ADVERTISEMENT

ಹಾವೇರಿ | ಟಿಇಟಿ ಪರೀಕ್ಷೆ: 9,806 ಅಭ್ಯರ್ಥಿಗಳು ಹಾಜರು

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 2:33 IST
Last Updated 8 ಡಿಸೆಂಬರ್ 2025, 2:33 IST
ಹಾವೇರಿ ಪರೀಕ್ಷಾ ಕೇಂದ್ರವೊಂದರಲ್ಲಿ ಟಿಇಟಿ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿಗಳ ಚಲನವಲನವನ್ನು ಅಧಿಕಾರಿಗಳು ಸಿ.ಸಿ.ಟಿ.ವಿ ಕ್ಯಾಮೆರಾ ಮೂಲಕ ವೀಕ್ಷಿಸಿದರು.
ಹಾವೇರಿ ಪರೀಕ್ಷಾ ಕೇಂದ್ರವೊಂದರಲ್ಲಿ ಟಿಇಟಿ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿಗಳ ಚಲನವಲನವನ್ನು ಅಧಿಕಾರಿಗಳು ಸಿ.ಸಿ.ಟಿ.ವಿ ಕ್ಯಾಮೆರಾ ಮೂಲಕ ವೀಕ್ಷಿಸಿದರು.   

ಹಾವೇರಿ: ಜಿಲ್ಲೆಯ 24 ಕೇಂದ್ರಗಳಲ್ಲಿ ಭಾನುವಾರ ನಡೆದ ಕರ್ನಾಟಕ ಶಿಕ್ಷಕರ ಅರ್ಹತಾ (ಟಿಇಟಿ) ಪರೀಕ್ಷೆಗೆ 9,806 ಅಭ್ಯರ್ಥಿಗಳು ಹಾಜರಾಗಿದ್ದು, 444 ಮಂದಿ ಗೈರು ಹಾಜರಾದರು.

ಹಾವೇರಿ ನಗರದ 15 ಕೇಂದ್ರಗಳು ಹಾಗೂ ರಾಣೆಬೆನ್ನೂರು ನಗರದ 9 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಬೆಳಿಗ್ಗೆ 9.30 ಗಂಟೆಯಿಂದ ಮಧ್ಯಾಹ್ನ 10 ಗಂಟೆಯವರೆಗೆ ಮೊದಲ ಪರೀಕ್ಷೆ ನಡೆಯಿತು. ಬಳಿಕ, ಮಧ್ಯಾಹ್ನ 2 ಗಂಟೆಯಿಂದ 4.30 ಗಂಟೆಯವರೆಗೂ ಎರಡನೇ ಪರೀಕ್ಷೆ ಜರುಗಿತು.

ಪ್ರತಿಯೊಂದು ಪರೀಕ್ಷೆ ಕೇಂದ್ರದಲ್ಲೂ ಕಡ್ಡಾಯವಾಗಿ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಲಾಗಿತ್ತು. ನಿಯಂತ್ರಣ ಕೊಠಡಿಯಲ್ಲಿ ಕುಳಿತಿದ್ದ ಅಧಿಕಾರಿಗಳು, ಕ್ಯಾಮೆರಾ ಮೂಲಕವೇ ಅಭ್ಯರ್ಥಿಗಳ ಚಲನವಲನ ವೀಕ್ಷಿಸಿದರು.

ADVERTISEMENT

ಪರೀಕ್ಷಾ ಕೇಂದ್ರದೊಳಗೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ನಿಷೇಧಿಸಲಾಗಿತ್ತು. ಮೊಬೈಲ್, ಬ್ಲೂಟೂತ್, ಪೇಜರ್, ವೈರಲೆಸ್ ಸೆಟ್‌ ಸೇರಿ ಎಲ್ಲ ಬಗೆಯ ಉಪಕರಣಗಳನ್ನು ನಿರ್ಬಂಧಿಸಲಾಗಿತ್ತು. ಲೋಹ ಶೋಧಕ ಹಾಗೂ ಇತರೆ ಸಾಧನಗಳಿಂದ ಅಭ್ಯರ್ಥಿಗಳನ್ನು ಸ್ಕ್ಯಾನ್ ಮಾಡಿ ಒಳಗೆ ಬಿಡಲಾಯಿತು.

‘ಪ್ರತಿಯೊಂದು ಪರೀಕ್ಷಾ ಕೇಂದ್ರದಲ್ಲೂ ಶಾಂತಿಯುತವಾಗಿ ಪರೀಕ್ಷೆಗಳು ನಡೆದಿವೆ. ಎಲ್ಲಿಯೋ ಅಹಿತಕರ ಘಟನೆಗಳು ನಡೆದಿಲ್ಲ. ಪರೀಕ್ಷಾ ಕೆಲಸಕ್ಕೆ ನಿಯೋಜಿಸಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಿದ್ದಾರೆ. ಪೊಲೀಸರು ಸಹ ಪ್ರತಿಯೊಂದು ಕೇಂದ್ರದಲ್ಲೂ ಭದ್ರತೆ ಬಿಗಿಗೊಳಿಸಿದ್ದರು’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ತಿಳಿಸಿದರು.

ಮಾಂಗಲ್ಯ ಕಾಲುಂಗರ ಹೊರತುಪಡಿಸಿ ಎಲ್ಲದಕ್ಕೂ ನಿರ್ಬಂಧ

ಟಿಇಟಿ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳನ್ನು ಪರೀಕ್ಷಾ ಕೇಂದ್ರದ ಹೊರಗೆಯೇ ತಪಾಸಣೆ ನಡೆಸಲಾಯಿತು. ಮಾಂಗಲ್ಯ ಸರ ಹಾಗೂ ಕಾಲುಂಗರ ಹೊರತುಪಡಿಸಿ ಎಲ್ಲ ಆಭರಣ ಹಾಗೂ ಇತರೆ ವಸ್ತುಗಳನ್ನು ಪೊಲೀಸರು ತೆಗೆಸಿದರು. ಪುರುಷರ ಬೆಲ್ಟ್‌ ವಾಚ್ ಹಾಗೂ ಇತರೆ ವಸ್ತುಗಳನ್ನು ತೆಗೆಸಿ ಕೊಠಡಿ ಒಳಗೆ ಕಳುಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.