ್ತರು ಮೆರವಣಿಗೆ ಮೂಲಕ ಸಾಗಿದರು
ಹೊಂಕಣದ ಗುಬ್ಬಿ ನಂಜುಂಡೇಶ್ವರ ಶಿವಯೋಗಿಯವರ ಅಪ್ಪಣೆ ಮೇರೆಗೆ ಹಾವೇರಿ ತಾಲ್ಲೂಕಿನ ಹೊಸಳ್ಳಿಯಲ್ಲಿ ವೀರಭದ್ರೇಶ್ವರ ದೇವರ ದೇವಸ್ಥಾನ ನಿರ್ಮಾಣಕ್ಕೆ ಪೂಜೆ ಸಲ್ಲಿಸಲು ಭಕ್ತರು ಮೆರವಣಿಗೆ ಮೂಲಕ ಸಾಗಿದರು   

ಹಾವೇರಿ: ತಾಲ್ಲೂಕಿನ ಹೊಸಳ್ಳಿ ಗ್ರಾಮದಲ್ಲಿ ಅರ್ಧಕ್ಕೆ ನಿಂತಿದ್ದ ದೇವಸ್ಥಾನ ನಿರ್ಮಾಣಕ್ಕೆ ಗುಬ್ಬಿ ನಂಜುಂಡೇಶ್ವರ ಶಿವಯೋಗಿಯವರ ಅಪ್ಪಣೆ ದೊರೆಯುತ್ತಿದ್ದಂತೆ, ಗ್ರಾಮಸ್ಥರು ಪೂಜೆ ನೆರವೇರಿಸಿದ್ದಾರೆ.

ಗ್ರಾಮದಲ್ಲಿ ವೀರಭದ್ರೇಶ್ವರ ದೇವರ ದೇವಸ್ಥಾನ ನಿರ್ಮಿಸಲು ಗ್ರಾಮಸ್ಥರು ಹಲವು ವರ್ಷಗಳಿಂದ ಪ್ರಯತ್ನಿಸುತ್ತಿದ್ದರು. ‘ಹೊಂಕಣದ ಗುಬ್ಬಿ (ಅಜ್ಜ) ನಂಜುಂಡೇಶ್ವರ ಶಿವಯೋಗಿಯವರು ಗ್ರಾಮಕ್ಕೆ ಶಾಪ ಕೊಟ್ಟಿದ್ದು, ದೇವಸ್ಥಾನ ನಿರ್ಮಾಣಕ್ಕೆ ಕಾಲ ಕೂಡಿಬರುತ್ತಿಲ್ಲ’ ಎಂದು ಹಿರಿಯರು ಹೇಳುತ್ತಿದ್ದರು.

ಶಾಪದಿಂದ ವಿಮುಕ್ತಿ ಪಡೆಯಲು ಶಿವಯೋಗಿಯವರ ಅಪ್ಪಣೆಗಾಗಿ ಗ್ರಾಮಸ್ಥರು ಮೂರು ಬಾರಿ ಹೊಂಕಣದ ಮಠಕ್ಕೆ ಹೋಗಿ ಬಂದಿದ್ದರು. ಆದರೆ, ಗದ್ದುಗೆಯಿಂದ ಅಪ್ಪಣೆ ಸಿಕ್ಕಿರಲಿಲ್ಲ. ನಾಲ್ಕನೇ ಬಾರಿ ಗದ್ದುಗೆ ಬಳಿ ಹೋಗಿ ಬೇಡಿಕೊಂಡಾಗ, ಶಾಪವನ್ನು ಮನ್ನಿಸಿ ಅಪ್ಪಣೆ ಸಿಕ್ಕಿದೆ. ಹೀಗಾಗಿ, ಗ್ರಾಮಸ್ಥರು ಗ್ರಾಮದಲ್ಲಿ ಶಿವಯೋಗಿಯವರ ಭಾವಚಿತ್ರ ಹಾಗೂ ಪೂರ್ಣ ಕುಂಭದೊಂದಿಗೆ ಮೆರವಣಿಗೆ ಮಾಡಿ ದೇವಸ್ಥಾನ ನಿರ್ಮಾಣಕ್ಕೆ ಪೂಜೆ ನೆರವೇರಿಸಿದ್ದಾರೆ.

ADVERTISEMENT

‘ಗುಬ್ಬಿ (ಅಜ್ಜ) ನಂಜುಂಡೇಶ್ವರ ಶಿವಯೋಗಿಯವರು ಭಿಕ್ಷೆಗಾಗಿ ನಮ್ಮ ಗ್ರಾಮಕ್ಕೆ ಬಂದಾಗ, ಜನರು ನಿಂದಿಸಿದ್ದರು. ಸಿಟ್ಟಾದ ಶಿವಯೋಗಿಯವರು, ಗ್ರಾಮದಲ್ಲಿ ಅಭಿವೃದ್ಧಿ ಕೆಲಸ ನಡೆಯದಂತೆ ಶಾಪ ಕೊಟ್ಟಿದ್ದರೆಂದು ಹಿರಿಯರು ಹೇಳುತ್ತಿದ್ದರು. ಈ ಹಿಂದೆ ಗ್ರಾಮದಲ್ಲಿ ಬಸವಣ್ಣ ದೇವಸ್ಥಾನವನ್ನೂ ಶಿವಯೋಗಿಯವರ ಅಪ್ಪಣೆ ಪಡೆದು ನಿರ್ಮಿಸಲಾಗಿದೆ. ಈಗ ವೀರಭದ್ರೇಶ್ವರ ದೇವರ ದೇವಸ್ಥಾನವನ್ನೂ ಶಿವಯೋಗಿಯವರ ಅಪ್ಪಣೆ ಮೇರೆಗೆ ನಿರ್ಮಿಸಲಾಗುತ್ತಿದೆ’ ಎಂದು ಗ್ರಾಮಸ್ಥರು ಹೇಳಿದರು.

‘ಶಿವಯೋಗಿಯವರು ಐಕ್ಯವಾಗಿದ್ದಾರೆ. ಅವರ ಗದ್ದುಗೆ ಬಳಿ ಹೋಗಿ ಪೂಜಾರಿಗಳ ಮೂಲಕ ಪೂಜೆ ಮಾಡಿದೆವು. ನಾಲ್ಕನೇ ಪೂಜೆಯಲ್ಲಿ ನಮಗೆ ಅಪ್ಪಣೆ ಸಿಕ್ಕಿದೆ. ಶಾಪವನ್ನು ಮನ್ನಿಸುವ ಮೂಲಕ ಗುಬ್ಬಿ ಅಜ್ಜಾರ ನಮ್ಮ ಮೇಲೆ ಕೃಪೆ ತೋರಿದ್ದಾರೆ. ಶಿವಯೋಗಿಯವರ ಭಾವಚಿತ್ರದ ಸಮ್ಮುಖದಲ್ಲಿಯೇ ಮೆರವಣಿಗೆ ನಡೆಸಿ, ಸಂಭ್ರಮದಿಂದ ದೇವಸ್ಥಾನ ನಿರ್ಮಾಣಕ್ಕೆ ಪೂಜೆ ಮಾಡಿದ್ದೇವೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.