ADVERTISEMENT

ಗೋವಿನ ಮೇಲೆ ದೌರ್ಜನ್ಯ ಎಸಗಿದವರಿಗೆ ಗಡಿಪಾರು ಶಿಕ್ಷೆ ವಿಧಿಸಿ: ಹರೀಶ ಹಾನಗಲ್ಲ

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 2:50 IST
Last Updated 6 ಜುಲೈ 2025, 2:50 IST
ಹರೀಶ ಹಾನಗಲ್ಲ
ಹರೀಶ ಹಾನಗಲ್ಲ   

ಹಾನಗಲ್: ಪಂ.ಪಂಚಾಕ್ಷರಿ ಗವಾಯಿಗಳವರ ಹುಟ್ಟೂರು ಕಾಡಶೆಟ್ಟಿಹಳ್ಳಿಯಲ್ಲಿ ದೇವರಿಗಾಗಿ ಸಮರ್ಪಿಸಿದ ಗೋವಿನ ಮೇಲೆ ಶ್ರೀಮಠದ ಆವರಣದಲ್ಲಿ ಅಸಹಜ ಲೈಂಗಿಕ ಕ್ರಿಯೆ ನಡೆಸಿ, ಕೋಮು ಸೌಹಾರ್ದಕ್ಕೆ ಧಕ್ಕೆ ತಂದಿರುವ ಮುಸ್ಲಿಂ ಸಮುದಾಯದ ವ್ಯಕ್ತಿಯ ಮೇಲೆ ತಕ್ಷಣವೇ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಬೇಕು. ಆತನ ಕುಟುಂಬವನ್ನು ಗಡಿಪಾರು ಪಾಡಿ ಆದೇಶಿಸಬೇಕು ಎಂದು ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಂಯೋಜಕ ಹರೀಶ ಹಾನಗಲ್ಲ ಒತ್ತಾಯಿಸಿದರು.

ಈ ಕುರಿತು ಶನಿವಾರ ಸುದ್ದಿಗೋಷ್ಟಿ ನಡೆಸಿದ ಅವರು, ಕಾಡಶೆಟ್ಟಿಹಳ್ಳಿ ಗ್ರಾಮದಲ್ಲಿ ಮತಾಂಧ ವ್ಯಕ್ತಿಯೊಬ್ಬ ಗೋವಿನ ಮೇಲೆ ಅನುಚಿತವಾಗಿ ದೌರ್ಜನ್ಯ ಮೆರೆದಿರುವ ಘಟನೆ ಹಿಂದುಗಳ ಮಾನವೀಯ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನಲ್ಲಿರುವ ಅಕ್ರಮ ಕಸಾಯಿಖಾನೆಗಳ ಮೇಲೆ ಈ ಹಿಂದೆ ದಾಳಿ ನಡೆದು ಪ್ರಕರಣ ದಾಖಲಾಗಿದ್ದರೂ, ಗೋವುಗಳ ವಧೆ ನಿಂತಿಲ್ಲ. ಅಕ್ರಮ ಕಸಾಯಿಖಾನೆ ದಂಧೆಯಲ್ಲಿ ತೊಡಗಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿದ್ದರೆ, ಇಂದು ಗೋವಿನ ಮೇಲೆ ಈ ರೀತಿಯ ಲೈಂಗಿಕ ಕ್ರೌರ್ಯಗಳು ನಡೆಯುತ್ತಿರಲಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.

ADVERTISEMENT

ತಾಲ್ಲೂಕಿನಲ್ಲಿ ಗೋವು ಮೇಲಿನ ಕ್ರೌರ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕಿದ್ದ ಆಡಳಿತ ವ್ಯವಸ್ಥೆ ಕಣ್ಮುಚ್ಚಿ ಕುಳಿತಿದೆ ಎಂಬುದು ಸ್ಪಷ್ಟವಾಗಿದೆ. ಈ ಅಕ್ರಮಗಳನ್ನು ತಡೆಯದಿದ್ದರೆ, ಸಂಘಟನೆಯಿಂದ ತೀವೃ ಸ್ವರೂಪದ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.

ಹಿಂದುಗಳ ಭಾವನೆಗಳಿಗೆ ಬೆಲೆಯಿಲ್ಲದ ರೀತಿಯಲ್ಲಿ ಈಗಿನ ಸರ್ಕಾರ ವರ್ತಿಸುತ್ತಿದ್ದು, ಅದಕ್ಕೆ ಸಾಕ್ಷಿ ಎಂಬಂತೆ ಸಾರ್ವಜನಿಕರು ತಾಲ್ಲೂಕಿನಲ್ಲಿ ಅಕ್ರಮ ಕಸಾಯಿಖಾನೆಗಳ ವಿರುದ್ಧ ಬೃಹತ್ ಮಟ್ಟದ ಹೋರಾಟ ಕೈಗೊಂಡು, ಜಿಲ್ಲಾಡಳಿತದ ಕಣ್ಣು ತೆರೆಸುವ ಕೆಲಸವನ್ನು ಮಾಡಿದ್ದರೂ, ಆಡಳಿತ ವ್ಯವಸ್ಥೆಯ ನಿರ್ಲಕ್ಷತೆ ಮುಂದುವರೆದಿದೆ. ಇದೇ ರೀತಿ ಗೋವುಗಳ ಬಗ್ಗೆ ನಿಷ್ಕಾಳಜಿ, ನಿರ್ಲಕ್ಷ ತಾಳುವುದು ಕಂಡುಬಂದರೆ, ಗೋವನ್ನು ಮಾತೃ ಸ್ವರೂಪದಲ್ಲಿ ಪೂಜಿಸುವ ಸಮಾಜವು ಸುಮ್ಮನೆ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ಗೋವಿನ ಮೇಲೆ ಕ್ರೌರ್ಯ ಮೆರೆದಿರುವಂಥ ಆ ವ್ಯಕ್ತಿಯ ವಿರುದ್ಧ ಜಿಲ್ಲಾಡಳಿತ ಗಡಿಪಾರು ಮಾಡಿ ಆದೇಶವನ್ನು ಹೊರಡಿಸದಿದ್ದರೆ, ಹೋರಾಟದ ಹಾದಿ ಹಿಡಿಯುತ್ತೇವೆ ಎಂದು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಸಂಘಟನೆಯ ಜಿಲ್ಲಾ ಸಹ ಸಂಯೋಜಕರಾದ ಚಂದ್ರು ತೆರೆದಹಳ್ಳಿ, ರವಿಚಂದ್ರ ಪುರೋಹಿತ, ಮನೋಜ ಕಲಾಲ, ತಾಲ್ಲೂಕು ಸಂಯೋಜಕ ಲಿಖಿತ ಹದಲಗಿ, ಗಿರೀಶ ಕರಿದ್ಯಾವಣ್ಣನವರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.