ಬಂಧನ
(ಪ್ರಾತಿನಿಧಿಕ ಚಿತ್ರ)
ಹಾವೇರಿ: ಜಿಲ್ಲೆಯ ಹಾನಗಲ್ ತಾಲ್ಲೂಕಿನ ಮಲಗುಂದ ಗ್ರಾಮದಲ್ಲಿ ನಿಧಿಗಾಗಿ ನೆಲ ಅಗೆದಿದ್ದ ಆರೋಪದಡಿ ಇಬ್ಬರನ್ನು ಬಂಧಿಸಿದ್ದ ಆಡೂರು ಪೊಲೀಸರು, ಠಾಣೆ ಜಾಮೀನು ಮೇಲೆ ಬಿಡುಗಡೆ ಮಾಡಿದ್ದಾರೆ.
‘ಮಲಗುಂದ ಗ್ರಾಮದ ಮೌಲಾಲಿ ಮಹಬೂಬಅಲಿ ಮುಜಾವರ ಹಾಗೂ ರೇಣುಕಾಸ್ವಾಮಿ ರುದ್ರಸ್ವಾಮಿ ಹಿರೇಮಠ ಬಂಧಿತರು’ ಎಂದು ಪೊಲೀಸರು ಹೇಳಿದರು.
ಗ್ರಾಮದಲ್ಲಿರುವ ಕೋಣಕಲ್ಲು ಭರಮಪ್ಪ ದೇವರ ಶಿಲಾಮೂರ್ತಿ ಇರುವ ಸ್ಥಳದಲ್ಲಿ ಮಾರ್ಚ್ 29ರಂದು ನಿಧಿಗಾಗಿ ನೆಲ ಅಗೆಯಲಾಗಿತ್ತು. ನಿಧಿ ಕಳ್ಳತನಕ್ಕಾಗಿ ನೆಲ ಅಗೆದಿದ್ದ ಬಗ್ಗೆ ಗ್ರಾಮಸ್ಥರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಆರೋಪಿಗಳು ಪತ್ತೆಯಾಗಿರಲಿಲ್ಲ. ಇತ್ತೀಚೆಗೆ ಆರೋಪಿಗಳನ್ನು ಪತ್ತೆ ಮಾಡಿದ್ದ ಗ್ರಾಮಸ್ಥರು, ಗ್ರಾಮದಲ್ಲಿಯೇ ಜನರ ಎದುರು ನಿಲ್ಲಿಸಿ ವಿಚಾರಿಸಿದರು. ಇದರ ವಿಡಿಯೊವನ್ನು ಚಿತ್ರೀಕರಿಸಿಕೊಂಡಿದ್ದರು. ಇದಾದ ನಂತರ ಆರೋಪಿಗಳನ್ನು ಆಡೂರು ಠಾಣೆಗೆ ಒಪ್ಪಿಸಿದ್ದಾರೆ.
‘ನಿಧಿ ಕಳ್ಳತನಕ್ಕೆ ಯತ್ನ ಆರೋಪದಡಿ ಮೌಲಾಲಿ ಮುಜಾವರ ಹಾಗೂ ರೇಣುಕಾಸ್ವಾಮಿ ಹಿರೇಮಠ ಅವರನ್ನು ಬಂಧಿಸಲಾಗಿತ್ತು. ಇದೊಂದು ಜಾಮೀನು ಸಹಿತ ಪ್ರಕರಣ. ಹೀಗಾಗಿ, ಬಂಧನ ಪ್ರಕ್ರಿಯೆ ಪೂರ್ಣಗೊಳಿಸಿ ಠಾಣೆ ಜಾಮೀನು ಮೇಲೆ ಇಬ್ಬರನ್ನೂ ಬಿಡುಗಡೆ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಅಕ್ಕಿಆಲೂರಿನ ಆನಂದ ಊರಣಕರ, ಪ್ರವೀಣ ಸಾಲಿಮಠ, ಮಹಾಂತೇಶ ಷಣ್ಮುಖಪ್ಪ ಬೆಲ್ಲದ, ನಿರಂಜನ ಶಿವಪ್ಪ ಪೂಜಾರ ಹಾಗೂ ಇತರರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಇವರೆಲ್ಲರ ಬಂಧನಕ್ಕಾಗಿ ತನಿಖೆ ಮುಂದುವರಿಸಲಾಗಿದೆ’ ಎಂದರು.
