ಹಾವೇರಿ: ‘ಜಿಲ್ಲೆಯ ರೈತರ ಬೇಡಿಕೆಗೆ ತಕ್ಕಷ್ಟು ಯೂರಿಯಾ ಗೊಬ್ಬರ ಪೂರೈಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ರೈತರ ಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಲಾಗುತ್ತಿದೆ’ ಎಂದು ಆರೋಪಿಸಿ ಬಿಜೆಪಿ ಜಿಲ್ಲಾ ಘಟಕದಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಹೊರವಲಯದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ್ದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು, ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ಘೋಷಣೆ ಕೂಗಿದರು.
ಪ್ರತಿಭಟನೆಯ ಬಹಿರಂಗ ಸಭೆ ಮುಗಿಸಿದ ಮುಖಂಡರು–ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿಯೊಳಗೆ ತೆರಳಿ ಮುತ್ತಿಗೆ ಹಾಕಲು ಮುಂದಾಗಿದ್ದರು. ಕಚೇರಿಯ ಮುಖ್ಯ ಪ್ರವೇಶ ದ್ವಾರದಲ್ಲಿ ಬ್ಯಾರಿಕೇಡ್ ಹಾಕಿದ್ದ ಪೊಲೀಸರು, ಪ್ರತಿಭಟನಕಾರರನ್ನು ರಸ್ತೆಯಲ್ಲಿಯೇ ತಡೆದು ನಿಲ್ಲಿಸಿದರು.
ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ಪ್ರತಿಭಟನಕಾರರ ಜೊತೆ ಮಾತುಕತೆ ನಡೆಸಿದರು. ‘ಜಿಲ್ಲೆಯಲ್ಲಿ ಪ್ರತಿಯೊಬ್ಬ ರೈತರಿಗೂ ಗೊಬ್ಬರ ಸಿಗುವಂತಾಗಬೇಕು. ಕಾಳಸಂತೆಯಲ್ಲಿ ಗೊಬ್ಬರ ಮಾರಾಟ ತಡೆದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ ಪ್ರತಿಭಟನಕಾರರು, ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕೃಷಿ ಇಲಾಖೆ ಅಧಿಕಾರಿಗಳು ಶಾಮೀಲು: ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಕೃಷಿ ಇಲಾಖೆಯ ಮಾಜಿ ಸಚಿವರೂ ಆಗಿರುವ ಬಿಜೆಪಿ ಮುಖಂಡ ಬಿ.ಸಿ.ಪಾಟೀಲ, ‘ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ, ರೈತ ವಿರೋಧಿಯಾಗಿದೆ. ಕೇಂದ್ರ ಸರ್ಕಾರ ನೀಡಿರುವ ಗೊಬ್ಬರವನ್ನು ರಾಜ್ಯ ಸರ್ಕಾರ, ಕಾಳಸಂತೆಯಲ್ಲಿ ಮಾರುತ್ತಿದೆ. ಕೃಷಿ ಇಲಾಖೆಯ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ’ ಎಂದು ದೂರಿದರು.
‘ಸರ್ಕಾರದ ಪ್ರಭಾವಿಗಳು ಹಾಗೂ ಶ್ರೀಮಂತರಿಗೆ ಮಾತ್ರ ಬಹುಬೇಗನೇ ಗೊಬ್ಬರ ಕೊಡುತ್ತಿದ್ದಾರೆ. ಎರಡ್ಮೂರು ಎಕರೆ ಜಮೀನು ಇರುವ ಬಡ ರೈತರಿಗೆ ಗೊಬ್ಬರ ಕೊಡುತ್ತಿಲ್ಲ. ಇದರಿಂದ ರೈತರು ಕಂಗಾಲಾಗಿದ್ದಾರೆ. ಗೊಬ್ಬರ ನಿರ್ವಹಣೆಯಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ’ ಎಂದು ಆಕ್ರೋಶ ಹೊರಹಾಕಿದರು.
‘ರೈತರ ಹೆಸರಿನಲ್ಲಿ ಬಂದಿದ್ದ ಗೊಬ್ಬರವನ್ನು ಮಾರಿಕೊಳ್ಳಲಾಗುತ್ತಿದೆ. ಹಾವೇರಿ ಜಿಲ್ಲೆಯ ಕೃಷಿ ಇಲಾಖೆ ಅಧಿಕಾರಿಗಳು, ಗೊಬ್ಬರ ಅಂಗಡಿಯವರ ಜೊತೆ ಶಾಮೀಲಾಗಿದ್ದಾರೆ. ಲಿಂಕ್ ತೆಗೆದುಕೊಂಡರಷ್ಟೇ ಗೊಬ್ಬರ ನೀಡುವುದಾಗಿ ಮಾರಾಟಗಾರರು ರೈತರನ್ನು ಒತ್ತಾಯಿಸುತ್ತಿದ್ದಾರೆ. ಇದೆಲ್ಲವೂ ಬಹಿರಂಗವಾಗಿ ನಡೆಯುತ್ತಿದ್ದರೂ ಕೃಷಿ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಮೌನವಾಗಿದ್ದಾರೆ. ಎಲ್ಲರೂ ಶಾಮೀಲಾಗಿರುವ ಅನುಮಾನವಿದೆ’ ಎಂದರು.
