ADVERTISEMENT

ಬ್ಯಾಡಗಿ ಬಾಲಕಿ ಸಾವು: ಸಾವಿನ ಅಭಿಪ್ರಾಯ ತಿಳಿಸಲು ‘ಎಚ್‌ಒಡಿ’ ಹಿಂದೇಟು

ಪೊಲೀಸರ ಕೈ ಸೇರಿದ ಎಫ್‌ಎಸ್‌ಎಲ್‌ ವರದಿ; ರಾಜ್ಯ ವೈದ್ಯಕೀಯ ಮಂಡಳಿಗೆ ಪತ್ರ ?

ಸಂತೋಷ ಜಿಗಳಿಕೊಪ್ಪ
Published 11 ಜುಲೈ 2025, 3:54 IST
Last Updated 11 ಜುಲೈ 2025, 3:54 IST
ಡಾ. ಪ್ರದೀಪಕುಮಾರ್‌ ಎಂ.ವಿ. 
ಡಾ. ಪ್ರದೀಪಕುಮಾರ್‌ ಎಂ.ವಿ.    

ಹಾವೇರಿ: ಇಲ್ಲಿಯ ಚಿರಾಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಮೃತಪಟ್ಟಿದ್ದರು ಎನ್ನಲಾದ ಬಾಲಕಿ ವಂದನಾ ತುಪ್ಪದ ಅವರ ಸಾವಿಗೆ ಸಂಬಂಧಪಟ್ಟಂತೆ ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್‌) ವರದಿ ಪೊಲೀಸರ ಕೈ ಸೇರಿದೆ. ಆದರೆ, ಈ ವರದಿ ಆಧರಿಸಿ ವೈದ್ಯಕೀಯ ಅಭಿಪ್ರಾಯ ನೀಡಲು ಹಾವೇರಿ ವೈದ್ಯಕೀಯ ಕಾಲೇಜಿನ ಎಚ್‌ಒಡಿ (ವಿಭಾಗದ ಮುಖ್ಯಸ್ಥ) ಹಿಂದೇಟು ಹಾಕುತ್ತಿರುವುದಾಗಿ ಗೊತ್ತಾಗಿದೆ.

ಬ್ಯಾಡಗಿ ಬಾಲಕಿ ವಂದನಾ ಅವರ ಅನುಮಾನಾಸ್ಪದ ಸಾವಿನ ಬಗ್ಗೆ ಯುಡಿಆರ್(ಅಸಹಜ ಸಾವು) ದಾಖಲಿಸಿಕೊಂಡಿರುವ ಹಾವೇರಿ ಶಹರ ಠಾಣೆ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ. ಬಾಲಕಿಯ ಮರಣೋತ್ತರ ಪರೀಕ್ಷೆ ನಡೆಸಿದ್ದ ಹಾವೇರಿ ವೈದ್ಯಕೀಯ ಮಹಾವಿದ್ಯಾಲಯದ ನ್ಯಾಯ ವೈದ್ಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಗುರುರಾಜ ಬಿರಾದಾರ, ವರದಿ ತಿರುಚಲು ಲಂಚ ಪಡೆಯುತ್ತಿದ್ದ ಆರೋಪದಡಿ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಇದೀಗ ಅವರು ಜಾಮಿನು ಮೇಲೆ ಹೊರಬಂದಿದ್ದಾರೆ.

ಮರಣೋತ್ತರ ಪರೀಕ್ಷೆ ವರದಿ ಹಾಗೂ ಎಫ್‌ಎಸ್‌ಎಲ್‌ ವರದಿಗಳನ್ನು ಹೋಲಿಕೆ ಮಾಡಿ ಅಭಿಪ್ರಾಯ ತಿಳಿಸಬೇಕಿದ್ದ ವೈದ್ಯ ಗುರುರಾಜ ಅವರು ಲಂಚದ ಪ್ರಕರಣದಲ್ಲಿ ಬಂಧಿತರಾಗಿದ್ದರಿಂದ, ಈಗ ವರದಿ ನೀಡುವುದು ಯಾರು? ಎಂಬ ಪ್ರಶ್ನೆ ಮೂಡಿದೆ.

