ಹಾವೇರಿ: ಉತ್ತರ ಕರ್ನಾಟಕದ ಜಿಲ್ಲೆಗಳಿಂದ ರಾಜಧಾನಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ‘ವಂದೇ ಭಾರತ’ ರೈಲು, ಹಾವೇರಿಯ ಜನರಿಗೆ ‘ಪ್ರಯಾಣದ ಶಕ್ತಿ’ ತುಂಬಿದೆ. ಸ್ಥಳೀಯ ಜನರ ಬಹುದಿನಗಳ ಬೇಡಿಕೆಯಂತೆ ಹಾವೇರಿಯ ಮೈಲಾರ ಮಹದೇವಪ್ಪ ನಿಲ್ದಾಣದಲ್ಲಿ ‘ವಂದೇ ಭಾರತ್’ ರೈಲು ನಿಲುಗಡೆಯಾಗುತ್ತಿದೆ. ನಾಲ್ಕು ತಿಂಗಳ ಅವಧಿಯಲ್ಲಿ ಹಾವೇರಿಯಿಂದ 1,937 ಮಂದಿ ಪ್ರಯಾಣ ಮಾಡಿದ್ದಾರೆ.
ಹಾವೇರಿಯಿಂದ ರಾಜಧಾನಿ ಬೆಂಗಳೂರಿಗೆ ಹೋಗಲು ಸಾಕಷ್ಟು ರೈಲುಗಳಿದ್ದರೂ ಹೆಚ್ಚಿನ ಸಮಯದ ಅವಶ್ಯಕತೆಯಿತ್ತು. ಇದೇ ಸಂದರ್ಭದಲ್ಲಿಯೇ ಧಾರವಾಡದಿಂದ ಬೆಂಗಳೂರಿಗೆ ವಂದೇ ಭಾರತ್ ರೈಲು ಆರಂಭವಾಯಿತು. ಈ ರೈಲನ್ನು ಏಪ್ರಿಲ್ 11ರಿಂದ ಹಾವೇರಿ ನಿಲ್ದಾಣದಲ್ಲಿ ನಿಲುಗಡೆ ಮಾಡಲಾಗುತ್ತಿದ್ದು, ಸ್ಥಳೀಯ ಜನರ ಸಂಚಾರಕ್ಕೆ ಅನುಕೂಲವಾಗಿದೆ.
ನಿಲುಗಡೆಯ ಮೊದಲ ದಿನವೇ ಜನರಿಂದ ಅದ್ಧೂರಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆರಂಭದ ದಿನಗಳಲ್ಲಿ, ‘ರೈಲು ಹೇಗಿದೆ ನೋಡೋಣ?’ ಎಂಬ ಆಸೆಯಿಂದ ಹಲವರು ಪರೀಕ್ಷಾರ್ಥವಾಗಿ ಪ್ರಯಾಣ ಮಾಡಿದರು. ಈಚಿನ ದಿನಗಳಲ್ಲಿ ರಾಜಧಾನಿಯಲ್ಲಿ ತುರ್ತು ಕೆಲಸಗಳಿದ್ದರೆ, ವಂದೇ ಭಾರತ್ ರೈಲಿನಲ್ಲಿ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಧಾರವಾಡ, ಹುಬ್ಬಳ್ಳಿ ಕಡೆಯಿಂದಲೂ ವಂದೇ ಭಾರತ್ ಮೂಲಕ ಹಾವೇರಿಗೆ ಬಂದು ಇಳಿಯುವವರು ಹೆಚ್ಚಾಗಿದ್ದಾರೆ. ಜೊತೆಗೆ, ಹಾವೇರಿಯಿಂದಲೂ ಹುಬ್ಬಳ್ಳಿ–ಧಾರವಾಡಕ್ಕೆ ಹೋಗುವವರು ಸಹ ಇದೇ ರೈಲು ಬಳಸುತ್ತಿದ್ದಾರೆ.
