ಸವಣೂರು: ‘ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ’ ಎನ್ನುವ ನಾಮಫಲಕ ಹಾಕಿದ್ದರೂ ರಾತ್ರಿಯಾಗುತ್ತಿದ್ದಂತೆಯೇ ಕಾಲೇಜಿನ ಆವರಣ ಅನೈತಿಕ ಚಟುವಟಿಕೆಗಳ ತಾಣವಾಗಿ ಪಟ್ಟಣದ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನ ಆವರಣದಲ್ಲಿ ಕಂಡು ಬರುತ್ತಿದೆ.
ಈ ಸಮಸ್ಯೆ ಸರಿ ಪಡಿಸುವಂತೆ ಒತ್ತಾಯಿಸಿ ವಿದ್ಯಾರ್ಥಿ ಪರಿಷತ್ ಹಲವಾರು ಬಾರಿ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಸಹ ಯಾವುದೇ ಪ್ರಯೋಜನವಾಗಿಲ್ಲ. ಪಟ್ಟಣದ ಗದಗ ರಸ್ತೆಯಲ್ಲಿರುವ ಸರ್ಕಾರಿ ಮಜಿದ್ ಪದವಿಪೂರ್ವ ಕಾಲೇಜಿನ ಅವ್ಯವಸ್ಥೆ ಹಾಗೂ ಸ್ಥಳ ಕುಡುಕರ ಅಡ್ಡವಾದಂತೆ ಕಾಣುತ್ತಿದೆ. ಇಲ್ಲಿ ಹೇಳುವವರು ಕೇಳುವವರು ಯಾರು ಇಲ್ಲದಂತಾಗಿದ್ದು ಮದ್ಯ ಸೇವಿಸಿದ ಬಾಟಲಿಗಳು ಕಾಲೇಜಿನ ಆವರಣದಲ್ಲಿ ಎಲ್ಲೆಂದರಲ್ಲಿ ಎಸೆದಿದ್ದಾರೆ.
ಪ್ರತಿ ಶನಿವಾರ, ಭಾನುವಾರ ಬಂದರೆ ಸಾಕು ಇಲ್ಲಿ ಮದ್ಯ ಸೇವಿಸಲು ಯುವಕರು ಬರುತ್ತಾರೆ. ಅಲ್ಲದೆ ಗೋಡೆ ಮೇಲೆ ಅಸಭ್ಯ ಚಿತ್ರ ಬಿಡಿಸಿ ಗಾಜುಗಳನ್ನು ಒಡೆದು ಬೀಸಾಕುತ್ತಾರೆ. ಇದರಿಂದ ಸಣ್ಣಪುಟ್ಟ ಮಕ್ಕಳಿಗೆ ಗಾಯಗಳು ಆಗಿವೆ. ಕಾಲೇಜಿನ ಕಿಟಕಿ ಬಾಗಿಲು ಸಹ ಒಡೆದು ಹಾಕಿದ್ದಾರೆ. ಕಾಲೇಜಿನ ಮೆಟ್ಟಿಲು, ಕಟಾಂಜನ ಕಳುವಾಗಿರುವ ದುಷ್ಕೃತ್ಯ ನಡೆದಿವೆ. ಈ ಬಗ್ಗೆ ವಿದ್ಯಾರ್ಥಿನಿಯರು ಶಿಕ್ಷಕರು ಸಾಕಷ್ಟು ಗಣ್ಯರಿಗೆ ಮನವಿ ಮಾಡಿದರು ಸಹ ಈ ಕೃತ್ಯಗಳು ಹಾಗೆ ಮುಂದುವರೆಯುತ್ತಾ ಬಂದಿವೆ.