‘ಎಷ್ಟು ಗೊಬ್ಬರ ಅಂಗಡಿ ಪರಿಶೀಲನೆ ಮಾಡಲಾಗಿದೆ? ಎಷ್ಟು ಅಂಗಡಿಗಳಿಗೆ ನೋಟಿಸ್ ನೀಡಲಾಗಿದೆ? ಎಂಬ ಮಾಹಿತಿಯೂ ಅಧಿಕಾರಿಗಳ ಬಳಿಯಿಲ್ಲ. ಕುರ್ಚಿ ಕಿತ್ತಾಟದಲ್ಲಿ ತೊಡಗಿರುವ ರಾಜ್ಯ ಸರ್ಕಾರ, ರೈತರ ಬಗ್ಗೆ ಕಾಳಜಿ ತೋರುತ್ತಿಲ್ಲ. ಜಿಲ್ಲೆಯಲ್ಲಿ ಆರು ಕಾಂಗ್ರೆಸ್ ಶಾಸಕರಿದ್ದರೂ ಒಬ್ಬರೂ ಗೊಬ್ಬರದ ಬಗ್ಗೆ ಮಾತನಾಡುತ್ತಿಲ್ಲ. ಗೊಬ್ಬರದ ಬಗ್ಗೆ ಕೃಷಿ ಸಚಿವರಿಗೆ ಅಲ್ಪಜ್ಞಾನವೂ ಇಲ್ಲ’ ಎಂದು ದೂರಿದರು.
ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಮಾತನಾಡಿ, ‘ರಾಜ್ಯ ಸರ್ಕಾರದ ಬೇಡಿಕೆಗಿಂತಲೂ ಹೆಚ್ಚು ಗೊಬ್ಬರವನ್ನು ಕೇಂದ್ರ ಸರ್ಕಾರ ಪೂರೈಸಿದೆ. ಈ ಪೈಕಿ 2 ಲಕ್ಷದಿಂದ 3 ಲಕ್ಷ ಟನ್ ಗೊಬ್ಬರವನ್ನು ರಾಜ್ಯ ಸರ್ಕಾರ ಕಾಳಸಂತೆಯಲ್ಲಿ ಮಾರಿರುವ ಅನುಮಾನವಿದೆ’ ಎಂದು ದೂರಿದರು.
‘ಗೊಬ್ಬರ ಸಿಗದಿದ್ದಕ್ಕೆ ನೊಂದ ಕೊಪ್ಪಳದ ರೈತರೊಬ್ಬರು ಮಣ್ಣು ತಿಂದು ಆಕ್ರೋಶ ಹೊರಹಾಕಿದ್ದಾರೆ. ಈ ಬಗ್ಗೆ ಸುದ್ದಿ ಪ್ರಕಟಗೊಳ್ಳುತ್ತಿದ್ದಂತೆ, ರಾತ್ರೋರಾತ್ರಿ ರೈತನ ಮನೆಗೆ ಹೋಗಿ 4 ಚೀಲ ಗೊಬ್ಬರ ನೀಡಲಾಗಿದೆ. ಕೊಪ್ಪಳ ಬಂದ್ ಮಾಡುವುದಾಗಿ ಹೇಳಿದ್ದಕ್ಕೆ, ಕಾಳಸಂತೆಯಲ್ಲಿ ಗೊಬ್ಬರ ಮಾರುತ್ತಿದ್ದವರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ’ ಎಂದರು.
‘ಸುಳ್ಳು ಹೇಳುವುದರಲ್ಲಿ ಕಾಂಗ್ರೆಸ್‌ನವರು ನಿಸ್ಸೀಮರು. ಎಲ್ಲ ಜಿಲ್ಲೆಗೆ ಸಮಪ್ರಮಾಣದಲ್ಲಿ ಗೊಬ್ಬರ ಕಳುಹಿಸಿರುವುದಾಗಿ ಕೃಷಿ ಸಚಿವ ಹೇಳುತ್ತಿದ್ದಾರೆ. ಆದರೆ, ಎಲ್ಲಿ ಯೂರಿಯಾ ಬಳಸುತ್ತಾರೆಂಬ ಸಾಮಾನ್ಯ ಜ್ಞಾನವೂ ಸಚಿವರಿಗಿಲ್ಲ. ಮೆಕ್ಕೆಜೋಳ ಬೆಳೆದಿರುವ ಹಾವೇರಿ, ಗದಗ ಜಿಲ್ಲೆಗೆ ಕಡಿಮೆ ಗೊಬ್ಬರ ಬಂದಿದೆ. ತೋಟಗಾರಿಕೆ ಬೆಳೆ ಬೆಳೆಯುವ ಜಿಲ್ಲೆಗೆ ಹೆಚ್ಚಿನ ಗೊಬ್ಬರ ಹೋಗಿದೆ’ ಎಂದು ದೂರಿದರು.
