
ಪ್ರಜಾವಾಣಿ ವಾರ್ತೆ
ಹಾವೇರಿ: ‘ಬಸವಣ್ಣ ಹಾಗೂ ಅಲ್ಲಮಪ್ರಭು ಅವರ ನೇತೃತ್ವದಲ್ಲಿ 12ನೇ ಶತಮಾನದಲ್ಲಿ ಆರಂಭವಾದ ವಚನ ಚಳವಳಿ ಇಡೀ ಜಗತ್ತಿಗೆ ಮಾನವೀಯತೆ ಮತ್ತು ಸಮಾನತೆಯ ಸಂದೇಶ ನೀಡಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ ಎಲ್ ಹೇಳಿದರು.
ನಗರದ ಗಾಂಧಿ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆದ ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಮಾದಾರ ದೂಳಯ್ಯ ಮತ್ತು ಉರಿಲಿಂಗ ಪೆದ್ದಿ ಕಾಯಕ ಶರಣರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಬಸವ ಕಲ್ಯಾಣದಲ್ಲಿ ನಡೆದ ಅನುಭವಮಂಟಪ ಜಗತ್ತಿಗೆ ಸಂಸತ್ತಿನ ಪರಿಕಲ್ಪನೆ ಮೂಡಿಸಿತು. ಕಾಯಕ ಶರಣರ ವಚನಗಳು ಸಮಸಮಾಜ ನಿರ್ಮಾಣದ ದಾರಿದೀಪ. ಶರಣರು ರಚಿಸಿದ ವಚನಗಳು ಜೀವನದ ಗಾಢ ಅರ್ಥಗಳನ್ನು ಒಳಗೊಂಡಿವೆ. ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುದನ್ನು ತಿಳಿಸುತ್ತವೆ’ ಎಂದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಂ. ಹಿರೇಮಠ, ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಂ. ಮೈದೂರ ಮಾತನಾಡಿದರು. ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಚರಿತ್ರೆ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ. ಎನ್.ಚಿನ್ನಸ್ವಾಮಿ ಸೋಸಲೆ ಉಪನ್ಯಾಸ ನೀಡಿದರು.
ಈ ವೇಳೆ ಸಾಹಿತಿಗಳು ಹಾಗೂ ಕಲಾವಿದರಿಗೆ ಮಾಸಾಶನ ಮಂಜೂರಾತಿ ಆದೇಶ ಪತ್ರ ವಿತರಿಸಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ, ಜಾನಪದ ಕಲಾವಿದ ಗುರುರಾಜ ಎಸ್ ಚಲವಾದಿ, ಸಮಾಜದ ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.