ಹಾವೇರಿಯಲ್ಲಿ ವಂದೇ ಭಾರತ್ ರೈಲು ನಿಲುಗಡೆಯಾದ ನಂತರ, ಎಷ್ಟು ಜನ ಪ್ರಯಾಣಿಸಿದ್ದಾರೆ ? ಹಾಗೂ ಎಷ್ಟು ಆದಾಯ ಬಂದಿದೆ ? ಎಂಬ ಬಗ್ಗೆ ರೈಲ್ವೆ ಇಲಾಖೆ ಮಾಹಿತಿ ಸಂಗ್ರಹಿಸಿದೆ. ಇದರ ಪ್ರಕಾರ, ಏಪ್ರಿಲ್ 11ರಿಂದ ಜುಲೈ 31ರ ಅವಧಿಯಲ್ಲಿ ಹಾವೇರಿಯ 1,937 ಮಂದಿ ರೈಲಿನಲ್ಲಿ (ನಿರ್ಗಮನ) ಪ್ರಯಾಣಿಸಿದ್ದಾರೆ. ಇದರಿಂದ ಇಲಾಖೆಗೆ ₹ 21.74 ಲಕ್ಷ ಆದಾಯ ಬಂದಿದೆ.
ರೈಲಿನಲ್ಲಿ ಬಂದವರು ಹೆಚ್ಚು: ಬೆಂಗಳೂರಿನಿಂದ ಹಾಗೂ ಧಾರವಾಡದಿಂದ ಹೆಚ್ಚಿನ ಪ್ರಯಾಣಿಕರು ಹಾವೇರಿ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಹೋದವರ ಸಂಖ್ಯೆ ಸ್ವಲ್ಪ ಕಡಿಮೆಯಿದೆ.
‘ಹಾವೇರಿಯಿಂದ 1,937 ಪ್ರಯಾಣಿಸಿದರೆ, ಬೆಂಗಳೂರು ಹಾಗೂ ಧಾರವಾಡದಿಂದ 2,199 ಮಂದಿ ಹಾವೇರಿ ನಿಲ್ದಾಣಕ್ಕೆ ಬಂದು (ಆಗಮನ) ಇಳಿದಿದ್ದಾರೆ. ಆಗಮನ ಹಾಗೂ ನಿರ್ಗಮನದ ಲೆಕ್ಕವನ್ನು ಪರಿಶೀಲಿಸಿದಾಗ ಆದಾಯದ ಮೊತ್ತ ₹ 50 ಲಕ್ಷ ಮೀರಬಹುದು. ಆಗಮನದ ಲೆಕ್ಕ ಆಯಾ ನಿಲ್ದಾಣದಲ್ಲಿ ಲಭ್ಯವಾಗುತ್ತದೆ’ ಎಂದು ರೈಲ್ವೆ ಇಲಾಖೆ ಮೂಲಗಳು ಹೇಳಿವೆ.
‘ಬೆಂಗಳೂರಿನಿಂದ ಹಾವೇರಿಗೆ ಬಂದವರ ಸಂಖ್ಯೆ ಹೆಚ್ಚಿದೆ. ಜೊತೆಗೆ, ವಂದೇ ಭಾರತ್ ರೈಲಿನ ಅನುಭವ ಹೇಗಿದೆ ಎಂಬುದನ್ನು ತಿಳಿಯಲು ಹಾವೇರಿಯಿಂದ ಹುಬ್ಬಳ್ಳಿ– ಧಾರವಾಡಕ್ಕೂ ಜನರು ಪ್ರಯಾಣಿಸಿದ್ದಾರೆ. ಅವರಲ್ಲಿ ಬಹುಪಾಲು ಜನರು, ವಾಪಸು ಬೇರೆ ರೈಲು ಹಾಗೂ ಬಸ್‌ನಲ್ಲಿ ಹಾವೇರಿಗೆ ಬಂದಿದ್ದಾರೆ’ ಎಂದು ತಿಳಿಸಿವೆ.
‘ಧಾರವಾಡ–ಬೆಂಗಳೂರು ರೈಲು ಮಾತ್ರ ಹಾವೇರಿಯಲ್ಲಿ ನಿಲುಗಡೆಯಾಗುತ್ತಿತ್ತು. ಇದೀಗ ಬೆಳಗಾಗಿ–ಬೆಂಗಳೂರು ವಂದೇ ಭಾರತ್ತ ರೈಲು ಸಹ ಹೊಸದಾಗಿ ಆರಂಭವಾಗಿದೆ. ಈ ರೈಲು ಸಹ ಹಾವೇರಿ ನಿಲ್ದಾಣದಲ್ಲಿ ನಿಲ್ಲಲಿದೆ’ ಎಂದು ಹೇಳಿವೆ.
