ADVERTISEMENT

ರಸ್ತೆಯಲ್ಲೇ ಹರಿಯುವ ಕೊಳಚೆ ನೀರು

ಕಸ ವಿಲೇವಾರಿ, ರಸ್ತೆ ದುರಸ್ತಿ, ಚರಂಡಿ ಸೌಲಭ್ಯ ಕಲ್ಪಿಸಲು ನಿವಾಸಿಗಳ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 15:43 IST
Last Updated 10 ಆಗಸ್ಟ್ 2021, 15:43 IST
ರಟ್ಟೀಹಳ್ಳಿ ಪಟ್ಟಣದ ಕೊಪ್ಪದ ಕಾಂಪ್ಲೆಕ್ಸ್‌ ಬಡಾವಣೆಯಲ್ಲಿ ಚರಂಡಿ ವ್ಯವಸ್ಥೆಯಿಲ್ಲದೆ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿರುವುದು
ರಟ್ಟೀಹಳ್ಳಿ ಪಟ್ಟಣದ ಕೊಪ್ಪದ ಕಾಂಪ್ಲೆಕ್ಸ್‌ ಬಡಾವಣೆಯಲ್ಲಿ ಚರಂಡಿ ವ್ಯವಸ್ಥೆಯಿಲ್ಲದೆ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿರುವುದು   

ರಟ್ಟೀಹಳ್ಳಿ:ಪಟ್ಟಣದ ಭಗತ್ ಸಿಂಗ್ ಸರ್ಕಲ್‌ಗೆ ಹೊಂದಿಕೊಂಡ ಕೊಪ್ಪದ ಕಾಂಪ್ಲೆಕ್ಸ್‌ ಬಡಾವಣೆಯಲ್ಲಿ ಸಮರ್ಪಕ ಚರಂಡಿಗಳಿಲ್ಲದ ಕಾರಣ ಕೊಳಚೆ ನೀರು ರಸ್ತೆಯ ಮೇಲೆಯೇ ಹರಿಯುತ್ತದೆ. ಇದರಿಂದ ನಿವಾಸಿಗಳಿಗೆ ಉಸಿರುಗಟ್ಟುವ ವಾತಾವರಣ ಉಂಟಾಗಿದೆ.

ಈ ಬಡಾವಣೆಯಲ್ಲಿ 70ಕ್ಕೂ ಹೆಚ್ಚು ಮನೆಗಳಿದ್ದು, 250ಕ್ಕೂ ಹೆಚ್ಚು ಜನ ವಾಸವಾಗಿದ್ದಾರೆ. ಆದರೆ ಇಲ್ಲಿನ ಮನೆಗಳ ಬಚ್ಚಲು ನೀರು ಹೋಗಲು ಚರಂಡಿ ವ್ಯವಸ್ಥೆಯಿಲ್ಲ.

ಕೊಳಚೆ ನೀರು ತುಳಿದುಕೊಂಡು ಜನ ಇಲ್ಲಿ ಓಡಾಡಬೇಕು, ಸಂಜೆಯಾಗುತ್ತಲೇ ಸೊಳ್ಳೆಗಳ ಕಾಟ, ಕೆಟ್ಟ ವಾಸನೆ ಬೇರೆ. ಇಲ್ಲಿನ ನಿವಾಸಿಗಳು ಹಗಲು ರಾತ್ರಿ ಎನ್ನದೇ ಮನೆಯ ಬಾಗಿಲನ್ನು ಮುಚ್ಚಿಕೊಂಡೇ ಇರಬೇಕು. ಅಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ADVERTISEMENT

