ADVERTISEMENT

‘ಅಜಾತಶತ್ರು’ ಸಲೀಂಗೆ ವ್ಯಾಪಕ ಬೆಂಬಲ: ಮನೋಹರ ತಹಶೀಲ್ದಾರ್‌

ಹಾನಗಲ್‌ ಚುನಾವಣೆ ಗೆಲುವಿನಲ್ಲಿ ಸಲೀಂ ಪಾತ್ರ ಅಪಾರ: ಮಾಜಿ ಸಚಿವ ಮನೋಹರ ತಹಶೀಲ್ದಾರ್

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 11:07 IST
Last Updated 4 ಡಿಸೆಂಬರ್ 2021, 11:07 IST
ಹಾವೇರಿ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ‘ಸಲೀಂ ಅಹಮದ್ ಅವರು 40 ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ನಡೆದು ಬಂದ ದಾರಿ’ ಎಂಬ ಕಿರುಹೊತ್ತಿಗೆಯನ್ನು ಮಾಜಿ ಸಚಿವ ಮನೋಹರ ತಹಶೀಲ್ದಾರ ಬಿಡುಗಡೆ ಮಾಡಿದರು. ಎಂ.ನಾರಾಯಣಸ್ವಾಮಿ ಇದ್ದಾರೆ  –ಪ್ರಜಾವಾಣಿ ಚಿತ್ರ 
ಹಾವೇರಿ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ‘ಸಲೀಂ ಅಹಮದ್ ಅವರು 40 ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ನಡೆದು ಬಂದ ದಾರಿ’ ಎಂಬ ಕಿರುಹೊತ್ತಿಗೆಯನ್ನು ಮಾಜಿ ಸಚಿವ ಮನೋಹರ ತಹಶೀಲ್ದಾರ ಬಿಡುಗಡೆ ಮಾಡಿದರು. ಎಂ.ನಾರಾಯಣಸ್ವಾಮಿ ಇದ್ದಾರೆ  –ಪ್ರಜಾವಾಣಿ ಚಿತ್ರ    

ಹಾವೇರಿ: ‘ಹಾನಗಲ್‌ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಉಸ್ತುವಾರಿ ವಹಿಸಿಕೊಂಡಿದ್ದ ಸಲೀಂ ಅಹಮದ್‌ ಅವರು, ಕಾಂಗ್ರೆಸ್‌ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸಿ, ಶ್ರೀನಿವಾಸ ಮಾನೆ ಅವರಿಗೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು’ ಎಂದು ಮಾಜಿ ಸಚಿವ ಮನೋಹರ ತಹಶೀಲ್ದಾರ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಸಲೀ ಅಹಮದ್‌ ಅವರು ನ್ಯಾಷನಲ್‌ ಸ್ಟೂಡೆಂಟ್ಸ್‌ ಯೂನಿಯನ್‌ ಆಫ್‌ ಇಂಡಿಯಾ (ಎನ್‌ಎಸ್‌ಯುಐ) ಅಧ್ಯಕ್ಷರಾಗಿ, ಅಖಿಲ ಭಾರತ ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಯಾಗಿ, ವಿಧಾನ ಪರಿಷತ್‌ನ ಸರ್ಕಾರಿ ಮುಖ್ಯ ಸಚೇತಕರಾಗಿ, ಎರಡು ಬಾರಿ ವಿಧಾನ ಪರಿಷತ್‌ ಸದಸ್ಯರಾಗಿ ಹಲವಾರು ಹುದ್ದೆಗಳಲ್ಲಿ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ’ ಎಂದರು.

ದಕ್ಷ ಸಂಘಟಕ:

ADVERTISEMENT

40 ವರ್ಷಗಳಿಂದ ಕಾಂಗ್ರೆಸ್‌ ಪಕ್ಷದ ನಿಷ್ಠಾವಂತ ಮುಖಂಡರಾಗಿರುವ ಸಲೀಂ ಅಹಮದ್‌ ಅವರು ‘ಅಜಾತಶತ್ರು’ ಎನಿಸಿದ್ದಾರೆ. ನೆಹರೂ ಕುಟುಂಬಕ್ಕೆ ಹತ್ತಿರದವರಾಗಿದ್ದು, ಪಕ್ಷ ಕೊಟ್ಟ ಎಲ್ಲ ಜವಾಬ್ದಾರಿಗಳನ್ನು ದಕ್ಷತೆಯಿಂದ ನಿರ್ವಹಿಸಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡುತ್ತಿರುವ ಅವರ ಸಾಧನೆ, ಪಕ್ಷ ಸಂಘಟನೆ ಎಲ್ಲವನ್ನೂ ಪರಿಗಣಿಸಿ ಧಾರವಾಡ ಕ್ಷೇತ್ರದಿಂದ ವಿಧಾನ ಪರಿಷತ್‌ ಸದಸ್ಯರಾಗಿ ಸ್ಪರ್ಧಿಸಲು ಪಕ್ಷದ ವರಿಷ್ಠರು ಟಿಕೆಟ್‌ ನೀಡಿದ್ದಾರೆ ಎಂದು ಹೇಳಿದರು.

ಮಂತ್ರಿಯಾಗುವ ಯೋಗ:

ಸಲೀಂ ಅಹಮದ್‌ ಅವರು ವಿಧಾನ ಪರಿಷತ್‌ ಸದಸ್ಯರಾಗಿದ್ದ ಅವಧಿಯಲ್ಲಿಹಾವೇರಿ, ಗದಗ, ಧಾರವಾಡ ಜಿಲ್ಲೆಗಳನ್ನು ನೋಡಲ್‌ ಜಿಲ್ಲೆಗಳನ್ನಾಗಿ ಪರಿಗಣಿಸಿ, ಹೆಚ್ಚಿನ ಅನುದಾನ ನೀಡಿದ್ದಾರೆ. 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದು ಸರ್ಕಾರ ರಚಿಸಲಿದ್ದು, ಸಲೀಂ ಅವರಿಗೆ ಮಂತ್ರಿಯಾಗುವ ಅವಕಾಶವೂ ಇದೆ. ಹೀಗಾಗಿ ಸಲೀಂ ಅಹಮದ್‌ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಬೇಕು ಎಂದು ಮನವಿ ಮಾಡಿದರು.

ನವಚೇತನ ತಂದ ಹಾನಗಲ್‌ ಫಲಿತಾಂಶ:

ವಿಧಾನ ಪರಿಷತ್‌ ಸದಸ್ಯ ಎಂ.ನಾರಾಯಣಸ್ವಾಮಿ ಮಾತನಾಡಿ, ‘ಡಿ.10ರಂದು ನಡೆಯುವ ಚುನಾವಣೆಯಲ್ಲಿ ಯುವ ನೇತಾರರಾದ ಸಲೀಂ ಅಹಮದ್‌ ಅವರಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ ಆಶೀರ್ವದಿಸಬೇಕು. ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರದವರೆಗೆ ಛಾಪು ಮೂಡಿಸಿರುವ ಸಲೀಂ ಅವರು ಗ್ರಾ.ಪಂ. ಸದಸ್ಯರು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಹಾನಗಲ್‌ ಉಪಚುನಾವಣೆ ಫಲಿತಾಂಶ ಕಾಂಗ್ರೆಸ್‌ಗೆ ನವಚೇತನ ತಂದಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡರಾದ ಜಯರಾಮ್‌, ವಿ.ಎಸ್‌.ಆರಾಧ್ಯ, ಶ್ರೀನಿವಾಸ ಹಳ್ಳಳ್ಳಿ, ಜಮೀರ್‌ ಜಿಗರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.