ಸಾಲ ವಾಪಸು ಕೇಳಿದ್ದಕ್ಕೆ ನಿಧಿ ಸಂಚು: ‘ಪ್ರಕರಣದ ಪ್ರಮುಖ ಆರೋಪಿ ಮೌಲಾಲಿ, ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಇನ್ನೊಬ್ಬ ಆರೋಪಿಯ ಮಧ್ಯಸ್ಥಿಕೆಯಲ್ಲಿ ₹50 ಸಾವಿರ ಸಾಲ ಪಡೆದಿದ್ದ. ಸರಿಯಾದ ಸಮಯಕ್ಕೆ ಸಾಲ ತೀರಿಸಲು ಆಗಿರಲಿಲ್ಲ. ಸಾಲ ವಾಪಸು ನೀಡುವಂತೆ ಆರೋಪಿ ತಾಕೀತು ಮಾಡಿದ್ದ. ಇದೇ ಕಾರಣಕ್ಕೆ ಮೌಲಾಲಿ, ನಿಧಿ ಕಳ್ಳತನದ ಸಂಚು ರೂಪಿಸಿದ್ದ’ ಎಂದು ಗ್ರಾಮಸ್ಥರೊಬ್ಬರು ಹೇಳಿದರು.
‘ಸಾಲ ಕೊಡಿಸಿದ್ದ ಆರೋಪಿ ಸೇರಿದಂತೆ 10ಕ್ಕೂ ಹೆಚ್ಚು ಮಂದಿಯ ತಂಡ ಕಟ್ಟಿಕೊಂಡಿದ್ದ ಮೌಲಾಲಿ, ನಿಧಿ ಕಳ್ಳತನಕ್ಕೆ ಎಲ್ಲ ರೀತಿಯ ತಯಾರಿ ಮಾಡಿಕೊಂಡಿದ್ದ. ಮಲಗುಂದ ಗ್ರಾಮದ ಕೂಸನೂರು ರಸ್ತೆಯಲ್ಲಿರುವ ವಾಮನರಾವ್ ಕೃಷ್ಣರಾವ್ ದೇಸಾಯಿ ಅವರ ಜಮೀನಿನಲ್ಲಿರುವ ಕೋಣಕಲ್ಲು ಭರಮಪ್ಪ ದೇವರ ಶಿಲಾಮೂರ್ತಿ ಇರುವ ಜಾಗವನ್ನು ಗುರುತಿಸಿದ್ದ’ ಎಂದು ತಿಳಿಸಿದರು.
ಹೊನ್ನಾವರದ ಅರ್ಚಕರಿಂದ ಪೂಜೆ: ‘ಶಿಲಾಮೂರ್ತಿ ಕೆಳಗಡೆ ನಿಧಿ ಇರುವುದಾಗಿ ಮೌಲಾಲಿ ಎಲ್ಲರಿಗೂ ತಿಳಿಸಿದ್ದ. ಆದರೆ, ಅದಕ್ಕಾಗಿ ಪೂಜೆ ಮಾಡಿಸಬೇಕೆಂದು ಕೆಲವರು ಹೇಳಿದ್ದರು. ಮಾರ್ಚ್ 29ರಂದು ನಿಧಿ ಅಗೆಯಲು ತೀರ್ಮಾನಿಸಿದ್ದರು. ಮಾರ್ಚ್ 28ರಂದು ಹೊನ್ನಾವರದಿಂದ ಅರ್ಚಕರೊಬ್ಬರನ್ನು ಕರೆಸಿದ್ದರು. ಶಿಲಾಮೂರ್ತಿ ಸ್ಥಳವನ್ನು ಸ್ವಚ್ಛಗೊಳಿಸಿದ್ದ ಆರೋಪಿಗಳು, ಅಲ್ಲಿಯೇ ಪೂಜೆ ಮಾಡಿದ್ದರು. ನಸುಕಿನವರೆಗೂ ನೆಲ ಅಗೆದಿದ್ದ ಆರೋಪಿಗಳಿಗೆ ಯಾವುದೇ ನಿಧಿ ಸಿಕ್ಕಿರಲಿಲ್ಲ. ಬೆಳಕು ಬರುತ್ತಿದ್ದಂತೆ ಸ್ಥಳದಿಂದ ಪರಾರಿಯಾಗಿದ್ದರು’ ಎಂದು ಗ್ರಾಮಸ್ಥರೊಬ್ಬರು ಹೇಳಿದರು.
‘ನಿಧಿ ಕಳ್ಳತನಕ್ಕಾಗಿ ಶಿಲಾಮೂರ್ತಿಗೆ ಧಕ್ಕೆ ಮಾಡಿದ್ದರಿಂದ, ಗ್ರಾಮದಲ್ಲಿ ಮೇಲಿಂದ ಮೇಲೆ ಅವಘಡ ಸಂಭವಿಸುತ್ತಿದ್ದವು. ಹೀಗಾಗಿ, ಗ್ರಾಮಸ್ಥರೇ ಕಳ್ಳರಿಗಾಗಿ ಹುಡುಕಾಟ ಆರಂಭಿಸಿದ್ದರು. ಇತ್ತೀಚೆಗೆ ಕಳ್ಳರೂ ಸಿಕ್ಕಿಬಿದ್ದರು. ಆರೋಪಿಯೊಬ್ಬ, ಗ್ರಾಮಸ್ಥರ ಎದುರು ತಪ್ಪೊಪ್ಪಿಕೊಂಡಿದ್ದಾನೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.