ADVERTISEMENT

ಆಡಳಿತದಲ್ಲಿ ಕನ್ನಡ ಭಾಷೆ ಬಳಸಿ

*ಚಿತ್ರನಟ ಪುನೀತ್‍ ರಾಜ್‌ಕುಮಾರ್‌ಗೆ ಶ್ರದ್ಧಾಂಜಲಿ ಅರ್ಪಣೆ *ಸಚಿವ ಬಿ.ಸಿ.ಪಾಟೀಲ ಸೂಚನೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2021, 13:17 IST
Last Updated 1 ನವೆಂಬರ್ 2021, 13:17 IST
ಹಾವೇರಿ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಕೃಷಿ ಸಚಿವ ಬಿ.ಸಿ.ಪಾಟೀಲ ಸನ್ಮಾನಿಸಿದರು. ಶಾಸಕ ನೆಹರು ಓಲೇಕಾರ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಮತ್ತು ಅಧಿಕಾರಿಗಳು ಇದ್ದಾರೆ  –ಪ್ರಜಾವಾಣಿ ಚಿತ್ರ 
ಹಾವೇರಿ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಕೃಷಿ ಸಚಿವ ಬಿ.ಸಿ.ಪಾಟೀಲ ಸನ್ಮಾನಿಸಿದರು. ಶಾಸಕ ನೆಹರು ಓಲೇಕಾರ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಮತ್ತು ಅಧಿಕಾರಿಗಳು ಇದ್ದಾರೆ  –ಪ್ರಜಾವಾಣಿ ಚಿತ್ರ    

ಹಾವೇರಿ: ಆಡಳಿತದ ಎಲ್ಲ ಹಂತಗಳಲ್ಲಿ ಕಡ್ಡಾಯವಾಗಿ ಪೂರ್ಣ ಪ್ರಮಾಣದಲ್ಲಿ ಕನ್ನಡ ಭಾಷೆಯನ್ನು ಬಳಸಿ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಸಲಹೆ ನೀಡಿದರು.

ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಆಡಳಿತ ಕಚೇರಿಗೆ ಹೋಗುವ ಪತ್ರಗಳನ್ನು ಹೊರತುಪಡಿಸಿ ಉಳಿದೆಲ್ಲ ಪತ್ರ ವ್ಯವಹಾರ ನಮ್ಮ ಮಾತೃ ಭಾಷೆಯಾದ ಕನ್ನಡದಲ್ಲೇ ಇರಬೇಕು ಎಂದು ಹೇಳಿದರು.

ಕನ್ನಡ ನಾಡಿನಲ್ಲಿ ಜವಾಬ್ದಾರಿಯುತ ಪ್ರಜೆಯಾಗಿ ನಾನು ಕನ್ನಡದದಲ್ಲೇ ಮಾತನಾಡುತ್ತೇನೆ. ಕನ್ನಡದಲ್ಲೇ ಕಚೇರಿಯ ಬರವಣಿಗೆ ಸೇರಿದಂತೆ ನಿತ್ಯ ವ್ಯವಹಾರದಲ್ಲಿ ಕನ್ನಡವನ್ನೇ ಬಳಸುತ್ತೇನೆ ಎಂಬ ಪಣತೊಡಬೇಕು. ಕನ್ನಡೇತರ ಬಂಧುಗಳಿಗೆ ಪ್ರೀತಿಯಿಂದ ಕನ್ನಡ ಕಲಿಸುತ್ತೇನೆ. ಕನ್ನಡ ನಾಡು-ನುಡಿ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಲು ನಾವೆಲ್ಲರೂ ಸಂಕಲ್ಪ ಮಾಡೋಣ ಎಂದು ಕರೆ ನೀಡಿದರು.

ADVERTISEMENT

ಕರ್ನಾಟಕಕ್ಕೆ ಒಂದು ಅಸ್ಮಿತೆ ದೊರಕಿಸಿಕೊಡಲು ಆರಂಭವಾದ ಕರ್ನಾಟಕ ಏಕೀಕರಣ ಚಳವಳಿ, ಅತ್ಯಂತ ಸಶಕ್ತ ಚಳವಳಿಯಾಗಿತ್ತು.ರಾಜಕೀಯವಾಗಿ, ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ, ಸಾಹಿತ್ಯಿಕವಾಗಿ ಕನ್ನಡತನಕ್ಕೆ ಕನ್ನಡವೇ ಸರಿಸಾಟಿ. ಭಾರತೀಯ ಭಾಷೆ ಹಾಗೂ ಸಾಹಿತ್ಯಗಳಲ್ಲಿ ಉನ್ನತ ಶ್ರೇಣಿಯಲ್ಲಿರುವ ಕನ್ನಡ ನುಡಿಗೆ ಎರಡು ಸಾವಿರ ವರ್ಷಗಳ ಸುದೀರ್ಘ ಇತಿಹಾಸವಿದೆ. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತಿದೆ ಎಂದು ಹೇಳಿದರು.

