ADVERTISEMENT

‘ಹೈ–ಟೆನ್ಶನ್’ನಿಂದ ಸ್ಥಳೀಯರ ನೆಮ್ಮದಿ ದೂರ

ಸ್ಥಳಾಂತರಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ

ಎಸ್.ಎಸ್.ನಾಯಕ
Published 9 ಜುಲೈ 2019, 19:30 IST
Last Updated 9 ಜುಲೈ 2019, 19:30 IST
ಆತಂಕ ಸೃಷ್ಟಿಸಿರುವ ಹೈಟೆನ್ಶನ್ ವಿದ್ಯುತ್ ತಂತಿ
ಆತಂಕ ಸೃಷ್ಟಿಸಿರುವ ಹೈಟೆನ್ಶನ್ ವಿದ್ಯುತ್ ತಂತಿ   

ಕುಮಾರಪಟ್ಟಣ: ಮನೆಗಳ ಮೇಲೆ ಹತ್ತಿದರೆ ಸಾಕು, ಕೈಗೆಟುಕುವ ಅಂತರದಲ್ಲಿರುವ66ಕೆವಿ ಹೈಟೆನ್ಶನ್ ವಿದ್ಯುತ್ ತಂತಿ. ಅದರ ಸೆಳೆತಕ್ಕೆ ಈಗಾಗಲೇ ಮೂವರು ಮೃತಪಟ್ಟು, ಇನ್ನೊಬ್ಬ ಮಹಿಳೆ ಗಾಯಗೊಂಡಿದ್ದಾರೆ. ಅವಘಡಗಳು ಮರುಕಳಿಸುತ್ತಿರುವ ಕಾರಣಇಲ್ಲಿನ ನಿವಾಸಿಗಳು ನೆಮ್ಮದಿ ಕಳೆದುಕೊಂಡು ಬದುಕುತ್ತಿದ್ದಾರೆ.‌

ಇಂತಹ ಆತಂಕ ಸೃಷ್ಟಿಯಾಗಿರುವುದು ರಾಣೆಬೆನ್ನೂರು ತಾಲ್ಲೂಕಿನ ಕೋಡಿಯಾಲ ಹೊಸಪೇಟೆ ಗ್ರಾಮದಲ್ಲಿ. ವಾಣಿಜ್ಯ ಉದ್ದೇಶಕ್ಕಾಗಿ ನಿರ್ಮಿಸಿರುವ ಹೈಟೆನ್ಶನ್ ವಿದ್ಯುತ್ ಸಂಪರ್ಕದಿಂದ, ‘ಗ್ರಾಸಿಂ’ ಕಂಪನಿ ಪ್ರಯೋಜನ ಪಡೆಯುತ್ತಿದೆ. ಎತ್ತರ ಕಡಿಮೆ ಇರುವ ಕಾರಣ ಪದೇ ಪದೇ ಅವಘಡಗಳು ಸಂಭವಿಸುತ್ತಿವೆ.

‘ಕಂಪನಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ವೇಳೆಯಲ್ಲಿ ಜನಸಂಖ್ಯೆ ಕಡಿಮೆ ಇತ್ತು. ಜಾಗ ವಿಶಾಲವಾಗಿತ್ತು. ಒಂದೆರಡು ಮನೆಗಳು ಮಾತ್ರ ಇಲ್ಲಿದ್ದವು. ಆದರೆ ಊರು ಬೆಳೆದಂತೆ, ವಿದ್ಯುತ್ ತಂತಿ ಅಕ್ಕ ಪಕ್ಕದಲ್ಲಿ (ಬಸವೇಶ್ವರ ನಗರ, ವಾಗೀಶ ನಗರ, ವಿನಾಯಕ ನಗರದಲ್ಲಿ) ಒತ್ತೊತ್ತಾಗಿ ಮನೆಗಳನ್ನು ನಿರ್ಮಿಸಲಾಗಿದೆ. ಮಹಡಿಗೆ ಹೋಗಿ ಇಳಿಯುವಾಗ ಸ್ವಲ್ಪ ಮೈಮರೆತರೂ ಅಪಾಯ ಕಟ್ಟಿಟ್ಟ ಬುತ್ತಿ’ ಎನ್ನುತ್ತಾರೆ ಗ್ರಾಮದ ಹಿರಿಯರಾದ ಅಡಿವೆಪ್ಪ ಮರಡೂರ ಅವರು.

