ADVERTISEMENT

ಹಾವೇರಿ ಜಿಲ್ಲೆಯಲ್ಲಿ ಯೂರಿಯಾ ಅಭಾವ: ಡಿ.ಸಿ ಕಚೇರಿಗೆ ಮುತ್ತಿಗೆ

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ನಾಳೆ: ವಿರೂಪಾಕ್ಷಪ್ಪ ಬಳ್ಳಾರಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 2:56 IST
Last Updated 28 ಜುಲೈ 2025, 2:56 IST
ವಿರೂಪಾಕ್ಷಪ್ಪ ಬಳ್ಳಾರಿ
ವಿರೂಪಾಕ್ಷಪ್ಪ ಬಳ್ಳಾರಿ   

ಹಾವೇರಿ: ‘ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರದ ಅಭಾವ ಸೃಷ್ಟಿಯಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗೊಬ್ಬರ ಪೂರೈಕೆ ಮಾಡುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರದ ವಿರುದ್ಧ ಜುಲೈ 29ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜುಲೈ 29ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ, ರಾಜ್ಯ ಸರ್ಕಾರಕ್ಕೆ ಕಠಿಣ ಸಂದೇಶ ರವಾನಿಸಲಾಗುವುದು’ ಎಂದರು.

‘ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಜಮೀನುಗಳು ಜವಳಾಗಿ ಬೆಳೆ ಹಾಳಾಗುತ್ತಿದೆ. ಈಗ ಬೆಳೆಗಳಿಗೆ ಯೂರಿಯಾ ಗೊಬ್ಬರದ ಅಗತ್ಯವಿದ್ದು, ಅದನ್ನು ಪಡೆಯಲು ರೈತರು ಪರದಾಡುತ್ತಿದ್ದಾರೆ. ಅನ್ನದಾತನ ಕೂಗಿಗೆ ಸ್ಪಂದಿಸದ ರಾಜ್ಯ ಸರ್ಕಾರ, ಸಮರ್ಪಕ ಪ್ರಮಾಣದಲ್ಲಿ ಗೊಬ್ಬರ ಪೂರೈಸದೇ ಅನ್ಯಾಯ ಮಾಡುತ್ತಿದೆ. ರಾಜ್ಯ ಸರ್ಕಾರದ ರೈತ ವಿರೋಧಿ ನಡೆಯ ವಿರುದ್ಧ ಬಿಜೆಪಿ ಹೋರಾಟ ಆರಂಭಿಸಿದೆ’ ಎಂದು ತಿಳಿಸಿದರು.

ADVERTISEMENT

‘ಪ್ರಸಕ್ತ ಮುಂಗಾರಿನಲ್ಲಿ 6.30 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಗೊಬ್ಬರಕ್ಕಾಗಿ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಬೇಡಿಕೆ ಸಲ್ಲಿಸಿತ್ತು. ಬೇಡಿಕೆಗೆ ಸ್ಪಂದಿಸಿದ್ದ ಕೇಂದ್ರ ಸರ್ಕಾರ, ಇದುವರೆಗೂ 8.73 ಲಕ್ಷ ಮೆಟ್ರಿಕ್ ಟನ್ ಗೊಬ್ಬರ ಪೂರೈಸಿದೆ. ಬೇಡಿಕೆಗಿಂತ ಹೆಚ್ಚಾಗಿ ಬಂದ ಗೊಬ್ಬರ ಎಲ್ಲಿದೆ? ಎಂಬ ಪ್ರಶ್ನೆ ಮೂಡಿದ್ದು, ಹೊರ ರಾಜ್ಯ ಅಥವಾ ಕೆಲ ಕಾರ್ಖಾನೆಗಳಿಗೆ ಮಾರಿರುವ ಅನುಮಾನವಿದೆ’ ಎಂದು ಸಂಶಯ ವ್ಯಕ್ತಪಡಿಸಿದರು.

