ADVERTISEMENT

ಹಾವೇರಿ: ‘ದುಶ್ಚಟಗಳ ಭಿಕ್ಷೆ’ ಬೇಡಿದ ಸ್ವಾಮೀಜಿ

ಮದ್ಯ–ಗುಟ್ಕಾ ಚಟ; ಸ್ವಾಮೀಜಿಗಳ ಸದ್ಭಾವನಾ ನಡಿಗೆ; ಸದ್ಗುಣಗಳ ದೀಕ್ಷೆ ನೀಡಿ ಆಶೀರ್ವಚನ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 2:55 IST
Last Updated 6 ನವೆಂಬರ್ 2025, 2:55 IST
ಹಾವೇರಿ ಜಿಲ್ಲೆಯ ಕಾಸಂಬಿಯಲ್ಲಿ ಸಂಚರಿಸಿದ ರೇವಣಸಿದ್ದೇಶ್ವರ ಪೀಠದ ಶಾಂತ ಮುತ್ತಯ್ಯ ಸ್ವಾಮೀಜಿ ಅವರ ಜೋಳಿಗೆಗೆ ಕೆಲ ಜನರು ಗುಟ್ಕಾ ಪೊಟ್ಟಣಗಳನ್ನು ಹಾಕಿ ದುಶ್ಚಟ ತ್ಯಜಿಸುವುದಾಗಿ ಘೋಷಿಸಿದರು. ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಜೊತೆಗಿದ್ದರು
ಹಾವೇರಿ ಜಿಲ್ಲೆಯ ಕಾಸಂಬಿಯಲ್ಲಿ ಸಂಚರಿಸಿದ ರೇವಣಸಿದ್ದೇಶ್ವರ ಪೀಠದ ಶಾಂತ ಮುತ್ತಯ್ಯ ಸ್ವಾಮೀಜಿ ಅವರ ಜೋಳಿಗೆಗೆ ಕೆಲ ಜನರು ಗುಟ್ಕಾ ಪೊಟ್ಟಣಗಳನ್ನು ಹಾಕಿ ದುಶ್ಚಟ ತ್ಯಜಿಸುವುದಾಗಿ ಘೋಷಿಸಿದರು. ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಜೊತೆಗಿದ್ದರು   

ಹಾವೇರಿ: ಇತ್ತೀಚಿನ ದಿನಗಳಲ್ಲಿ ಯುವಜನತೆ ಸೇರಿದಂತೆ ಹಲವರು ಮದ್ಯ ಹಾಗೂ ಗುಟ್ಕಾ (ತಂಬಾಕು ಉತ್ಪನ್ನಗಳು) ಚಟದಿಂದಾಗಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಕುಟುಂಬದ ವಾತಾವರಣವೂ ಹದಗೆಡುತ್ತಿರುವ ಬಗ್ಗೆ ಮಹಿಳೆಯರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಗ್ರಾಮೀಣ ಭಾಗದಲ್ಲಿಯೇ ಹೆಚ್ಚಿನ ಜನರು ದುಶ್ಚಟಗಳ ದಾಸರಾಗುತ್ತಿದ್ದು, ಅವರನ್ನು ರಕ್ಷಿಸಲು ಸ್ವಾಮೀಜಿಗಳು ಜೋಳಿಗೆ ಹಿಡಿದು ಸದ್ಭಾವನಾ ನಡಿಗೆ ಮಾಡುತ್ತಿದ್ದಾರೆ.

ಜಿಲ್ಲೆಯ ಹಲವು ಗ್ರಾಮಗಳ ಜನರನ್ನು ದುಶ್ಚಟಗಳಿಂದ ಮುಕ್ತಗೊಳಿಸಲು ಸ್ವಾಮೀಜಿಗಳು ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದಾರೆ. ಗ್ರಾಮಗಳ ಮನೆಗಳಿಗೆ ತೆರಳಿ, ದುಶ್ಚಟಗಳನ್ನು ಜೋಳಿಗೆಗೆ ಹಾಕುವಂತೆ ಕೋರುತ್ತಿದ್ದಾರೆ.