ADVERTISEMENT

‘ದುರಂತ ಸಂಭವಿಸಿದಾಗ ಅನೇಕ ಸಮಸ್ಯೆಗಳಿಗೆ ಕಾರಣವಾದ ವಿದ್ಯುತ್ ಸಂಪರ್ಕವನ್ನು ಬೇರೆಡೆಗೆ ಸ್ಥಳಾಂತರಿಸಬೇಕೆಂದು ಸಂಬಂಧಪಟ್ಟ ಇಲಾಖೆ, ಗ್ರಾಮ ಪಂಚಾಯ್ತಿ ಹಾಗೂ ಜನಪ್ರತಿನಿಧಿಗಳು ಚರ್ಚೆ ನಡೆಸಿದ್ದರು. ಆ ನಂತರ ಸುಮ್ಮನಾಗಿದ್ದಾರೆ. ಈಗ ಅದನ್ನು ಸ್ಥಳಾಂತರ ಮಾಡಲು ಮೀನಾಮೇಷ ಎಣಿಸುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘2014ರಲ್ಲಿ ಮನೆ ಕಟ್ಟುವಾಗ ಕಾರ್ಮಿಕರೊಬ್ಬರು ಬಲಿಯಾದರು. ಅದರಿಂದ ನಮಗೆ ತೀವ್ರ ನಷ್ಟ ಉಂಟಾಯಿತು. ಈಗಲೂ ವಿದ್ಯುತ್ ಸಂಪರ್ಕವಿಲ್ಲದೆ, ಬ್ಯಾಟರಿ ಆಸರೆಯಲ್ಲಿ ಕಳೆಯುತ್ತಿದ್ದೇವೆ. ಅಪಾಯಕಾರಿ ತಂತಿಯನ್ನು ತೆಗೆಯಿರಿ ಎಂದು ಅಲೆಯದ ಕಚೇರಿಯಿಲ್ಲ. ಅಧಿಕಾರಿಗಳು ಬಂದು ಸಮೀಕ್ಷೆ ಮಾಡಿ ಆರು ತಿಂಗಳು ಕಳೆದರೂ ಪ್ರಗತಿ ಮಾತ್ರ ಶೂನ್ಯ’ ಎಂದು ಜಿ. ಗೌರಮ್ಮ ತನ್ನ ಅಸಹಾಯಕತೆ ತೋಡಿಕೊಂಡರು.

‘ಗ್ರಾಸಿಂ ಕಂಪನಿಯೊಂದಿಗೆ ಮತ್ತೊಮ್ಮೆ ಮಾತನಾಡಿ ಸ್ಥಳಾಂತರಿಸಲು ಸಹಕರಿಸುವಂತೆ ಕೋರುತ್ತೇನೆ’ ಎಂದು ಪಿಡಿಒ ಪೂರ್ಣಿಮಾ.ವಿ ಭರವಸೆ ನೀಡಿದ್ದಾರೆ. ಆದರೆ, ‘ಆರು ತಿಂಗಳ ಹಿಂದೆಯೇ ಸರ್ವೆ ಕಾರ್ಯ ಮುಗಿಸಲಾಗಿದೆ. 2–3 ಹೊಸ ಮಾರ್ಗ ಗುರುತಿಸಿ ಸಮಗ್ರ ವರದಿಯನ್ನು ಹುಬ್ಬಳ್ಳಿ ಕೆಪಿಟಿಸಿಎಲ್ ಕಚೇರಿಗೆ ಸಲ್ಲಿಸಿದ್ದೇವೆ’ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿಮಲಾ ಹೇಳುತ್ತಾರೆ.

‘ಶಾಸಕರು ಸೇರಿದಂತೆ ಯಾರೊಬ್ಬರು ನಮ್ಮ ಕಷ್ಟ ಕೇಳಿಲ್ಲ. ನಾನು ಅನುಭವಿಸಿದ ನೋವು ಮತ್ತೊಬ್ಬರಿಗೆ ತಟ್ಟುವ ಮುನ್ನ ಊರ ಮಧ್ಯೆ ಇರುವ ವಿದ್ಯುತ್ ಸಂಪರ್ಕ ಕಡಿತಗೊಳಿಸಬೇಕು’ ಎಂಬುದು ಗಾಯಗೊಂಡ ಮಲ್ಲಮ್ಮ ಬನ್ನಿಕೊಪ್ಪ ಅವರ ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.