
ಶಿಗ್ಗಾವಿ: ತಾಲ್ಲೂಕಿನ್ಯಾದಂತ ಗುರುವಾರ ಗುಡುಗು, ಸಿಡಿಲು ಸಹಿತ ಅಬ್ಬರದಿಂದ ಮಳೆ ಸುರಿಯಿತು. ಅಲ್ಲಲ್ಲಿ ಅವಘಡದ ವರದಿಯಾಗಿದೆ.
ತಾಲ್ಲೂಕಿನ ಹಳೇಬಂಕಾಪುರ ರಸ್ತೆಯಲ್ಲಿ ಮಳೆ ಗಾಳಿಯಿಂದ ಮರವೊಂದು ವಿದ್ಯುತ್ ಕಂಬದ ಮೇಲೆ ಬಿದ್ದು ರಸ್ತೆ ಸಂಚಾರ ಒಂದು ತಾಸು ಸ್ಥಗಿತಗೊಂಡಿತು. ಹುಲಿಕಟ್ಟಿ, ಹುನಗುಂದ, ಹೋತನಹಳ್ಳಿಗೆ ಹೋಗುವ ವಾಹನಗಳಿಗೆ ಕಿರಿಕಿರಿ ಉಂಟಾಯಿತು.
ಪಟ್ಟಣದ ಮಾರುತಿ ನಗರದಲ್ಲಿ ಜಗಜೀವನ್ ರಾಮ್ ಸಮುದಾಯ ಭವನ ಅಕ್ಕಪಕ್ಕ ನೀರು ನುಗ್ಗಿ ಪಕ್ಕದ ಮನೆಗಳಲ್ಲಿ ವಾಸ ಮಾಡುವವರಿಗೆ ತೊಂದರೆ ಉಂಟಾಯಿತು.
‘ಮಾರುತಿ ನಗರದಲ್ಲಿನ ಅಲೆಮಾರಿ ಜನರು ವಾಸ ಮಾಡುವ ತಗಡಿನ ಶೆಡ್‌ನಲ್ಲಿ ನೀರು ನುಗ್ಗಿ ಮನೆಯಲ್ಲಿನ ಸಾಮಗ್ರಿಗಳು ನೀರು ಪಾಲಾಗಿವೆ. ಆಹಾರ ಧಾನ್ಯಗಳು ಹಾಳಾಗಿವೆ. ಹಾಸಿಗೆ, ಬಟ್ಟೆಗಳು ನೀರಲ್ಲಿ ಮುಳುಗಿವೆ. ಮನೆಯಲ್ಲಿನ ಮಕ್ಕಳು, ಮಹಿಳೆಯರು ಹೇಗೆ ವಾಸಿಸುವುದು’ ಎಂದು ಅಲ್ಲಿನ ನಿವಾಸಿ ಸುರೇಶ ಆತಂಕ ವ್ಯಕ್ತಪಡಿಸಿದರು.
ತಾಲ್ಲೂಕಿನ ಬಂಕಾಪುರ ಪಟ್ಟಣದಲ್ಲಿ ಜಾನುವಾರುಗಳಿಗೆಂದು ಸಂಗ್ರಹಿದ ಹೊಟ್ಟಿನ ಬಣವೆ ಹಾಳಾಗಿದೆ. ಹೊಸ ಬಸ್ ನಿಲ್ದಾಣದ ಸರ್ವೀಸ್ ರಸ್ತೆಯಲ್ಲಿ ಮಳೆ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆ ಆಯಿತು. ಬಂಕಾಪುರ ಕೋಟೆ ಮುಂದಿನ ಚರಂಡಿಯಲ್ಲಿನ ನೀರು ರಸ್ತೆಯಲ್ಲಿ ಹರಿದು, ತ್ಯಾಜ್ಯ ವಸ್ತುಗಳು ರಸ್ತೆ ಮೇಲೆ ತೇಲಿ ಬಂದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.