ADVERTISEMENT

‘ಪ್ರತ್ಯೇಕ ಮೀಸಲಾತಿ'ಗೆ ಗೋಂಧಳಿ ಸಮಾಜ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2021, 14:47 IST
Last Updated 12 ಫೆಬ್ರುವರಿ 2021, 14:47 IST
ವಿಠ್ಠಲ ಗಣಾಚಾರಿ 
ವಿಠ್ಠಲ ಗಣಾಚಾರಿ    

ಹಾವೇರಿ: ಅಲೆಮಾರಿ/ಅರೆ ಅಲೆಮಾರಿ ಸಮುದಾಯಗಳಾದ ಗೋಂಧಳಿ, ಬುಡಬುಡಕಿ, ಜೋಶಿ, ವಾಸುದೇವ ಮತ್ತು ಭಟ್ಟಂಗಿ ಜಾತಿಗಳು ಪ್ರವರ್ಗ–1ರಲ್ಲಿವೆ. ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕವಾಗಿ ಹಿಂದುಳಿದಿರುವ ಈ ಜಾತಿಗಳಿಗೆ ‘ಪ್ರತ್ಯೇಕ ಮೀಸಲಾತಿ’ ಕಲ್ಪಿಸಬೇಕು ಎಂದು ಅಖಿಲ ಕರ್ನಾಟಕ ಗೋಂಧಳಿ ಸಮಾಜ ಸಂಘದ ರಾಜ್ಯ ಘಟಕದ ಅಧ್ಯಕ್ಷ ವಿಠ್ಠಲ ಬಿ.ಗಣಾಚಾರಿ ಒತ್ತಾಯಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಸ್ವಾತಂತ್ರ್ಯಬಂದು 75 ವರ್ಷಗಳಾದರೂ ಗೋಂಧಳಿ ಸಮಾಜದವರಿಗೆ ಒಂದು ಕಡೆ ವಾಸಿಸಲು ನೆಲೆಯಿಲ್ಲದಂತಾಗಿದೆ. ರಾಜ್ಯದಲ್ಲಿ 6 ಲಕ್ಷ ಜನಸಂಖ್ಯೆಯಿರುವ ನಮ್ಮ ಸಮುದಾಯವನ್ನು ಸರ್ಕಾರಗಳು ಕಡೆಗಣಿಸುತ್ತಾ ಬರುತ್ತಿವೆ. ಉದ್ಯೋಗ, ಶೈಕ್ಷಣಿಕ ಸೀಟಿಗಾಗಿ ಮುಂದುವರಿದ ಜಾತಿಗಳೊಂದಿಗೆ ಪೈಪೋಟಿ ಮಾಡುವ ಶಕ್ತಿ ನಮಗಿಲ್ಲ. ಹೀಗಾಗಿ ಪ್ರತ್ಯೇಕ ಮೀಸಲಾತಿ ಕೊಡಿ, ಇಲ್ಲವೇ ಎಸ್‌.ಟಿ. ಮೀಸಲಾತಿ ಕಲ್ಪಿಸಿ ಎಂದು ಮನವಿ ಮಾಡಿದರು.

ಭಿಕ್ಷಾಟನೆ ನಮ್ಮ ಜನಾಂಗದ ಮೂಲ ಕಸುಬು. ಇತ್ತೀಚಿನ ವರ್ಷಗಳಲ್ಲಿ ಭಿಕ್ಷಾಟನೆ ತೊರೆದು ಹಲವರು ಸಣ್ಣಪುಟ್ಟ ವ್ಯಾಪಾರ ಮಾಡುತ್ತಿದ್ದಾರೆ. ಮೈಸೂರಿನಲ್ಲಿರುವ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯವರು ಕುಲಶಾಸ್ತ್ರೀಯ ಅಧ್ಯಯನ ಮಾಡಲು ₹22 ಲಕ್ಷ ಅನುದಾನ ಕೇಳಿದ್ದಾರೆ. ಸರ್ಕಾರ ಇದುವರೆಗೂ ಮಂಜೂರಾತಿ ನೀಡಿಲ್ಲ ಎಂದು ಆರೋಪಿಸಿದರು.

ADVERTISEMENT

ಎಲ್ಲ ಸಮುದಾಯದ ಜನರಿಂದ ಆಯ್ಕೆಯಾದ ಮಂತ್ರಿಗಳು ತಮ್ಮ ಜಾತಿಗೆ ಮೀಸಲಾತಿ ಕೊಡಬೇಕು ಎಂದು ಲಾಬಿ ಮಾಡುತ್ತಿದ್ದಾರೆ. ನಮ್ಮ ಪರವಾಗಿ ಹೋರಾಟ ನಡೆಸಲು ನಮ್ಮ ಸಮುದಾಯದ ಸಚಿವರುಗಳೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿ.ವಿ.ಬೋಸಲೆ, ಭಾರತಿ ಸೂರ್ಯವಂಶಿ, ನಾಗರಾಜ ಗೋಗ್ರೆ, ಬಾಬು ಗರಡಕರ್‌, ಮಹಾಂತೇಶ ಗೊಲಗೇರಿ, ಎಂ.ಬಿ.ಶಾಸ್ತ್ರಿ, ಶಂಕರ ಕೋಟೆ, ಅಣ್ಣಪ್ಪ ನವಲೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.