ADVERTISEMENT

‘ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರು, ಯಾವುದಾದರೂ ಪ್ರಕರಣದಲ್ಲಿ ಆರೋಪಿತರಾದರೆ ಅಥವಾ ತೀರಿಕೊಂಡರೆ ಅಥವಾ ಯಾವುದೋ ಕಾರಣಕ್ಕೆ ಅಲಭ್ಯರಾದರೆ, ಅವರ ಜವಾಬ್ದಾರಿಯನ್ನು ವೈದ್ಯಕೀಯ ಕಾಲೇಜಿನ ವಿಭಾಗದ ಮುಖ್ಯಸ್ಥರು ತೆಗೆದುಕೊಳ್ಳಬೇಕು. ಅವರೇ ಪೊಲೀಸರಿಗೆ ಅಂತಿಮ ಅಭಿಪ್ರಾಯ ತಿಳಿಸಬೇಕು’ ಎಂಬ ನಿಯಮವಿದೆ. ಆದರೆ, ಅಭಿಪ್ರಾಯ ತಿಳಿಸಬೇಕೋ ಅಥವಾ ಬೇಡವೋ ಎಂಬ ನಿರ್ಧಾರ ತೆಗೆದುಕೊಳ್ಳುವ ಅವಕಾಶವನ್ನೂ ಮುಖ್ಯಸ್ಥರಿಗೆ ನೀಡಲಾಗಿದೆ.

ವೈದ್ಯ ಗುರುರಾಜ ಲೋಕಾಯುಕ್ತ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಬಗ್ಗೆ ಮಾಹಿತಿ ಪಡೆದಿರುವ ಶಹರ ಠಾಣೆ ಪೊಲೀಸರು, ಹಾವೇರಿ ವೈದ್ಯಕೀಯ ಮಹಾವಿದ್ಯಾಲಯದ ನ್ಯಾಯ ವೈದ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ (ಎಚ್‌ಒಡಿ) ಡಾ.ಸುನೀಲ್ ಅರಮನಿ ಅವರನ್ನು ಸಂಪರ್ಕಿಸಿದ್ದಾರೆ. ‘ನಿಮ್ಮ ವಿಭಾಗದ ಸಹಾಯಕ ಪ್ರಾಧ್ಯಾಪಕ ಗುರುರಾಜ ಬಿರಾದಾರ, ಲೋಕಾಯುಕ್ತ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ. ಅವರು ಮಾಡಿದ್ದ ಬಾಲಕಿ ವಂದನಾ ಸಾವಿಗೆ ಸಂಬಂಧಪಟ್ಟ ಮರಣೋತ್ತರ ಪರೀಕ್ಷೆ ವರದಿ ಹಾಗೂ ಎಫ್‌ಎಸ್‌ಎಲ್‌ ವರದಿ ಆಧರಿಸಿ ಅಭಿಪ್ರಾಯ ತಿಳಿಸಿ’ ಎಂದು ಕೋರಿದ್ದಾರೆ.

ಅಭಿಪ್ರಾಯ ತಿಳಿಸಲು ಡಾ. ಸುನೀಲ್ ಹಿಂದೇಟು ಹಾಕುತ್ತಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ‘ಅಭಿಪ್ರಾಯ ತಿಳಿಸಿದರೆ, ನನ್ನ ಮೇಲೆಯೇ ಕೆಲವರು ಆರೋಪ ಮಾಡುವ ಸಾಧ್ಯತೆಯಿದೆ’ ಎಂದು ಡಾ. ಸುನೀಲ್‌ ಹೇಳಿರುವುದಾಗಿ ಗೊತ್ತಾಗಿದೆ. ಮುಖ್ಯಸ್ಥರ ಮೇಲೆಯೇ ಒತ್ತಡ ಹೇರುವ ವ್ಯಕ್ತಿಗಳು ಯಾರು? ಎಂಬ ಪ್ರಶ್ನೆ ಪೊಲೀಸರನ್ನು ಕಾಡುತ್ತಿದೆ.

