ADVERTISEMENT

ಹಾವೇರಿ: ಜಿಲ್ಲೆಗೆ ತ್ರಿವಳಿ ಸಚಿವರ ಭಾಗ್ಯ!

ವಿಧಾನ ಪರಿಷತ್‌ ಸದಸ್ಯ ಆರ್‌.ಶಂಕರ್ ಈಗ ಸಂಪುಟ ದರ್ಜೆ ಸಚಿವ

ಸಿದ್ದು ಆರ್.ಜಿ.ಹಳ್ಳಿ
Published 13 ಜನವರಿ 2021, 19:30 IST
Last Updated 13 ಜನವರಿ 2021, 19:30 IST
ಕುಟುಂಬ ಸದಸ್ಯರೊಂದಿಗೆ ಸಚಿವ ಆರ್‌.ಶಂಕರ್ ಅವರ‌ ಸಂತಸದ ಕ್ಷಣ 
ಕುಟುಂಬ ಸದಸ್ಯರೊಂದಿಗೆ ಸಚಿವ ಆರ್‌.ಶಂಕರ್ ಅವರ‌ ಸಂತಸದ ಕ್ಷಣ    

ಹಾವೇರಿ: ಬಹು ನಿರೀಕ್ಷೆಯ ‘ಸಚಿವ ಸಂಪುಟ ವಿಸ್ತರಣೆ’ಯನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಬುಧವಾರ ನೆರವೇರಿಸುವ ಮೂಲಕ ಏಲಕ್ಕಿ ನಾಡಿಗೆ ‘ತ್ರಿವಳಿ ಸಚಿವರ ಭಾಗ್ಯ’ವನ್ನು ನೀಡಿದ್ದಾರೆ.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಕೃಷಿ ಸಚಿವ ಬಿ.ಸಿ. ಪಾಟೀಲ ಈ ಇಬ್ಬರು ಜಿಲ್ಲೆಯನ್ನು ಪ್ರತಿನಿಧಿಸುವ ಸಚಿವರಾಗಿದ್ದರು. ಪ್ರಸ್ತುತ ವಿಧಾನ ಪರಿಷತ್‌ ಸದಸ್ಯರಾಗಿರುವ ಆರ್‌.ಶಂಕರ್ ಅವರು ಸಚಿವ ಸಂಪುಟ ದರ್ಜೆ ಸಚಿವರಾಗುವ ಮೂಲಕ ಜಿಲ್ಲೆಗೆ 3ನೇ ಮಂತ್ರಿ ಪಟ್ಟ ಒಲಿದಿದೆ. ಶಂಕರ್‌ ಅವರಿಗೂ ಮೂರನೇ ಬಾರಿ ಮಂತ್ರಿಯಾಗುವ ಯೋಗ ದೊರೆತಿದೆ.

ಆರ್‌.ಶಂಕರ್‌ ಅವರು ಫೆ.1, 1965ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಇವರಿಗೆ ಪತ್ನಿ ಧನಲಕ್ಷ್ಮಿ ಮತ್ತು ಮಕ್ಕಳಾದ ಜ್ಯೋತಿರ್‌ ತೇಜೋಮಯಿ, ಹರ್ಷಿಣಿ ಅವರನ್ನು ಒಳಗೊಂಡ ಸುಂದರ ಕುಟುಂಬವಿದೆ. ಎಸ್ಸೆಸ್ಸೆಲ್ಸಿ ಓದಿರುವ ಶಂಕರ್‌ ಅವರು ರಿಯಲ್‌ ಎಸ್ಟೇಟ್ ಉದ್ಯಮಿಯಾಗಿದ್ದರು. ಬಿಬಿಎಂಪಿಯಲ್ಲಿ ಉಪಮೇಯರ್‌ ಆಗಿ ರಾಜಕೀಯದಲ್ಲಿ ಹೆಸರು ಗಳಿಸಿದರು.2008ರ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನ ಸರ್ವಜ್ಞ ನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಆರ್.ಶಂಕರ್‌ ಅವರು ಕಾಂಗ್ರೆಸ್‌ ಅಭ್ಯರ್ಥಿ ಕೆ.ಜೆ.ಜಾರ್ಜ್‌ ವಿರುದ್ಧ ಸೋತಿದ್ದರು.

