ADVERTISEMENT

ಮಂಜೂರು ಹಂತದಲ್ಲಿ ಎರಡು ಪಶು ಆಸ್ಪತ್ರೆ

ಸಾಮಾನ್ಯ ಸಭೆಯಲ್ಲಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾಹಿತಿ

​ಪ್ರಜಾವಾಣಿ ವಾರ್ತೆ
Published 22 ಜೂನ್ 2021, 18:42 IST
Last Updated 22 ಜೂನ್ 2021, 18:42 IST
ಬ್ಯಾಡಗಿ ತಾಲ್ಲೂಕು ಪಂಚಾಯ್ತಿ ಕಾರ್ಯಾಲಯದಲ್ಲಿ ಮಂಗಳವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿದರು
ಬ್ಯಾಡಗಿ ತಾಲ್ಲೂಕು ಪಂಚಾಯ್ತಿ ಕಾರ್ಯಾಲಯದಲ್ಲಿ ಮಂಗಳವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿದರು   

ಬ್ಯಾಡಗಿ: ತಾಲ್ಲೂಕಿನ ಆರು ಗ್ರಾಮಗಳಲ್ಲಿ ಪಶು ಆಸ್ಪತ್ರೆ ಸ್ಥಾಪಿಸುವಂತೆ ಬೇಡಿಕೆ ಬಂದಿದ್ದು, ಈ ಪೈಕಿ ಎರಡು ಪಶು ಆಸ್ಪತ್ರೆಗಳು ಮಂಜೂರಾಗುವ ಹಂತದಲ್ಲಿವೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ತಿಳಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯ್ತಿ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

‘ಸೂಡಂಬಿ ಗ್ರಾಮದಲ್ಲಿ ಮಾವಿನ ಸಸಿಗಳು ಕೂಡ ಬೆಳಸಿಲ್ಲದ ಹೊಲಕ್ಕೆ ₹80 ಸಾವಿರ ಬೆಳೆ ವಿಮೆ ನೀಡಲಾಗಿದೆ. ಇದರಲ್ಲಿ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಶಾಮೀಲಾಗಿದ್ದಾರೆ‘ ಎಂದು ತಾ.ಪಂ. ಸದಸ್ಯ ಪ್ರಭುಗೌಡ ಪಾಟೀಲ ಆರೋಪಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಅಶೋಕ ಕುರುಬರ ‘ಬೆಳೆವಿಮೆ ಕಂತು ತುಂಬಿಸಿಕೊಳ್ಳುವ ಮೊದಲು ರೈತರೇ ಬೆಳೆಯ ಬಗ್ಗೆ ಸ್ವಯಂ ಘೋಷಣೆ ಮಾಡಿಕೊಂಡಿರುತ್ತಾರೆ. ಕಂದಾಯ ಇಲಾಖೆ ಮತ್ತು ಖಾಸಗಿ ವಿಮೆ ಕಂಪನಿಯ ಪ್ರತಿನಿಧಿಗಳು ಜಿಪಿಎಸ್ ಹಾಗೂ ಸಮೀಕ್ಷೆ ನಡೆಸಿದ ಬಳಿಕವೇ ಪರಿಹಾರದ ಮೊತ್ತ ಮಂಜೂರಾಗುತ್ತದೆ. ಇದಕ್ಕೆ ತಾಂತ್ರಿಕ ದೋಷವೂ ಕಾರಣವಿರಬಹುದು‘ ಎಂದು ಸಮಜಾಯಿಸಿ ನೀಡಿದರು.

ಆಗ ಶಾಸಕರು ಮಧ್ಯ ಪ್ರವೇಶಿಸಿ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವ ಭರವಸೆ ನೀಡಿದರು.

’ಕೋವಿಡ್‌ ಎರಡನೇ ಅಲೆ ನಿಯಂತ್ರಣದಲ್ಲಿದ್ದು, 3ನೇ ಅಲೆ ಬರುವುದರೊಳಗೆ ಪ್ರತಿಯೊಬ್ಬರಿಗೆ ಲಸಿಕೆ ಹಾಕುವ ವ್ಯವಸ್ಥೆಯಾಗಬೇಕು. ಸರ್ಕಾರಿ ಹಾಗೂ ಖಾಸಗಿ ಜಾಗೆಗಳಲ್ಲಿ ಮನೆ ನಿರ್ಮಿಸಿಕೊಂಡವರಿಗೆ ಇ-ಸ್ವತ್ತು ಸೌಲಭ್ಯ ಕಲ್ಪಿಸಲು ಕೂಡಲೆ ಹದ್ದಬಸ್ತ್ ಗುರುತಿಸಬೇಕು‘ ಎಂದು ತಹಶೀಲ್ದಾರರಿಗೆ ಸೂಚಿಸಿದರು.

ಅಧ್ಯಕ್ಷೆ ಸವಿತಾ ಸುತ್ತಕೋಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶಾಂತವ್ವ ದೇಸಾಯಿ, ಸದಸ್ಯರಾದ ಶಾಂತಪ್ಪ ದೊಡ್ಡಮನಿ, ಜಗದೀಶ ಪೂಜಾರ, ಪೂರ್ಣಿಮಾ ಆನ್ವೇರಿ, ಗುಡ್ಡಪ್ಪ ಕೊಳೂರು, ಮಹೇಶ ಪಾಟೀಲ, ತಾಲ್ಲೂಕು ಪಂಚಾಯ್ತಿ ಇಒ ಕೆ.ತಿಮ್ಮಾರೆಡ್ಡಿ, ವ್ಯವಸ್ಥಾಪಕ ಪ್ರಕಾಶ ಹಿರೇಮಠ, ತಾಲ್ಲೂಕು ಆರೋಗ್ಯಾಧಿಕಾರಿ ಸುಹೀಲ್‌ ಹರವಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.