ಮುಖ್ಯಮಂತ್ರಿ, ಕೃಷಿ ಸಚಿವರ ವಿರುದ್ಧ ಆಕ್ರೋಶ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆಗೆ ಯತ್ನ ರಾಜ್ಯ ಸರ್ಕಾರಕ್ಕೆ ಮನವಿ
ಜಿಲ್ಲೆಯಲ್ಲಿ ಮಟ್ಕಾ ಡ್ರಗ್ಸ್ ಮದ್ಯ ಅಕ್ರಮ ಹಾವಳಿ ಹೆಚ್ಚಾಗಿದೆ. ಜಿಲ್ಲಾಡಳಿತ ಇವುಗಳನ್ನು ತಡೆಯದಿದ್ದರೆ ಪೊಲೀಸ್ ಠಾಣೆ–ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದುಬಿ.ಸಿ. ಪಾಟೀಲ ಬಿಜೆಪಿ ಮುಖಂಡ
‘ಯೂರಿಯಾ ಗೊಬ್ಬರ ಲೂಟಿ’ ‘ಕೇಂದ್ರ ಸರ್ಕಾರದಿಂದ ಪೂರೈಕೆಯಾಗಿದ್ದ ಯೂರಿಯಾ ಗೊಬ್ಬರವನ್ನು ರೈತರಿಗೆ ತಲುಪಿಸಬೇಕಾದ ರಾಜ್ಯ ಸರ್ಕಾರ ರೈತರ ಹೆಸರಿನಲ್ಲಿ ಲೂಟಿ ಮಾಡಿದೆ. ಕಾಳಸಂತೆಯಲ್ಲಿ ಗೊಬ್ಬರ ಮಾರಿ ರೈತರಿಗೆ ವಂಚಿಸಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ದೂರಿದರು. ಪ್ರತಿಭಟನೆಯಲ್ಲಿ ಮಾತನಾಡಿದ ಅವರು ‘ಕೃಷಿಯನ್ನೇ ನಂಬಿಕೊಂಡಿರುವ ಹಾವೇರಿ ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರ ಅಭಾವವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೃಷಿ ಸಚಿವ ಉಸ್ತುವಾರಿ ಸಚಿವ ಜಿಲ್ಲೆಯ ಶಾಸಕರು ತುಟಿ ಬಿಚ್ಚುತ್ತಿಲ್ಲ. ಕೃಷಿ ನಾಡಾಗಿರುವ ಹಾವೇರಿ ಗದಗ ಜಿಲ್ಲೆಗೆ ಒಮ್ಮೆಯೂ ಬಾರದ ಕೃಷಿ ಸಚಿವ ಹೇಗೆ ಗೊಬ್ಬರ ನಿರ್ವಹಣೆ ಮಾಡಲು ಸಾಧ್ಯ’ ಎಂದು ಕಿಡಿಕಾರಿದರು.
- ಕೆಲ ಮುಖಂಡರಿಗೆ ಫೋಟೊ ಚಿಂತೆ ಗೊಬ್ಬರ ಅಭಾವದ ವಿರುದ್ಧ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ಸಂದರ್ಭದಲ್ಲಿ ಕೆಲ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆಗೂ ತಮಗೂ ಸಂಬಂಧವಿಲ್ಲದಂತೆ ವರ್ತಿಸಿದರು. ಬಿ.ಸಿ.ಪಾಟೀಲ ಎ.ಎಸ್.ಪಾಟೀಲ ನಡಹಳ್ಳಿ ವಿರೂಪಾಕ್ಷ ಬಳ್ಳಾರಿ ಭಾಷಣ ಮಾಡುತ್ತಿದ್ದರೆ ಕೆಲವರು ತಮ್ಮದೇ ಗುಂಪಿನಲ್ಲಿ ನಿಂತುಕೊಂಡು ಚರ್ಚೆಯಲ್ಲಿ ತೊಡಗಿದ್ದರು. ಸೆಲ್ಫಿ ಹಾಗೂ ಗುಂಪು ಫೋಟೊ ತೆಗೆಸಿಕೊಳ್ಳುವಲ್ಲಿ ನಿರತರರಾಗಿದ್ದರು. ಈ ವರ್ತನೆ ಪಕ್ಷದ ಹಿರಿಯ ಮುಖಂಡರಿಗೂ ಕೋಪ ತರಿಸಿತು. ತಮಟೆ ಬಡಿದು ಭಾಷಣಕ್ಕೂ ಅಡ್ಡಿಪಡಿಸಿದ ಘಟನೆಯೂ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.