ADVERTISEMENT

ರಾಣೆಬೆನ್ನೂರಿನತ್ತ ವಲಸೆ:ಕುರುಬ ಸಮುದಾಯದವರು ದೊಡ್ಡ ಸಂಖ್ಯೆಯಲ್ಲಿ ಇರುವ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿಗೆ ರಾಜಕೀಯ ಭವಿಷ್ಯ ಅರಸುತ್ತಾ ಆರ್.ಶಂಕರ್‌ ವಲಸೆ ಬಂದರು. 2014ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಕಾಂಗ್ರೆಸ್‌ ಅಭ್ಯರ್ಥಿ ಕೆ.ಬಿ. ಕೋಳಿವಾಡ ವಿರುದ್ಧ ‌ಸೋತರು.

ಸೋತರೂ ಕ್ಷೇತ್ರ ಬಿಟ್ಟು ಹೋಗದೆ, ರಾಣೆಬೆನ್ನೂರಿನ ಬೀರೇಶ್ವರ ನಗರದಲ್ಲಿ ಭವ್ಯ ಬಂಗಲೆ ಕಟ್ಟಿಸಿ ನೆಲೆ ನಿಂತರು. ಕ್ಷೇತ್ರದಲ್ಲಿ ನಡೆಯುತ್ತಿದ್ದ ಕ್ರೀಡಾ ಚಟುವಟಿಕೆ ಮತ್ತು ಹಬ್ಬ ಹರಿದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಜನರ ಮನಗೆಲ್ಲಲು ಪ್ರಯತ್ನಿಸಿದರು.

ಎರಡನೇ ಬಾರಿ ಸ್ಪರ್ಧೆ:2018ರ ವಿಧಾನಸಭಾ ಚುನಾವಣೆಯಲ್ಲಿ ಕೆಪಿಜೆಪಿ (ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ) ಅಭ್ಯರ್ಥಿಯಾಗಿ ಆರ್‌.ಶಂಕರ್‌ ಅವರು ಮತ್ತೆ ಕೆ.ಬಿ. ಕೋಳಿವಾಡ ವಿರುದ್ಧ ಅದೃಷ್ಟ ಪರೀಕ್ಷೆಗಿಳಿದರು. ಹೊಸ ಮುಖಕ್ಕೆ ಹವಣಿಸುತ್ತಿದ್ದ ಜನರು ಆರ್.ಶಂಕರ್‌ಗೆ ಆಶೀರ್ವಾದ ಮಾಡಿದರು. ಇದರ ಫಲವಾಗಿ ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ಪ್ರಥಮ ಬಾರಿಗೆ ಅರಣ್ಯ ಸಚಿವರಾದರು. ನಂತರ ಪೌರಾಡಳಿತ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದರು.

ಅನರ್ಹ ಶಾಸಕ ಹಣೆಪಟ್ಟಿ:ಸಮ್ಮಿಶ್ರ ಸರ್ಕಾರದಲ್ಲಿದ್ದ 17 ಸಚಿವರು ಅಸಮಾಧಾನಗೊಂಡು ರಾಜೀನಾಮೆ ನೀಡಿ ಹೊರಬಂದವರಲ್ಲಿ ಆರ್‌.ಶಂಕರ್‌ ಕೂಡ ಪ್ರಮುಖರು. ಇದರ ಪರಿಣಾಮ ಸಮ್ಮಿಶ್ರ ಸರ್ಕಾರ ಬಿದ್ದು ಹೋಯಿತು. ಇದರಿಂದ ಆರ್‌.ಶಂಕರ್‌ಗೆ ‘ಅನರ್ಹ ಶಾಸಕ’ ಎಂಬ ಹಣೆಪಟ್ಟಿ ಕೂಡ ಅಂಟಿಕೊಂಡಿತು. ನಂತರ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಕಾರಣಾಂತರದಿಂದ ರಾಣೆಬೆನ್ನೂರು ಕ್ಷೇತ್ರದಿಂದ ಹೊಸ ಮುಖ ಅರುಣ್‌ಕುಮಾರ್‌ ಪೂಜಾರ್‌ ಅವರಿಗೆ ಬಿಜೆಪಿ ಟಿಕೆಟ್‌ ನೀಡಿತು.

