ಬ್ಯಾಡಗಿ ಪಟ್ಟಣದ ತಾಲ್ಲೂಕು ಮಾರ್ಕೆಟಿಂಗ್ ಸೊಸೈಟಿ ಆವರಣದಲ್ಲಿ ರೈತರು ಸರದಿಯಲ್ಲಿ ನಿಂತು ಯೂರಿಯಾ ಗೊಬ್ಬರ ಪಡೆದರು
ಬ್ಯಾಡಗಿ: ಜಿಲ್ಲೆಯಲ್ಲಿ ಈ ವರ್ಷ ಅತಿ ಹೆಚ್ಚು ಮಳೆ ಸುರಿದ ಪರಿಣಾಮ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಿದೆ. ರೈತರು ಎಕರೆಗೆ ಎರಡರ ಬದಲಾಗಿ ನಾಲ್ಕು ಚೀಲ ಯೂರಿಯಾ ಹಾಕಲು ಮುಂದಾಗಿರುವುದೇ ಬೇಡಿಕೆ ಇನ್ನಷ್ಟು ಹೆಚ್ಚಲು ಕಾರಣವಾಗಿದೆ.
ಗುರುವಾರ ಮತ್ತು ಶುಕ್ರವಾರ ಬಿಸಲಹಳ್ಳಿ, ಬನ್ನಿಹಟ್ಟಿ ಹಾಗೂ ಪಟ್ಟಣದ ಟಿಎಪಿಸಿಎಂಎಸ್ ಸೊಸೈಟಿಗಳ ಮೂಲಕ ಗೊಬ್ಬರ ವಿತರಣೆಯಾಗಿದೆ. ಜಿಲ್ಲಾಡಳಿತ ಸಹ ಪ್ರತಿಯೊಬ್ಬ ರೈತರಿಗೆ ಎರಡು ಚೀಲಗಳಂತೆ ವಿತರಿಸಿದೆ. ಆದರೂ ಬೇಡಿಕೆಗೆ ತಕ್ಕಂತೆ ಗೊಬ್ಬರ ವಿತರಣೆಯಾಗಿಲ್ಲ ಎನ್ನುವುದು ರೈತರ ವಾದ. ತೇವಾಂಶ ಹೆಚ್ಚಿರುವುದರಿಂದ ಹೆಚ್ಚು ಗೊಬ್ಬರ ಬಳಸಿದರೆ ಒಳ್ಳೆಯ ಫಸಲು ಬರುತ್ತದೆ ಎನ್ನುವುದು ರೈತರ ಅಂದಾಜು.
ಹೀಗಾಗಿ ಗೊಬ್ಬರ ಕೊಳ್ಳಲು ಶಕ್ತಿ ಮೀರಿ ಶ್ರಮಿಸುತ್ತಿರುವುದು ಕಂಡು ಬಂದಿದೆ. ಹಿರೇಹಳ್ಳಿ, ಮತ್ತೂರು ಹಾಗೂ ಇನ್ನಿತರ ಕಡೆ ಮಾರಾಟಗಾರರ ಮೂಲಕ ಯೂರಿಯಾ ವಿತರಣೆ ಮಾಡಲಾಗುತ್ತಿದೆ. ಆದರೆ ಮಾರಾಟಗಾರರು ಅದರೊಂದಿಗೆ ಇನ್ನಿತರ ಉತ್ಪನ್ನಗಳನ್ನು ಕೊಳ್ಳಬೇಕೆಂದು ಷರತ್ತು ವಿಧಿಸುತ್ತಿದ್ದಾರೆ. ಈಗಾಗಲೇ ಬೆಳೆ ಹಾನಿ ಅನುಭವಿಸಿರುವ ರೈತರು ಸಂಕಷ್ಟಕ್ಕೆ ಈಡಾಗಿದ್ದು, ದುಪ್ಪಟ್ಟು ಹಣ ಕೊಟ್ಟು ಖಾಸಗಿ ಮಾರಾಟಗಾರರಿಂದ ಯೂರಿಯಾ ಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಾರಣ ಸೊಸೈಟಿಗಳ ಮೂಲಕ ಗೊಬ್ಬರ ವಿತರಿಸುವಂತೆ ಆಗ್ರಹಿಸುತ್ತಿದ್ದಾರೆ.
ಶೇ 80ರಷ್ಟು ಯೂರಿಯಾ ವಿತರಣೆ: ‘ತಾಲ್ಲೂಕಿನಲ್ಲಿ ಇದುವರೆಗೆ ಶೇ 80ರಷ್ಟು ಯೂರಿಯಾ ವಿತರಿಸಲಾಗಿದೆ. ಇನ್ನುಳಿದ 1,500 ಟನ್ ಗೊಬ್ಬರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. 2025–26 ಸಾಲಿನಲ್ಲಿ ತಾಲ್ಲೂಕಿನ ಮುಂಗಾರು ಬೆಳೆಗೆ 6,553 ಮೆ.ಟನ್ ಹಾಗೂ ಹಂಗಾರು ಬೆಳೆಗೆ 2,779 ಮೆ.ಟನ್ ಸೇರಿದಂತೆ ಒಟ್ಟಾರೆ 9,332 ಟನ್ ಯೂರಿಯಾ ಗೊಬ್ಬರ ಹಂಚಿಕೆಯಾಗಬೇಕು. ಆರಂಭಿಕ ಶಿಲ್ಕು 1,346 ಮೆ.ಟನ್, ಮತ್ತು ಸರಬರಾಜು ಆದ 4,067 ಮೆ.ಟನ್ ಸೇರಿದಂತೆ ಒಟ್ಟಾರೆ 5,148 ಮೆ.ಟನ್ ಯೂರಿಯಾ ಸರಬರಾಜಾಗಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಗಣೇಶ ಕಮ್ಮಾರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.