ತಿಳವಳ್ಳಿ: ತಿಳವಳ್ಳಿಯ ದೊಡ್ಡಕೆರೆ ಕೋಡಿ ಬಿದ್ದು ಹದಿನೈದು ದಿನಗಳೆ ಕಳೆದಿದೆ. ಕೋಡಿಯಿಂದ ಹರಿದು ಹೋಗುವ ನೀರಿನ ಕಾಲುವೆ ಒಡೆದು ಹೋಗುವ ಭೀತಿಯಲ್ಲಿ ರೈತರಿದ್ದಾರೆ. ಕಾಲುವೆ ಒಡೆದರೆ ನೂರಾರು ಎಕರೆ ಜಮೀನು ಜಲಾವೃತವಾಗುತ್ತದೆ. ಇದರಿಂದ ನಾಟಿ ಮಾಡಿದ ಭತ್ತದ ಬೆಳೆ ಹಾಗೂ ಗೋವಿನ ಜೋಳ ಹಾಳಾಗುತ್ತದೆ ಎಂದು ರೈತರು ‘ಪ್ರಜಾವಾಣಿ’ಯೊಂದಿಗೆ ತಮ್ಮ ಅಳಲು ತೋಡಿಕೊಂಡರು.
ರೈತ ಸಂಘದ ಅಧ್ಯಕ್ಷ ಸಹದೇವಪ್ಪ ವಿಠೋಜಿ, ‘ಕಳೆದ ಮಳೆಗಾಲದಲ್ಲಿ ಇದೇ ಕೋಡಿ ಕಾಲುವೆ ಒಡೆದು ನೂರಾರು ಎಕರೆ ಭತ್ತ, ಗೋವಿನ ಜೋಳ ಹಾಗೂ ಅಡಿಕೆ ತೋಟಗಳು ಜಲಾವೃತವಾಗಿದ್ದವು. ಇದರಿಂದ ರೈತರು ತೀವ್ರ ಆರ್ಥಿಕ ನಷ್ಟ ಅನುಭವಿಸಿದರು. ಆದರೂ ಸಂಬಂಧಪಟ್ಟ ಇಲಾಖೆಯವರು ಕಾಲುವೆ ದುರಸ್ತಿ ಮಾಡಿಲ್ಲ. ಕಾಲುವೆ ಅಕ್ಕ– ಪಕ್ಕಕ್ಕೆ ಜಮೀನು ಹೊಂದಿದ ರೈತರೆಲ್ಲಾ ತಮ್ಮ ಸ್ವಂತ ಖರ್ಚಿನಲ್ಲಿ ಮಣ್ಣನ್ನು ಹೇರಿ ಕಾಲುವೆ ದುರಸ್ತಿ ಮಾಡಿಸಿದ್ದರು. ಈ ಬಾರಿ ಮಳೆಗೆ ಮತ್ತೆ ಕಾಲುವೆ ಒಡೆಯುವ ಭೀತಿ ಕಾಡುತ್ತಿದೆ’ ಎಂದರು.
ರೈತ ಸಂಘದ ತಾಲ್ಲೂಕು ಘಟಕದ ಉಪಾಧ್ಯಕ್ಷ ಶಿವನಗೌಡ ಕಬ್ಬಕ್ಕಿ, ರೈತ ದಯಾನಂದ ಹಾವೇರಿ, ‘ಕಾಲುವೆಯನ್ನು ಅನೇಕ ರೈತರು ಒತ್ತುವರಿ ಮಾಡಿಕೊಂಡಿದ್ದಾರೆ ಹಾಗೂ ಕಾಲುವೆಯಲ್ಲಿ ಹೂಳು ತುಂಬಿಕೊಂಡಿದ್ದು, ನೀರು ಮುಂದಕ್ಕೆ ಹೋಗದೆ ಕಾಲುವೆ ಒಡೆಯುತ್ತಿದೆ. ಇದರಿಂದ ಕಾಲುವೆ ಮೇಲಿನ ರಸ್ತೆಯೂ ಹದಗೆಟ್ಟಿದೆ. ಸಂಬಂಧ ಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ದುರಸ್ತಿ ಕಾರ್ಯ ಕೈಗೊಳ್ಳಬೇಕು’ ಎಂದರು.
ರೈತ ಸಂಘದ ಕಾರ್ಯದರ್ಶಿ ರಾಘವೇಂದ್ರ ಬೈರೋಜಿ, ಪ್ರಶಾಂತ ಮುಳಗುಂದ, ಮಂಜುನಾಥ ಬಾರ್ಕಿ, ಸುಬ್ರಮಣ್ಯ ಮೂಡಿ, ಬರಮಪ್ಪ ಕುರುಬರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.