ಬಿ.ಎಸ್‌. ಯಡಿಯೂರಪ್ಪ ಅವರು ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡಿ, ನಂತರ ಮಂತ್ರಿ ಮಾಡುವುದಾಗಿ ಆರ್‌.ಶಂಕರ್‌ ಅವರಿಗೆ ಭರವಸೆ ನೀಡಿದ್ದರು. ಹೀಗಾಗಿ ಅರುಣ್‌ಕುಮಾರ್‌ ಪರವಾಗಿ ಚುನಾವಣೆಯಲ್ಲಿ ಭರ್ಜರಿ ಪ್ರಚಾರ ನಡೆಸಿ, ಬಿಜೆಪಿ ಗೆಲುವಿಗೆ ಕಾರಣರಾಗಿದ್ದರು. ಈಗ ಕೊಟ್ಟ ಮಾತಿನಂತೆ ಬಿ.ಎಸ್‌.ಯಡಿಯೂರಪ್ಪ ಅವರು ‘ಮಂತ್ರಿ ಸ್ಥಾನ’ ನೀಡಿದ್ದಾರೆ. ಇದರಿಂದ ಜಿಲ್ಲೆಗೆ ಮತ್ತಷ್ಟು ಅನುದಾನ, ಅಭಿವೃದ್ಧಿ ಕೆಲಸಗಳು ಆಗಲಿವೆ ಎಂಬುದು ಜನರ ನಿರೀಕ್ಷೆಯಾಗಿದೆ.

‘ನುಡಿದಂತೆ ನಡೆದ ಮುಖ್ಯಮಂತ್ರಿ’

‘ಬಿಜೆಪಿಗೆ ಸ್ಥಿರ ಸರ್ಕಾರವನ್ನು ನೀಡುವ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರ್ಕಾರದಲ್ಲಿದ್ದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರ್ಪಡೆಗೊಂಡು ವಿಧಾನ ಪರಿಷತ್‌ ಸದಸ್ಯನಾಗಿ ಆಯ್ಕೆಯಾಗಿದ್ದೆ. ಈಗ ಸಂಪುಟ ದರ್ಜೆ ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸಿರುವುದು ಸಂತಸ ತಂದಿದೆ’ ಎಂದು ಸಚಿವ ಆರ್.ಶಂಕರ್‌ ಹೇಳಿದರು.

‘ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರವಿದೆ.ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಯಾವುದೇ ಖಾತೆಯನ್ನು ನೀಡಿದರೂ ನಿಭಾಯಿಸಿಕೊಂಡು ಜನರ ಸೇವೆ ಮಾಡುತ್ತೇನೆ. ಹೆಚ್ಚಿನ ಅನುದಾನ ತಂದು ರಾಣೆಬೆನ್ನೂರು ತಾಲ್ಲೂಕನ್ನು ಬೆಂಗಳೂರು ಮಾದರಿಯಲ್ಲಿ ಅಭಿವೃದ್ಧಿಗೊಳಿಸುತ್ತೇನೆ’ ಎಂದರು.

‘ಖಾಲಿ ಇರುವ ಸ್ಥಾನ ನನ್ನದೇ’

‘ಈಗಲೂ ನಾನು ಆಕಾಂಕ್ಷಿಯೇ. ಸಂಪುಟದಲ್ಲಿ ಇನ್ನೂ ಒಂದು ಸ್ಥಾನ ಖಾಲಿಯಿದೆ. ಆ ಸ್ಥಾನ ಬಿಟ್ಟಿರುವುದು ನನಗಾಗಿಯೇ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ನನಗೆ ಮಾತು ಕೊಟ್ಟಿದ್ದಾರೆ. ಅವರ ಅವಧಿಯಲ್ಲಿ ಈಡೇರುತ್ತದೆ ಎಂಬ ಭರವಸೆಯೂ ಇದೆ. ಹಾವೇರಿ ಜಿಲ್ಲೆಗೆ ಮತ್ತೊಂದು ಮಂತ್ರಿ ಸ್ಥಾನ ನೀಡಿದರೆ ಯಾವ ಸಮಸ್ಯೆಯೂ ಬರುವುದಿಲ್ಲ’ ಎನ್ನುತ್ತಾರೆ ಶಾಸಕ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಆಯೋಗದ ಅಧ್ಯಕ್ಷ ನೆಹರು ಓಲೇಕಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.