‘ಬೇಡಿಕೆಗಿಂತಲೂ ಹೆಚ್ಚಿನ ಗೊಬ್ಬರವನ್ನು ಕೇಂದ್ರ ಸರ್ಕಾರ ಪೂರೈಸಿದೆ. ಆದರೆ, ಕೇಂದ್ರ ಸರ್ಕಾರವೇ ಗೊಬ್ಬರ ಕೊಟ್ಟಿಲ್ಲವೆಂದು ಕಾಂಗ್ರೆಸ್‌ನವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರಕ್ಕೆ ರೈತರ ಮೇಲೆ ಕಾಳಜಿ ಇದ್ದಿದ್ದರೆ, ಹೆಚ್ಚಿನ ಪ್ರಮಾಣದಲ್ಲಿ ಗೊಬ್ಬರಕ್ಕೆ ಬೇಡಿಕೆ ಸಲ್ಲಿಸುತ್ತಿದ್ದರು. ರಾಜ್ಯದಲ್ಲಿ ಗೊಬ್ಬರದ ಅಭಾವ ಉಂಟಾಗದಂತೆ ನೋಡಿಕೊಳ್ಳುತ್ತಿದ್ದರು. ಆದರೆ, ಇಂದಿನ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ’ ಎಂದು ದೂರಿದರು.

‘ಜಿಲ್ಲಾ ಉಸ್ತುವಾರಿ ಸಚಿವರು, ಉದ್ಘಾಟನೆ ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಲು ಮಾತ್ರ ಜಿಲ್ಲೆಗೆ ಬಂದು ಹೋಗುತ್ತಿದ್ದಾರೆ. ಇಲ್ಲಿಯ ರೈತರ ಸಮಸ್ಯೆಗಳನ್ನು ಆಲಿಸುತ್ತಿಲ್ಲ. ಯೂರಿಯಾ ಗೊಬ್ಬರದ ಅಭಾವ ಉಂಟಾದರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಜಿಲ್ಲೆಯಲ್ಲಿ ಆರು ಕಾಂಗ್ರೆಸ್ ಶಾಸಕರಿದ್ದು, ಅವರು ಸಹ ಮೌನವಾಗಿದ್ದಾರೆ. ಯಾರೊಬ್ಬರೂ ಯೂರಿಯಾ ಗೊಬ್ಬರದ ಸಮಸ್ಯೆ ಬಗೆಹರಿಸುವತ್ತ ಗಮನ ಹರಿಸುತ್ತಿಲ್ಲ’ ಎಂದು ಆರೋಪಿಸಿದರು.

ಬೆಳೆ ಹಾನಿ, ಪರಿಹಾರಕ್ಕೆ ಆಗ್ರಹ: ‘ಜಿಲ್ಲೆಯ ಹಾನಗಲ್, ಹಿರೇಕೆರೂರು, ಬ್ಯಾಡಗಿ, ಶಿಗ್ಗಾವಿ ತಾಲ್ಲೂಕಿನ ಹಲವು ಕಡೆಗಳಲ್ಲಿ ಅತೀವೃಷ್ಟಿಯಿಂದ ಬೆಳೆ ಹಾನಿ ಆಗಿದೆ. ಸಂತ್ರಸ್ತ ರೈತರಿಗೆ ರಾಜ್ಯ ಸರ್ಕಾರ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.

‘ಗುಡ್ಡದಮಲ್ಲಾಪುರದಲ್ಲಿ ಗೋಡೆ ಕುಸಿದು ಮೃತಪಟ್ಟ ರೈತನಿಗೆ ‍ಪರಿಹಾರ ಕೊಟ್ಟಿದ್ದು ಬಿಟ್ಟರೆ ಬೇರೆ ಎಲ್ಲಿಯೂ ಜಿಲ್ಲಾ ಉಸ್ತುವಾರಿ ಸಚಿವ ಭೇಟಿ ನೀಡಿಲ್ಲ. ರೈತರ ಸಮಸ್ಯೆಗಂತೂ ಕಿವಿಗೂಡುತ್ತಿಲ್ಲ. ಜಿಲ್ಲೆಗೆ ಆಗುತ್ತಿರುವ ಅನ್ಯಾಯದ ವಿರುದ್ಧ ನಮ್ಮ ಹೋರಾಟ ನಿರಂತರ’ ಎಂದು ಹೇಳಿದರು.