ಕಾಲೇಜಿನ ಪಕ್ಕದಲ್ಲಿಯೇ ಇರುವ ಉಪ ವಿಭಾಗಾಧಿಕಾರಿ, ತಹಶೀಲ್ದಾರ್, ಜೆಎಂಎಫ್‌ಸಿ ನ್ಯಾಯಾಧೀಶರ ಮನೆಗಳು ಇವೆ. ಅಲ್ಲಿರುವ ಬೀಟ್ ಪೊಲೀಸರು ಕಾಲೇಜಿನ ಬಳಿ ಹೋಗಬೇಕು. ಕಾಲೇಜಿನ ಭದ್ರತೆ ನೋಡಿಕೊಳ್ಳಬೇಕು. ಆದರೆ, ಪೋಲಿಸ್ ಇಲಾಖೆ ಸಿಬ್ಬಂದಿ ಸಹಿತ ಇತ್ತ ನೋಡದೆ ಇರುವುದರಿಂದ ಶಾಲಾ ಕಾಲೇಜು ಆವರಣ ಮಾತ್ರ ಪುಡಾರಿಗಳ ತಾಣವಾಗಿರುವುದರಿಂದ ವಿದ್ಯಾರ್ಥಿಗಳ ಕಲಿಕೆಗೆ ದುಃಸ್ಥಿತಿ ಎದುರಾಗಿದೆ.
ಇದೇ ಆವರಣದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಸಹಿತ ನಡೆಯುತ್ತಿದೆ. ಅದರೆ, ಆಡಳಿತ ಮಂಡಳಿ ಇದ್ದರೂ ಕೂಡಾ ಶಾಲೆಯ ಅಭಿವೃದ್ಧಿ ಹಾಗೂ ಶೈಕ್ಷಣಿಕ ಪ್ರಗತಿಗೆ ಕಿವಿಗೊಡದೆ ಇರುವುದರಿಂದ ಶಾಲಾ ಕಾಲೇಜಿನ ರಕ್ಷಣೆ ಜೊತೆಗೆ ಮೂಲ ಸೌಲಭ್ಯ ಕೊರತೆ ಎದ್ದು ತೋರುತ್ತಿದೆ. ಇನ್ನಾದರೂ ಪೋಲಿಸ್ ಇಲಾಖೆ ರಕ್ಷಣೆ ನೀಡಿ, ಶಿಕ್ಷಣ ಇಲಾಖೆ ಅಧಿಕಾರಿಗಳು, ಆಡಳಿತ ಮಂಡಳಿ ಮೂಲಭೂತ ಸೌಲಭ್ಯಗಳನ್ನು ನೀಡಲು ಮುಂದಾಗಬೇಕು ಎನ್ನುವದು ವಿದ್ಯಾರ್ಥಿಗಳ ಆಗ್ರಹವಾಗಿದೆ.
ಸಮಸ್ಯೆ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಪೋಲಿಸ್ ಠಾಣೆಗೆ ದೂರು ಸಲ್ಲಿಸಲಾಗಿದ್ದು ರಾತ್ರಿ ಸಮಯದಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡುವಂತೆ ಮನವಿ ಮಾಡಲಾಗಿದೆ.-ವಿ.ಬಿ.ದ್ಯಾಮನಗೌಡ್ರ ಪ್ರಾಚಾರ್ಯೆ ಸರ್ಕಾರಿ ಪಿಯು ಮಹಿಳಾ ಕಾಲೇಜು
ಸದೃಢ ಆರೋಗ್ಯ ಕಾಯ್ದುಕೊಳ್ಳಲು ಕಾಲೇಜು ಆವರಣಕ್ಕೆ ವಾಯುವಿಹಾರಕ್ಕೆ ಬಂದರೆ ಮನಸ್ಸಿಗೆ ನೋವು ಆಗುತ್ತದೆ. ಎಲ್ಲಿ ಬೇಕಾದಲ್ಲಿ ಗಲೀಜು ಮಾಡಿರುತ್ತಾರೆ-ವಿದ್ಯಾಧರ ಕುತನಿ ನಿವಾಸಿ ಹಾವಣಗಿ ಬಡಾವಣೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.