ತಾಲ್ಲೂಕು ಕೇಂದ್ರವಾಗಿದ್ದು, ಪಟ್ಟಣ ಪಂಚಾಯ್ತಿಗೆ ಸಾಕಷ್ಟು ಅನುದಾನ ಬರುತ್ತದೆ. ಗ್ರಾಮ ಪಂಚಾಯ್ತಿಗೆ ಹೋಲಿಸಿದಲ್ಲಿ ಪಟ್ಟಣ ಪಂಚಾಯ್ತಿಗೆ ಜನರಿಂದ ತೆರಿಗೆಗಳ ರೂಪದಲ್ಲಿ ಸಾಕಷ್ಟು ಹಣ ಸಂಗ್ರಹವಾಗುತ್ತದೆ. ಹೀಗಿದ್ದೂ ಪಂಚಾಯ್ತಿಯವರ ದಿವ್ಯ ನಿರ್ಲಕ್ಷವೇ ಈ ಅವ್ಯವಸ್ಥೆಗೆ ಕಾರಣವಾಗಿದೆ ಎಂದು ನಿವಾಸಿಗಳು ಹಿಡಿಶಾಪ ಹಾಕುತ್ತಾರೆ.

‘ಚುನಾವಣೆ ಸಮೀಪದಲ್ಲಿದ್ದಾಗ ಜನಪ್ರತಿನಿಧಿಗಳಿಗೆ ನಮ್ಮ ನೆನಪಾಗುತ್ತದೆ. ನಾವು ಮತಕ್ಕಾಗಿ ಮಾತ್ರ ಸೀಮಿತರಾಗಿದ್ದೇವೆ. ನಮ್ಮ ಈ ಕಾಲೊನಿಗೆ ಯಾವುದೇ ಮೂಲಸೌಲಭ್ಯಗಳಿಲ್ಲ. ಸಾಕಷ್ಟು ಸಾರಿ ಪಟ್ಟಣ ಪಂಚಾಯ್ತಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದು ನಿವಾಸಿಗಳು ದೂರಿದರು.

‘ಪಟ್ಟಣ ಪಂಚಾಯ್ತಿಯವರು ನಿಯಮಿತವಾಗಿ ನಮ್ಮಿಂದ ಮನೆಯ ಕರ, ನೀರಿನ ಕರ, ಬೀದಿ ದೀಪದ ಕರ ವಸೂಲಿ ಮಾಡುತ್ತಾರೆ. ವಿಳಂಬವಾದರೆ ದಂಡ ಹಾಕುತ್ತಾರೆ. ಹೀಗಿದ್ದೂ ಜನರಿಗೆ ಮೂಲಸೌಲಭ್ಯ ಒದಗಿಸುವಲ್ಲಿ ರಟ್ಟೀಹಳ್ಳಿ ಪಟ್ಟಣ ಪಂಚಾಯ್ತಿ ಸಂಪೂರ್ಣ ವಿಫಲವಾಗಿದೆ’ ಎನ್ನುತ್ತಾರೆ ನಿವೃತ್ತ ಸಾರಿಗೆ ನಿಯಂತ್ರಕ ಕೆ.ಎನ್. ಎಣ್ಣಿ.

‘ರಸ್ತೆ ಬದಿ ಕಸದ ರಾಶಿ ಬಿದ್ದಿರುತ್ತದೆ. ಅದನ್ನು ಸಮರ್ಪಕವಾಗಿ ವಿಲೇವಾರಿ ಕೂಡ ಮಾಡುವುದಿಲ್ಲ. ಓಣಿಯಲ್ಲಿ ಚಿಕ್ಕಮಕ್ಕಳು, ವೃದ್ಧರು ಇದ್ದಾರೆ. ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇದೆ. ಪಕ್ಕದಲ್ಲಿಯೇ ನೊಬೆಲ್ ಪಬ್ಲಿಕ್ ಶಾಲೆಯಿದ್ದು, ಶಾಲಾ ಮಕ್ಕಳ ಆರೋಗ್ಯದ ಗತಿಯೇನು? ಬೀದಿ ದೀಪಗಳ ಸರಿಯಾದ ನಿರ್ವಹಣೆಯಿಲ್ಲ’ ಎಂದು ಇಲ್ಲಿನ ನಿವಾಸಿ ಸಚ್ಚಿನ ಜಾಧವ ಸಮಸ್ಯೆ ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.