ಬಿಜೆಪಿ ಮುಖಂಡ ಬಿ.ಸಿ.ಪಾಟೀಲ ಮಾತನಾಡಿ, ‘ಜಿಲ್ಲೆಯಲ್ಲಿ ರೈತರ ಶೇ 80ರಷ್ಟು ಬೆಳೆ ಹಾನಿಯಾಗುವ ವಾತಾವರಣವಿದೆ. ರಾಜ್ಯ ಸರ್ಕಾರ ಎಲ್ಲರಿಗೂ ಮಧ್ಯಂತರ ಪರಿಹಾರ ಘೋಷಿಸಬೇಕು. ಬೆಳೆ ಸಮೀಕ್ಷೆ ನಡೆಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರೆ, ಅವರು ಸ್ಪಂದಿಸುತ್ತಿಲ್ಲ’ ಎಂದು ದೂರಿದರು.

ಮುಖಂಡರಾದ ಶಿವರಾಜ ಸಜ್ಜನರ, ಅರುಣಕುಮಾರ ಪೂಜಾರ, ಗವಿಸಿದ್ದಪ್ಪ ದ್ಯಾಮಣ್ಣವರ, ಪರಮೇಶ್ವರಪ್ಪ ಮೇಗಳಮನಿ ಇದ್ದರು.

‘ಕಾಂಗ್ರೆಸ್‌ನವರೇ ಗುತ್ತಿಗೆದಾರರು’

‘ಬ್ಯಾಡಗಿ ತಾಲ್ಲೂಕಿನ ಅತ್ತಿಕಟ್ಟೆ ಗ್ರಾಮದ ಕೆರೆಯ ಏರಿ ಒಡೆದು ಅಪಾರ ಹಾನಿಯಾಗಿದೆ. ಈ ಕೆರೆಯ ಏರಿಯ ಕಾಮಗಾರಿಯನ್ನು ₹5 ಲಕ್ಷ ಅನುದಾನದಲ್ಲಿ ಕಾಂಗ್ರೆಸ್‌ ಕಾರ್ಯಕರ್ತನೇ ಮಾಡಿದ್ದ. ಆತ ಕೆಲಸ ಮಾಡಿಸಿದ್ದ ಏರಿಯೇ ಒಡೆದಿದೆ’ ಎಂದು ವಿರೂಪಾಕ್ಷಪ್ಪ ಬಳ್ಳಾರಿ ಆರೋಪಿಸಿದರು. ‘ಜಿಲ್ಲೆಯಲ್ಲಿ ಕಾಂಗ್ರೆಸ್‌ನವರೇ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದಾರೆ. ಅವರ‍್ಯಾರೂ ಗುಣಮಟ್ಟದ ಕಾಮಗಾರಿಗೆ ಒತ್ತು ನೀಡುತ್ತಿಲ್ಲ. ಕಳಪೆ ಕಾಮಗಾರಿಗಳು ನಡೆಯುತ್ತಿದ್ದು ಯಾರಿಗೆ ಏನು ಬೇಕು ಅದನ್ನು ಕೊಟ್ಟು ಸುಮ್ಮನಾಗುತ್ತಿದ್ದಾರೆ’ ಎಂದು ದೂರಿದರು. ಮುಖಂಡ ಬಿ.ಸಿ. ಪಾಟೀಲ ‘ಅಪ್ಪರ್ ತುಂಗಾ ಮೇಲ್ದಂಡೆ ಯೋಜನೆಯ ಕಾಮಗಾರಿಯೂ ಕಳಪೆಯಾಗಿದೆ. ಇದನ್ನು ಪತ್ತೆ ಮಾಡಿ ಎಂಜಿನಿಯರ್‌ಗೆ ತಿಳಿಸಿದ್ದು ಅದರು ತಪ್ಪು ಒಪ್ಪಿಕೊಂಡಿದ್ದಾರೆ. ಆದರೆ ತಪ್ಪಿತಸ್ಥರ ವಿರುದ್ಧ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಸರ್ಕಾರದಲ್ಲಿ ಎಲ್ಲವೂ ಕಳಪೆಯಾಗುತ್ತಿದೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.