ಹಾವೇರಿಯಲ್ಲಿ ವಂದೇ ಭಾರತ ರೈಲು ನಿಲ್ಲಿಸಬೇಕೆಂಬ ಒತ್ತಡವಿತ್ತು. ಇದಕ್ಕೆ ಸ್ಪಂದಿಸಿದ್ದ ಪ್ರಧಾನಿಯವರು ಏಪ್ರಿಲ್ 11ರಂದು ಒಂದು ರೈಲು ನಿಲ್ಲಿಸಿದ್ದರು. ಈಗ ಮತ್ತೊಂದು ರೈಲಿನ ನಿಲುಗಡೆಗೆ ಅವಕಾಶ ಕಲ್ಪಿಸಿದ್ದಾರೆಬಸವರಾಜ ಬೊಮ್ಮಾಯಿ, ಸಂಸದ
ದಾವಣಗೆರೆಯಲ್ಲಿ ₹ 1.34 ಕೋಟಿ ಆದಾಯ
ಹಾವೇರಿ ಜಿಲ್ಲೆಗೆ ಹೊಂದಿಕೊಂಡಿರುವ ದಾವಣಗೆರೆಯಲ್ಲಿ ವಂದೇ ಭಾರತ್ ರೈಲು ನಿಲುಗಡೆಯಾಗುತ್ತಿದೆ. ಏಪ್ರಿಲ್ 1ರಿಂದ ಜುಲೈ 31ರವರೆಗೆ ದಾವಣಗೆರೆಯ 16874 ಮಂದಿ ರೈಲು (ನಿರ್ಗಮನ) ಬಳಸಿದ್ದಾರೆ. ಇದರಿಂದ ಇಲಾಖೆಗೆ ₹ 1.34 ಕೋಟಿ ಆದಾಯ ಬಂದಿದೆ. ‘ವಂದೇ ಭಾರತ್ ರೈಲಿನ ಮೂಲಕ ದಾವಣಗೆರೆಗೆ 11414 ಮಂದಿ (ಆಗಮನ) ಬಂದಿಳಿದಿದ್ದಾರೆ. ಇದರ ಲೆಕ್ಕ ಆಯಾ ರೈಲು ನಿಲ್ಲಾಣಗಳಲ್ಲಿ ಸಿಗುತ್ತದೆ‘ ಎಂದು ಇಲಾಖೆ ಮೂಲಗಳು ಹೇಳಿವೆ.
ಬೆಳಗಾವಿ–ಬೆಂಗಳೂರು ರೈಲಿಗೆ ಸ್ವಾಗತ
ಬೆಳಗಾವಿ ಜನರ ಬಹುದಿನಗಳ ಬೇಡಿಕೆಯಂತೆ ಬೆಳಗಾವಿ–ಬೆಂಗಳೂರು ನಡುವೆ ವಂದೇ ಭಾರತ್ ರೈಲು ಆರಂಭಿಸಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರೈಲಿನ ಸಂಚಾರಕ್ಕೆ ಬೆಂಗಳೂರಿನಲ್ಲಿ ಭಾನುವಾರ ಚಾಲನೆ ನೀಡಿದರು. ಅದೇ ರೈಲಿಗೆ ಹಾವೇರಿಯಲ್ಲೂ ಭವ್ಯ ಸ್ವಾಗತ ಕೋರಲಾಯಿತು. ಬೆಂಗಳೂರಿನಿಂದ ಹಾವೇರಿ ನಿಲ್ದಾಣಕ್ಕೆ ಬಂದ ರೈಲಿಗೆ ಸಂಸದ ಬಸವರಾಜ ಬೊಮ್ಮಾಯಿ ಹಸಿರು ನಿಶಾನೆ ತೋರಿದರು. ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಡಿಆರ್‌ಎಂ ಮುದಿತ್ ಮಿತ್ತಲ್ ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ ಎಲ್. ಹೆಚ್ಚುವರಿ ಎಸ್‌ಪಿ ಲಕ್ಷ್ಮಣ ಶಿರಕೋಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.