ರಾಜ್ಯ ವೈದ್ಯಕೀಯ ಮಂಡಳಿಗೆ ಪತ್ರ: ‘ಬಾಲಕಿ ವಂದನಾ ಸಾವಿಗೆ ಸಂಬಂಧಪಟ್ಟಂತೆ ಎಫ್‌ಎಸ್‌ಎಲ್‌ ವರದಿ ಬಂದಿದೆ. ವೈದ್ಯಕೀಯ ಅಭಿಪ್ರಾಯ ತಿಳಿಸಲು ಎಚ್‌ಒಡಿ ಹಿಂದೇಟು ಹಾಕುತ್ತಿದ್ದಾರೆ. ಇನ್ನೊಮ್ಮೆ ಅವರನ್ನು ವಿನಂತಿಸಲಾಗುವುದು. ಅವರು ಒಪ್ಪದಿದ್ದರೆ, ರಾಜ್ಯ ವೈದ್ಯಕೀಯ ಮಂಡಳಿಗೆ ಪತ್ರ ಬರೆಯುತ್ತೇವೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ವಂದನಾ ಕೈ ಮೇಲೆ ಗುಳ್ಳೆಗಳಾಗಿದ್ದವು. ಶಸ್ತ್ರಚಿಕಿತ್ಸೆ ಮಾಡಬೇಕೆಂದು ಹೇಳಿದ್ದ ಚಿರಾಯು ಆಸ್ಪತ್ರೆಯವರು, ಇಂಜೆಕ್ಷನ್ ಸಮೇತ ಸಲಾಯಿನ್ ಹಚ್ಚಿದ್ದರು. ಇದಾದ ನಂತರ, ವಂದನಾ ವಿಚಿತ್ರವಾಗಿ ವರ್ತಿಸಿ ಪ್ರಜ್ಞೆ ಕಳೆದುಕೊಂಡಿದ್ದರು. ಗಾಬರಿಗೊಂಡ ಪೋಷಕರು, ಮತ್ತೊಂದು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಬಾಲಕಿ ಮೃತಪಟ್ಟಿರುವುದಾಗಿ ಅಲ್ಲಿಯ ವೈದ್ಯರು ಹೇಳಿದ್ದರು. ಬಳಿಕವೇ ಪೋಷಕರು ಠಾಣೆಗೆ ದೂರು ನೀಡಿದ್ದರು. ಯುಡಿಆರ್ (ಅಸಹಜ ಸಾವು) ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದೇವೆ. ವೈದ್ಯಕೀಯ ವರದಿ ಆಧರಿಸಿಯೇ ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ದಾಖಲಿಸಬೇಕಿದೆ. ಹೀಗಾಗಿ, ವರದಿ ಮಹತ್ವದ್ದಾಗಿದೆ. ಅದನ್ನು ಪಡೆಯಲು ಪ್ರಯತ್ನಿಸುತ್ತಿದ್ದೇವೆ’ ಎಂದು ಅವರು ಹೇಳಿದರು.

ಸತ್ಯಾಂಶ ಹೊರಬರಲಿ: ‘ಮಗಳ ಸಾವಿನ ಪ್ರಕರಣವನ್ನು ದಿಕ್ಕು ತಪ್ಪಿಸುವ ಯತ್ನ ನಡೆಯುತ್ತಿದೆ. ವೈದ್ಯಕೀಯ ವರದಿ ತಿರುಚುವ ಕೆಲಸವಾಗುತ್ತಿದೆ. ಈ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ನಿಖರ ವೈದ್ಯಕೀಯ ವರದಿ ಪಡೆದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಬಾಲಕಿಯ ಪೋಷಕರು ಒತ್ತಾಯಿಸಿದ್ದಾರೆ. 

ಎಚ್‌ಒಡಿ ಜವಾಬ್ದಾರಿ; ಪರಿಶೀಲನೆ

ಯಾವುದೇ ಅಪರಾಧ ಪ್ರಕರಣಗಳಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರು ಅಲಭ್ಯರಾದರೆ ವರದಿ ಹಾಗೂ ಅಭಿಪ್ರಾಯ ತಿಳಿಸುವ ಜವಾಬ್ದಾರಿ ಆ ವಿಭಾಗದ ಮುಖ್ಯಸ್ಥರದ್ದಾಗಿರುತ್ತದೆ. ಬಾಲಕಿ ವಂದನಾ ಪ್ರಕರಣದ ಬಗ್ಗೆ ಪರಿಶೀಲನೆ ನಡೆಸುತ್ತೇನೆ’ ಎಂದು ಹಾವೇರಿ ವೈದ್ಯಕೀಯ ಕಾಲೇಜಿನ ನಿರ್ದೇಶಕ ಪ್ರದೀಪಕುಮಾರ ಎಂ.ವಿ. ತಿಳಿಸಿದರು.

‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ‘ವೈದ್ಯರ ವೈದ್ಯಕೀಯ ಅಭಿಪ್ರಾಯದ ವರದಿ ಆಧರಿಸಿಯೇ ತಪ್ಪಿತಸ್ಥರ ಮೇಲೆ ಮುಂದಿನ ಕಾನೂನು ಕ್ರಮವಾಗುತ್ತದೆ. ಹೀಗಾಗಿ ಅಭಿಪ್ರಾಯ ಮಹತ್ವದ್ದು’ ಎಂದರು. ‘ಎಚ್‌ಒಡಿ ಅವರು ಅಭಿಪ್ರಾಯ ತಿಳಿಸಬಹುದು. ಬೇರೆ ಕಾಲೇಜಿನಿಂದ ಅಭಿಪ್ರಾಯ ಪಡೆಯುವಂತೆಯೂ ಹೇಳಬಹುದು. ಇದು ಸಾಧ್ಯವಾಗದಿದ್ದರೆ ಲಿಖಿತವಾಗಿ ಬರೆದುಕೊಡಬೇಕು. ಈ ಪ್ರಕರಣದಲ್ಲಿ ಏನಾಗಿದೆ ? ಎಂಬುದನ್ನು ತಿಳಿದುಕೊಳ್ಳುವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.