ADVERTISEMENT

ಕನಕ ಜಯಂತ್ಯುತ್ಸವ ಮತ್ತು ಕನಕ ರಥೋತ್ಸವದ ಅಂಗವಾಗಿ ಸರೂರು ರೇವಣಸಿದ್ದೇಶ್ವರ ಪೀಠದ ಶಾಂತ ಮುತ್ತಯ್ಯ ಸ್ವಾಮೀಜಿ ಅವರು ಕಾಸಂಬಿ, ಚಿನ್ನಿಕಟ್ಟಿ ಗ್ರಾಮಗಳಲ್ಲಿ ಇತ್ತೀಚೆಗೆ ಜೋಳಿಗೆ ಹಿಡಿದು ಸಂಚರಿಸಿದರು. ಮದ್ಯ, ಗುಟ್ಕಾ ಚಟಕ್ಕೆ ಅಂಟಿಕೊಂಡಿರುವ ಜನರನ್ನು ಮಾತನಾಡಿಸಿ, ದುಶ್ಚಟಗಳನ್ನು ತೊರೆಯುವಂತೆ ಕೋರಿದರು. ನಂತರ, ಗುಟ್ಕಾ ಹಾಗೂ ಇತರೆ ತಂಬಾಕು ಉತ್ಪನ್ನಗಳನ್ನು ತಮ್ಮ ಜೋಳಿಗೆಯಲ್ಲಿ ಹಾಕಿಸಿಕೊಂಡು ಪ್ರತಿಜ್ಞೆ ಬೋಧಿಸಿದರು. ಅದನ್ನು ಪಾಲಿಸುವಂತೆಯೂ ಕೋರಿದರು. ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಸಹ ಜೊತೆಗಿದ್ದರು.

ಸ್ವಾಮೀಜಿ ಅವರನ್ನು ಆತ್ಮಿಯವಾಗಿ ಬರಮಾಡಿಕೊಂಡ ಜನರು, ದುಶ್ಚಟಗಳನ್ನು ತ್ಯಜಿಸುವುದಾಗಿ ಘೋಷಿಕೊಂಡರು. ನಂತರ, ತಮ್ಮ ಬಳಿ ಇದ್ದ ಗುಟ್ಕಾ ಪೊಟ್ಟಣಗಳನ್ನು ಜೋಳಿಗೆಗೆ ಹಾಕಿ ಸ್ವಾಮೀಜಿಗಳಿಗೆ ನಮಿಸಿದರು.

ಕೋಡಬಾಳ ಗ್ರಾಮದಲ್ಲಿ ನೆಗಳೂರು ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರು ಜೋಳಿಗೆ ಹಿಡಿದು ಸಾಗಿದರು. ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಸ್ವಾಮೀಜಿ, ದುಶ್ಚಟಗಳ ಭಿಕ್ಷೆ ಬೇಡಿದರು. ದುಶ್ಚಟಗಳನ್ನು ತ್ಯಜಿಸುವುದಾಗಿ ಘೋಷಿಸಿದವರಿಗೆ ಸದ್ಗುಣಗಳ ದೀಕ್ಷೆ ನೀಡಿದರು. ಸದ್ಭಾವನಾ ನಡಿಗೆ ಹೆಸರಿನಲ್ಲಿ ನಡೆಸಿದ ಪಾದಯಾತ್ರೆಯಲ್ಲಿ ಸಾಕಷ್ಟು ಜನರು, ದುಶ್ಚಟ ತ್ಯಜಿಸುವುದಾಗಿ ಘೋಷಿಸಿಕೊಂಡರು.

ಮನುಷ್ಯರಾಗಿ ಹುಟ್ಟಿರುವುದು ಪುಣ್ಯ. ಈ ಜೀವನವನ್ನು ಒಳ್ಳೆಯ ಕೆಲಸಕ್ಕೆ ಮೀಸಲಿಡಬೇಕು. ಗುರುವಿನ ಮಾರ್ಗದರ್ಶನದಲ್ಲಿ ಸಾಗಬೇಕು
ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ನೆಗಳೂರು ಸಂಸ್ಥಾನ ಹಿರೇಮಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.