ಮೌನಾಚರಣೆ

ರಾಷ್ಟ್ರಪ್ರಶಸ್ತಿ ಪುರಸ್ಕೃತ ಕನ್ನಡ ಚಿತ್ರನಟ ಪುನೀತ್ ರಾಜ್‍ಕುಮಾರ್‌ ಅವರಿಗೆ ಮೌನಾಚರಣೆ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಆಕರ್ಷಕ ಪಥಸಂಚಲನ:ಸಶಸ್ತ್ರ ಮೀಸಲು ಪಡೆ, ಅರಣ್ಯ ರಕ್ಷಕ ಪಡೆ, ಗೃಹ ರಕ್ಷಕದಳ, ನಾಗರೀಕರ ರಕ್ಷಣಾ ಪಡೆಗಳು ಆಕರ್ಷಕವಾಗಿ ಪಥಸಂಚಲನ ನಡೆಸಿದವು.

‌ಕಾರ್ಯಕ್ರಮದಲ್ಲಿ ಶಾಸಕ ನೆಹರು ಓಲೇಕಾರ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್ ರೋಶನ್‌, ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಹೆಚ್ಚುವರಿ ಜಿಲ್ಲಾಧಿಕಾರಿ ಎನ್. ತಿಪ್ಪೇಸ್ವಾಮಿ ಇದ್ದರು.

15 ಸಾಧಕರಿಗೆ ಸನ್ಮಾನ:ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಜಿಲ್ಲಾಡಳಿತದಿಂದ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ 15 ಸಾಧಕರನ್ನು ಸನ್ಮಾನಿಸಲಾಯಿತು.

ದೇವಗಿರಿಯ ಯಲ್ಲಪ್ಪ ದ್ಯಾ.ಬಡ್ಡಿ, ಅಂಧ ಕಲಾವಿದ ಜೋಯಿಸರಹರಳಹಳ್ಳಿಯ ಚನ್ನಗೌಡ ಶಂ.ಸಾರದ (ರಂಗಭೂಮಿ), ಹಲಗೇರಿಯ ಗುಡ್ಡಪ್ಪ ದೊಡ್ಡಮನಿ (ಸಂಗೀತ), ಮಡ್ಲೂರ ಗ್ರಾಮದ ಮಹಾರುದ್ರಪ್ಪ ಇಟಗಿ (ಪುರವಂತಿಕೆ), ಅಂತ್ರವಳ್ಳಿ ಗ್ರಾಮದ ರಾಮನಗೌಡ ಜೀವನಗೌಡ್ರ (ಸೂತ್ರದ ಗೊಂಬೆಯಾಟ), ಬ್ಯಾಡಗಿ ತಾಲ್ಲೂಕಿನ ಅಗಸನಹಳ್ಳಿಯ ಶೇಖಪ್ಪ ಗಾಜೇರ (ಚಿತ್ರಕಲೆ), ರಟ್ಟಿಹಳ್ಳಿ ತಾಲ್ಲೂಕಿನ ನಜೀರ ಸವಣೂರ (ಚುಟುಕು ಸಾಹಿತ್ಯ).

ತಡಸ ಗ್ರಾಮದ ಭರಮಪ್ಪ ಹುಲಗಣ್ಣನವರ (ಪ್ರಾಚೀನ ವೈದ್ಯ ಪದ್ಧತಿ), ಸೂಲಮಟ್ಟಿ ಗ್ರಾಮದ ಅಬ್ದುಲ್‍ ಖಾನ್‌ ಧಾರವಾಡ ಹಾಗೂ ಚಂದಾಪೂರ ಗ್ರಾಮದ ವಾಸುದೇವಪ್ಪ ಕುವಾರಕರ (ಸಮಾಜಸೇವೆ). ತುಮ್ಮಿನಕಟ್ಟಿ ಗ್ರಾಮದ ಕುಸ್ತಿ ಪಟು ಕೃಷ್ಣಪ್ಪ ಜಾಧವ (ಕ್ರೀಡೆ), ಹಾವೇರಿಯ ಸಿದ್ದುಮತಿ ನೆಲವಿಗಿ (ಸಾಹಿತ್ಯ), ರಾಣೆಬೆನ್ನೂರಿನ ಸೇವಾ ಅಂಧರ ಸಂಸ್ಥೆ ಅಧ್ಯಕ್ಷರು ಹಾಗೂ ಶೇಷಗಿರಿ ಗಜಾನನ ಯುವಕ ಮಂಡಳಿ ಅಧ್ಯಕ್ಷರು (ಸಂಘ-ಸಂಸ್ಥೆ), ರಾಣೆಬೆನ್ನೂರಿನ ರಜನಿ ಕರಿಗಾರ (ಹಿಂದೂಸ್ತಾನಿ ಸಂಗೀತ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.